ಮಂತ್ರಿ ಅಂಗಾರರ ನೇತೃತ್ವದಲ್ಲಿ ಸುಳ್ಯದ ಮೀಸಲಾತಿ ರೊಟೇಶನ್‌ನಲ್ಲಿ ಬದಲಾವಣೆ ಆಗಬೇಕು

0

ಸುಳ್ಯವನ್ನು ಜನರಲ್ ಸೀಟು ಮಾಡಿಸಿ ಅಂಗಾರರು ಗೆದ್ದು ಬಂದು ತಮ್ಮ ಸಾಧನೆ ಮೆರೆಯಬೇಕು.

ಸುಳ್ಯ 1952ರಿಂದಲೇ ಮೀಸಲಾತಿ ಕ್ಷೇತ್ರವಾಗಿದೆ. 10 ವರ್ಷ ಪರಿಶಿಷ್ಟ ಪಂಗಡವಾಗಿದ್ದು, ನಂತರ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿದೆ. ಇನ್ನೂ ಅದೇ ಕ್ಷೇತ್ರವಾಗಿ ಮುಂದುವರಿಯಲಿದೆ. ನಾವು ಬಹಳ ವರ್ಷಗಳ ಹಿಂದೆ ಈ ವಿಷಯವನ್ನು ಕೈಗೆತ್ತಿಕೊಂಡು ರೊಟೇಶನ್‌ನಲ್ಲಿ ಕ್ಷೇತ್ರದ ಬದಲಾವಣೆಗೆ ಪ್ರಯತ್ನಿಸಿದ್ದೇವೆ.
ಕೋರ್ಟ್‌ಗೆ ಹೋದರೂ ಪ್ರಯೋಜವಾಗುವುದಿಲ್ಲ. ಡಿ.ಲಿಮಿಟೇಶನ್ ಕಮಿಟಿಯಲ್ಲಿ ನಿರ್ಣಯವಾಗಬೇಕು ಎಂಬ ಕಾರಣಕ್ಕೆ ನೆನೆಗುದಿಗೆ ಬಿದ್ದಿದೆ. ಸುಳ್ಯದ ಮೀಸಲಾತಿಯು ಸುಳ್ಯ ಕ್ಷೇತ್ರಕ್ಕೇ ನೀಡಿದ್ದಲ್ಲ. ಅದು ಇಡೀ ಜಿಲ್ಲೆಯ ಪರಿಶಿಷ್ಟ ಜಾತಿಗಾಗಿ ಸುಳ್ಯದಲ್ಲಿ ಕಾದಿರಿಸಿದ ಕ್ಷೇತ್ರವಾಗಿದೆ. ಇಲ್ಲಿ ಪರಿಶಿಷ್ಟ ಜಾತಿಯವರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಜಿಲ್ಲೆಯ ಇತರ ಕ್ಷೇತ್ರಗಳಲ್ಲೂ ಅವರ ಸಂಖ್ಯೆ ಗಣನೀಯವಾಗಿ ಇದೆ. ಸುಳ್ಯದಲ್ಲಿ ಗೌಡರ ಸಂಖ್ಯೆ ಜಾಸ್ತಿ ಇದ್ದುದರಿಂದ ಮತ್ತು ಅವರುಗಳು ರೆಬೆಲ್ ನಾಯಕರು ಆಗಿ ಇದ್ದುದರಿಂದ ಜಿಲ್ಲೆಯ ನಾಯಕರು ಗೌಡರಿಗೆ ಒಂದು ಸ್ಥಾನ ತಪ್ಪಲಿ ಎಂಬ ಕಾರಣಕ್ಕೆ ಸುಳ್ಯವನ್ನು ರಿಸರ್ವ್ ಮಾಡಿದ್ದರು ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ ಅದು ಈಗ ಮುಖ್ಯವಲ್ಲ. ಜಿಲ್ಲೆಗಾಗಿ ಈ ಕ್ಷೇತ್ರ ಮೀಸಲಾತಿ ಕ್ಷೇತ್ರವಾಗಿರುವುದರಿಂದ ರೊಟೇಶನ್‌ನಲ್ಲಿ ಜಿಲ್ಲೆಯ ಇತರ ಕೇಂದ್ರಗಳಿಗೆ ಹೋಗಬೇಕು ಇದು ಜನರಲ್ ಕೇಂದ್ರವಾಗಬೇಕು. ಪಂಚಾಯತ್ ಮತ್ತು ಪುರಸಭೆಗಳಲ್ಲಿ, ತಾ.ಪಂ, ಜಿ.ಪಂ.ಗಳಲ್ಲಿ ಸ್ಥಾನಗಳು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ರೊಟೇಶನ್‌ನಲ್ಲಿ ಬದಲಾಗುತ್ತಿರುವಂತೆ ಇಲ್ಲಿಯೂ ಬದಲಾವಣೆಯಾಗಬೇಕು, ಇತರ ಕ್ಷೇತ್ರಗಳಲ್ಲಿರುವ ಪರಿಶಿಷ್ಟ ಜಾತಿಯವರಿಗೂ ಅವರವರ ಕ್ಷೇತ್ರಕ್ಕೆ ಮೀಸಲಾತಿ ದೊರಕಿ ಅಲ್ಲಿ ಸ್ಪರ್ಧಿಸಲು ಅವಕಾಶ ಸಿಗಬೇಕು ಎಂಬುವುದು ನ್ಯಾಯಯುತವಾದ ಬೇಡಿಕೆ. ಈ ಬೇಡಿಕೆಯ ಹೋರಾಟ ಕನಿಷ್ಠ ರಾಜ್ಯ ಮಟ್ಟದಲ್ಲಿ ಆಗಬೇಕು. ಬರೀ ಒಂದು ಸುಳ್ಯ ತಾಲೂಕಿಗೆ ಸೀಮಿತವಾಗಿ ಆಗುವುದಿಲ್ಲ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಬೇಡಿಕೆಗೆ ಹಿನ್ನಡೆ ಏನೆಂದರೆ ಮೀಸಲಾತಿ ಕ್ಷೇತ್ರದಿಂದ ಆರಿಸಿ ಬಂದ ಅಂಗಾರರಂತ ಪ್ರತಿನಿಧಿಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಆ ಕ್ಷೇತ್ರಗಳ ಬದಲಾವಣೆಗೆ ಪ್ರಯತ್ನಿಸುವುದಿಲ್ಲ. ಜನರಲ್ ಕ್ಷೇತ್ರದಲ್ಲಿರುವ ನಾಯಕರುಗಳು ತಮ್ಮ ಕ್ಷೇತ್ರವನ್ನು ಮೀಸಲಾತಿ ಕ್ಷೇತ್ರವನ್ನಾಗಿ ಮಾಡಿ ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಆದುದರಿಂದ ರಾಜ್ಯದಲ್ಲಿರುವ ಇತರ ಕ್ಷೇತ್ರದ ಪರಿಶಿಷ್ಟ ಜಾತಿ ಪಂಗಡದವರು ರೊಟೇಶನ್‌ನಲ್ಲಿ ಅವಕಾಶ ಕೊಡಬೇಕೆಂದು ಮತ್ತು ಆಯಾ ಕ್ಷೇತ್ರದ ಜನರು ಬದಲಾವಣೆ ಬಯಸಿ ಹೋರಾಟ ಮಾಡಿದರೆ ಮಾತ್ರ ಅದು ಯಶಸ್ವಿಯಾಗಬಹುದು. ಅದಕ್ಕೆ ಡಿ.ಲಿಮಿಟಿಶನ್ ಕಮಿಟಿ ಮೀಟಿಂಗ್ ಆಗಬೇಕೆಂಬುವುದು ಕಾನೂನಿನ ಕುಂಟು ನೆಪ. ಜಾತಿಗಳಿಗೆ, ಧರ್ಮಗಳಿಗೆ ಮೀಸಲಾತಿ ಸಂವಿಧಾನದಲ್ಲಿ ಇಲ್ಲದಿದ್ದರೂ ಅದನ್ನು ಮಾಡಿ ಸಂವಿಧಾನವನ್ನೂ ತಿದ್ದು ಪಡಿ ಮಾಡಿ ತರುತ್ತಾರೆ ಎಂದಾದರೆ ಮೀಸಲಾತಿ ಬದಲಾವಣೆ ಕಷ್ಟ ಅಲ್ಲವೇ ಅಲ್ಲ.

