ಪುತ್ತೂರು ಮಾಯ್ದೇ ದೇವುಸ್ ಚರ್ಚಿನ ಅಧೀನದಲ್ಲಿರುವ ಎಳ್ಮುಡಿ ಹತ್ತಿರದ ನವೀಕೃತ ಸ್ಮಶಾನ ಹಾಗೂ ಪ್ರಾರ್ಥನಾ ಮಂದಿರದ ಉದ್ಘಾಟನೆ ಹಾಗೂ ಆಶೀರ್ವಚನ ಮಾ.25ರಂದು ಬಲಿ ಪೂಜೆಯೊಂದಿಗೆ ನೆರವೇರಿತು.
ಕಾರ್ಯಕ್ರಮದ ಪ್ರಧಾನ ಧರ್ಮಗುರು ಮಾಕ್ಸಿಮ ಏಲ್ ನೋರೊನ್ಹಾ ರಿಬ್ಬನ್ ಕತ್ತರಿಸುವ ಮುಖಾಂತರ ಪ್ರಾರ್ಥನಾ ಮಂದಿರ ಉದ್ಘಾಟನೆ ಮಾಡಿ ತದನಂತರ ಬಲಿ ಪೂಜೆಯನ್ನು ಅರ್ಪಿಸಿದರು. ಬಳಿಕ ಮಾತನಾಡಿ ಪ್ರತಿಯೊಬ್ಬ ಕ್ರೈಸ್ತನು ತನ್ನ ಕಷ್ಟಗಳನ್ನು ಎದುರಿಸಿ ಮೆಟ್ಟಿ ನಿಲ್ಲಲು ಶಕ್ತಿಯನ್ನು ತುಂಬುವುದೇ ಶಿಲುಬೆ, ನಮಗೆಲ್ಲರಿಗೂ ದೇವರ ಸಂಗಡ ಬದುಕಲು ಉತ್ತಮ ಜೀವನ ಬಹುಮುಖ್ಯ. ಇದಕ್ಕಾಗಿ ಮನುಷ್ಯನು ಕೆಟ್ಟ ಚಟಗಳಿಂದ ತನ್ನ ಜೀವನವನ್ನು ನಾಶಗೊಳಿಸಬಾರದು ಎಂದರು.
ಬಲಿ ಪೂಜೆಯು ಪ್ರಾರಂಭಗೊಳ್ಳುವ ಮೊದಲು ಪುತ್ತೂರು ಚರ್ಚಿನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮಗುರು ಕೆವಿನ್ ಲಾರೆನ್ಸ್ ಡಿಸೋಜಾ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾ, ಕಾರ್ಯದರ್ಶಿ ಎವ್ಲಿನ್ ಡಿಸೋಜಾರವರು ಹೂಗುಚ್ಛವನ್ನು, ಕಾರ್ಯಕ್ರಮದ ಪ್ರಧಾನ ಧರ್ಮಗುರು ಮಾಕ್ಸಿಮ ಏಲ್ ನೋರೊನ್ಹಾರವರಿಗೆ ನೀಡಿ ಸ್ವಾಗತ ಕೋರಿದರು.
ಪುತ್ತೂರು ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್, ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕರು ಸ್ಟ್ಯಾನಿ ಪಿಂಟೊ, ಸಂತ ಫಿಲೋಮಿನ ಪದವಿ ಕಾಲೇಜು ಪ್ರಾಂಶುಪಾಲ ವಂದನೀಯ ಪ್ರಕಾಶ್ ಮೊಂತೆರೋ, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ, ಡೆನ್ಜಿಲ್ ಲೋಬೋ ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು. ಚರ್ಚ್ ಪಾಲನ ಸಮಿತಿ ಮಂಡಳಿಯ ಕಾರ್ಯದರ್ಶಿ ಎವ್ಲಿನ್ ಡಿ.ಸೋಜಾರವರು ನವೀಕರಿಸಿದ ಪ್ರಾರ್ಥನಾ ಮಂದಿರಕ್ಕೆ ಉದಾರ ದೇಣಿಗೆ ನೀಡಿದವರ ಹೆಸರು ವಾಚಿಸಿದರು. ಸಹ ಭೋಜನವನ್ನು ಏರ್ಪಡಿಸಲಾಗಿತ್ತು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾ ಸಮಿತಿಯ ಸದಸ್ಯರು ಸಹಕರಿಸಿದರು.