ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ರಾಜ್ಯ ವ್ಯಾಪಿ ಆಂದೋಲನವಾಗಲಿ

0

ಲಂಚ ಕೊಟ್ಟದ್ದನ್ನು ಜನರಿಗೆ ವಾಪಾಸ್ ತೆಗೆಸಿಕೊಡುವ ಪ್ರತಿಜ್ಞೆ ಅಭ್ಯರ್ಥಿಗಳು ಮಾಡಬೇಕು.

ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಸಂಭಾವ್ಯ ಮುಖ್ಯ ಮಂತ್ರಿ ಅಭ್ಯರ್ಥಿಗಳ ಚುನಾವಣಾ ಅಂಗಣಕ್ಕೆ ಒಯ್ಯಲಾಗುವುದು

ನಾವು ಕಳೆದ ಹಲವಾರು ವರ್ಷಗಳಿಂದ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಜನಾಂದೋಲನವನ್ನು ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಕೈಗೊಂಡಿದ್ದೇವೆ. ಅದಕ್ಕೆ ಅಭೂತಪೂರ್ವ ಬೆಂಬಲ ದೊರಕಿದೆ. ಲಂಚ ಕೊಟ್ಟರೂ ಹಣ ತೆಗೆದುಕೊಳ್ಳದೆ ಉತ್ತಮ ಸೇವೆ ನೀಡುವ ಬಹಳ ಮಂದಿ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ. ಜನರು ಅವರನ್ನು ಗುರುತಿಸಿ ಗೌರವಿಸಿದ್ದಾರೆ. ಹೀಗಿದ್ದರೂ ಲಂಚ ಭ್ರಷ್ಟಾಚಾರ ನಿಲ್ಲುವುದಿಲ್ಲ ಯಾಕೆ? ಯಾಕೆಂದರೆ ಅದರ ಬುಡ, ತಲೆ ಇರುವುದು ಶಾಸಕರ ಭವನದಲ್ಲಿ, ಬೆಂಗಳೂರು ಅಧಿಕಾರಿಗಳ ಕೇಂದ್ರದಲ್ಲಿ ಅಲ್ಲಿಂದಲೇ ಲಂಚ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ಮತ್ತು ರಕ್ಷಣೆ ದೊರಕುವುದರಿಂದ ಇಲ್ಲಿ ಬಡಪಾಯಿ ಅಧಿಕಾರಿಗಳು ಜನರಿಂದ ಹಣ ವಸೂಲಿ ಮಾಡಿ, ಶಾಸಕರಿಗೆ, ಮಂತ್ರಿಗಳಿಗೆ, ಪಕ್ಷಗಳಿಗೆ, ಜನಪ್ರತಿನಿಧಿಗಳಿಗೆ, ಮೇಲಾಧಿಕಾರಿಗಳಿಗೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ವರ್ಗಾವಣೆ ಮತ್ತಿತರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದರ ಅನುಭವ ನಮಗೆ ಆಂದೋಲನದಲ್ಲಿ ಆಗಿದೆ. ಆದುದರಿಂದ ಭ್ರಷ್ಟಾಚಾರ ಮುಕ್ತ ಮಾಡಲು ಈ ಸಲ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ನಿರ್ಣಯ ಮಾಡಬೇಕು. ಆಗ ಗೆದ್ದು ಬರುವ ಶಾಸಕರು ಭ್ರಷ್ಟಾಚಾರ ಮುಕ್ತರಾಗುತ್ತಾರೆ. ಉತ್ತಮ ಸೇವೆಗೆ ಪುರಸ್ಕಾರ ದೊರಕುತ್ತದೆ. ಇಲ್ಲದಿದ್ದರೆ ನಮ್ಮ ಕಛೇರಿ ಕಂಬಗಳು ಸುಲಿಗೆಗಾರರ ನೇಣಿನ ಕಂಬಗಳಾಗುತ್ತದೆ. ಕೇಂದ್ರಗಳಾಗುತ್ತದೆ.