ಸುಳ್ಯದ ಜನರಲ್‌ನವರಿಗೆ ಈ ಮೀಸಲಾತಿಯಿಂದಾಗಿ ಅವಕಾಶ ಇಲ್ಲದಂತಾಗಿದೆ.
ಸುಳ್ಯದ ಡಿ.ವಿ.ಸದಾನಂದರು ಲಕ್‌ನಿಂದಾಗಿ ಪುತ್ತೂರಿನಲ್ಲಿ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕೇಂದ್ರದ ಮಂತ್ರಿಯೂ ಆದರು. ಆದರೆ ಅವರ ಸಮಕಾಲೀನರಾಗಿರುವ ಮತ್ತು ಆ ನಂತರದ ಯುವಕರು-ಯುವತಿಯರು ಉದಾ: ಭರತ್ ಮುಂಡೋಡಿ, ಎಂ.ಬಿ.ಸದಾಶಿವ, ನಿತ್ಯಾನಂದ ಮುಂಡೋಡಿ, ಧನಂಜಯ ಅಡ್ಪಂಗಾಯ, ಎಸ್.ಎನ್.ಮನ್ಮಥ, ಜಾಕೆ ಮಾಧವ, ಹರೀಶ್ ಕಂಜಿಪಿಲಿ ಮೊದಲಾದ ಅನೇಕ ನಾಯಕರು ಅವಕಾಶವಿಲ್ಲದೆ ಪಕ್ಷದ ಪದಾಧಿಕಾರಿಗಳಾಗಿ ಚುನಾವಣಾ ಉಸ್ತುವಾರಿಗಳಾಗಿ ಜೀವನ ಕಳೆಯುತ್ತಿದ್ದಾರೆ. ಪುತ್ತೂರಿಗೆಂದು ಸುಳ್ಯದವರು ಬಯಸಿ ಅರ್ಜಿ ಸಲ್ಲಿಸಿದರೆ ಪುತ್ತೂರಿನವರಿಗೆ ಅವರು ಹೊರಗಿನವರಾಗಿ, ಸೋಲುವ ಅಭ್ಯರ್ಥಿಗಳಾಗಿ ಕಾಣುತ್ತಾರೆ. ಪುತ್ತೂರಿನ ಕಾಂಗ್ರೆಸ್ ಸೀಟ್‌ಗೆ ಸುಳ್ಯದಿಂದ ಬಂದ ಅರ್ಜಿಗಳ ಪಟ್ಟಿಯನ್ನು ನೋಡಿದರೆ, ಅವರ ಪ್ರಯತ್ನವನ್ನು ಗಮನಿಸಿದರೆ ಅವರ ಚಿಂತಾಜನಕ ಸ್ಥಿತಿಯ ಅರಿವಾಗುತ್ತದೆ. ಆದುದರಿಂದ ಯಾರೇ ಆಗಲಿ ಸಾಮಾಜಿಕ ನ್ಯಾಯಕ್ಕಾಗಿ ಕ್ಷೇತ್ರಗಳ ಮೀಸಲಾತಿ ಬದಲಾವಣೆಯನ್ನು ಹೋರಾಟವನ್ನಾಗಿ ತೆಗೆದುಕೊಳ್ಳಲು ಮುಂದೆ ಬರಬೇಕು. ಆಮೂಲಕ ಸುಳ್ಯದ ಜನರಿಗೆ ಜನರಲ್ ಸೀಟ್‌ನಲ್ಲಿ ಸ್ಪರ್ಧಿಸುವ ಅವಕಾಶ ದೊರಕಬೇಕು.