ಲಂಚ, ಭ್ರಷ್ಟಾಚಾರದ ವಿರುದ್ಧ 1985ರಲ್ಲಿಯೇ ಪ್ರತಿಭಟನೆಯಾಗಿ ಸ್ಪರ್ಧಿಸಿದ್ದೇನೆ.
1985ರಲ್ಲಿ ಸುಳ್ಯದಲ್ಲಿ ಬಳಕೆದಾರರ ವೇದಿಕೆಯ ಅಧ್ಯಕ್ಷನಾಗಿದ್ದ ಸಂದರ್ಭ ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅತೀ ದೊಡ್ಡ ಭ್ರಷ್ಟಾಚಾರಿ ಎಂದು ಅಂದಿನ ಸಬ್ ಇನ್ಸ್‌ಪೆಕ್ಟರ್ ಕಾಂಬ್ಳಿಯವರನ್ನು ಗುರುತಿಸಿದ್ದೆವು. ಅದರಿಂದ ಪೊಲೀಸ್ ಇಲಾಖೆಯ ಕೆಂಗಣ್ಣಿಗೆ ಬಿದ್ದು ಕೇಸಿಗೆ ಒಳಗಾಗಿದ್ದೆವು. ಆ ಕೇಸುಗಳಿಂದ ಶಾಶ್ವತ ರಕ್ಷಣೆಗಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿ ಅಂದಿನ ಸಂಭಾವ್ಯ ಮುಖ್ಯ ಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಡೆಯ ವಿರುದ್ಧ ಬಸವನಗುಡಿಯಲ್ಲಿ, ಬಂಗಾರಪ್ಪರ ವಿರುದ್ಧ ಸೊರಬದಲ್ಲಿ, ವೀರಪ್ಪ ಮೊಯ್ಲಿಯ ವಿರುದ್ಧ ಕಾರ್ಕಳದಲ್ಲಿ ಸ್ಪರ್ಧಿಸಿ ಅಲ್ಲಿಯ ಮತದಾರರ ಬಳಿ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟದ ಪುರಾವೆಗಳನ್ನು ಇಟ್ಟಿದ್ದೆವು. ಇದರ ಪರಿಣಾಮವಾಗಿ ನನಗೆ ಕೇಸುಗಳಿಂದ ರಕ್ಷಣೆ ದೊರಕಿತ್ತು. ಆದರೆ ಜನರಿಗೆ ಭ್ರಷ್ಟಾಚಾರದಿಂದ ರಕ್ಷಣೆ ದೊರಕಲಿಲ್ಲ ಎಂಬ ಕಾರಣಕ್ಕೆ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಪ್ರಾರಂಭಿಸಿ ಜನಾಂದೋಲನ ಮುಂದುವರಿಸಿದೆ.