ಸುಳ್ಯದಲ್ಲಿ ಜನರಲ್ ಸೀಟ್ ಆದರೂ ಅಂಗಾರರು ಗೆದ್ದೇ ಗೆಲ್ಲುತ್ತಾರೆ:

ಸುಳ್ಯದಲ್ಲಿ 30 ವರ್ಷಗಳ ಕಾಲ ಶಾಸಕರಾಗಿ, ಮಂತ್ರಿಯಾಗಿ ಸುಳ್ಯದಲ್ಲಿ ಜನಪ್ರಿಯರಾಗಿರುವ ಮಂತ್ರಿ ಅಂಗಾರರವರು ತನಗೆ ಜೀವಮಾನದ ಸಾಧನೆಯಾಗಿ ಶಾಸಕತ್ವ ನೀಡಿರುವ ಸುಳ್ಯಕ್ಕೆ ಕೊಡುಗೆಯಾಗಿ ಸುಳ್ಯ ಕ್ಷೇತ್ರವನ್ನು ಜನರಲ್ ಕ್ಷೇತ್ರವನ್ನಾಗಿ ಮಾಡುವ ಹೋರಾಟಕ್ಕೆ ಕೈ ಹಾಕಬೇಕು. ಅದರಿಂದ ಅವರಿಗೆ ಏನೂ ನಷ್ಟವಾಗದು. ಸುಳ್ಯ ಜನರಲ್ ಕ್ಷೇತ್ರವಾದರೂ ಅಂಗಾರರು ತಮ್ಮ ಸಾಧನೆ, ಜನಪ್ರಿಯತೆ ಮತ್ತು ಜನಸಂಪರ್ಕದಿಂದ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಅವರಲ್ಲಿಯೂ ಇದೆ, ಜನರಲ್ಲಿಯೂ ಇದೆ. ಆದುದರಿಂದ ಸುಳ್ಯದಲ್ಲಿ ಸುದೀರ್ಘ ಶಾಸಕರಾಗಿ ದಾಖಲೆ ಮಾಡಿರುವ ಅಂಗಾರರು ತನ್ನ ಹೆಸರು ಅಜರಾಮರವಾಗಿ ಸುಳ್ಯದಲ್ಲಿ ಉಳಿಯಲು ಸುಳ್ಯ ಕ್ಷೇತ್ರವನ್ನು ಜನರಲ್ ಸೀಟ್ ಆಗಿ ಪರಿವರ್ತಿಸುವ ಹೋರಾಟದ ನಾಯಕತ್ವವನ್ನು ವಹಿಸಿಕೊಳ್ಳಬೇಕೆಂದು ಜನರ ಅಭಿಪ್ರಾಯವಾಗಿದೆ.

-ಡಾ.ಯು.ಪಿ.ಶಿವಾನಂದ

LEAVE A REPLY

Please enter your comment!
Please enter your name here