ಅಭ್ಯರ್ಥಿಗಳು ಲಂಚ, ಭ್ರಷ್ಟಾಚಾರ ಮುಕ್ತ ಊರಿನ ಭರವಸೆ ನೀಡಬೇಕು
ಈ 38 ವರ್ಷಗಳ ಕಾಲ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಪತ್ರಿಕೆ ನಡೆಸಿದರೂ ಇಲ್ಲಿಯ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾವು ಲಂಚ, ಭ್ರಷ್ಟಾಚಾರಕ್ಕೆ ಬೆಂಬಲ ನೀಡಲಿಲ್ಲ. 38 ವರ್ಷಗಳ ಪತ್ರಿಕೆ ಗೌರವ ತಂದು ಕೊಟ್ಟರೂ ಲಂಚ, ಭ್ರಷ್ಟಾಚಾರ ಜಾಸ್ತಿ ಆಗುತ್ತಿದೆ. ಆದುದರಿಂದ ಪತ್ರಿಕೆಯಿಂದ ನಿವೃತ್ತಿಯಾಗಿ ಲಂಚ, ಭ್ರಷ್ಟಾಚಾರದ ಈ ಆಂದೋಲನವನ್ನು ರಾಜ್ಯದ ಜನರ – ಮತದಾರರ ಬಳಿಗೆ ಈ ಚುನಾವಣೆಯ ಸಂದರ್ಭದಲ್ಲಿ ಕೊಂಡೊಯ್ಯಲು ಪ್ರಯತ್ನವನ್ನು ಮಾಡಬೇಕೆಂದಿದ್ದೇನೆ. ಎಲ್ಲಾ ಕಡೆ ಸಾಧ್ಯವಾಗದಿದ್ದರೂ ರಾಜ್ಯದ ಸಂಭಾವ್ಯ ಮುಖ್ಯ ಮಂತ್ರಿಗಳ ಕ್ಷೇತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಯನ್ನು ಮಾಡಲು ಪ್ರಯತ್ನಿಸಲಿದ್ದೇನೆ. ಮತದಾರರು ಪಕ್ಷ, ಜಾತಿ, ಧರ್ಮ ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಕ್ಷೇತ್ರದ ಶಾಸಕರಾಗುವವರು ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂದು ಬಯಸಬೇಕು. ಯಾವುದೇ ಇಲಾಖೆಯಲ್ಲಿ ಲಂಚ, ಭ್ರಷ್ಟಾಚಾರ ಇಲ್ಲದಂತೆ ಆತ ನೋಡಿಕೊಳ್ಳಬೇಕು. ಆ ಭರವಸೆಯ ಪ್ರತಿಜ್ಞೆಯನ್ನು ಕ್ಷೇತ್ರದ ಮತದಾರರು ಪಡೆಯಬೇಕು. ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಕ್ಷೇತ್ರದಲ್ಲಿ ಯಾರೇ ಲಂಚ, ಭ್ರಷ್ಟಾಚಾರ ಮಾಡಿದರೂ ಅದಕ್ಕೆ ತಾನೇ ಹೊಣೆಗಾರ ಆದುದರಿಂದ ಲಂಚವಾಗಿ ಅಧಿಕಾರಿಗೆ ಕೊಟ್ಟ ಹಣವನ್ನು ವಾಪಾಸ್ ಜನರಿಗೆ ತೆಗೆಸಿಕೊಡುತ್ತೇನೆ ಎಂದು ಆತ ಘೋಷಣೆ ಮಾಡುವಂತೆ ಮಾಡಬೇಕು. ಇಲ್ಲದಿದ್ದರೆ ಜನತೆ ಅಧಿಕಾರಿಗಳ ಸುಲಿಗೆಗೆ ಒಳಗಾಗಿ ಬಲಿಪಶುಗಳಾಗುವುದು ಖಂಡಿತ.
ಈಗ ಶಾಸಕರಾಗಿದ್ದು ಮತ್ತೆ ಸ್ಪರ್ಧಿಸುವವರು ತಮ್ಮ ಅವಧಿಯಲ್ಲಿ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯಲು ಕಾರಣ ಏನು?. ಅದರ ಪಾಲು ಯಾರಿಗೆಲ್ಲಾ ಹೋಗಿದೆ. ಅದನ್ನು ನಿಲ್ಲಿಸಲು ಯಾಕೆ ಸಾಧ್ಯವಾಗಲಿಲ್ಲ, ಕಾಮಗಾರಿಗಳಲ್ಲಿ ಎಷ್ಟು ಸದುಪಯೋಗವಾಗಿದೆ?, ಅದರ ಕಾಂಟ್ರಾಕ್ಟರ್‌ಗಳು ಯಾರು?, ಎಷ್ಟು ಪರ್ಸಂಟೇಜ್ ಕೆಲಸಗಳನ್ನು ಮಾಡಿದ್ದಾರೆ? ಎಂಬುವುದನ್ನು ಬಹಿರಂಗಪಡಿಸಲು ಕೇಳಬೇಕು. ಈಗ ಓಟಿಗೆ ನಿಂತ ಅಭ್ಯರ್ಥಿಗಳು ಏನೇನು ಮಾಡುತ್ತಾರೆ ಎಂಬ ಬಗ್ಗೆ ಸ್ಪಷ್ಟ ವಿವರಗಳನ್ನು ಪಡೆಯಬೇಕು. ಪಕ್ಷ ಏನು ಮಾಡುತ್ತದೆ, ಕೇಂದ್ರ ಸರಕಾರ, ರಾಜ್ಯ ಸರಕಾರ ಏನು ಮಾಡಿದೆ? ಏನೂ ಮಾಡಲಿಲ್ಲ ಎಂಬುವುದಕ್ಕಿಂತ ಮುಖ್ಯವಾಗಿ ನಮ್ಮ ಕ್ಷೇತ್ರದಲ್ಲಿ ಏನು ನಡೆದಿದೆ?, ಏನು ನಡೆಯಬೇಕು ಎಂದು ಮತದಾರರು ತಿಳಿಯಬೇಕು.

ಅಭ್ಯರ್ಥಿಗಳ ಆಯ್ಕೆ ಸ್ಥಳೀಯವಾಗಿ ನಡೆಯಬೇಕು. ರಾಜ್ಯ, ಕೇಂದ್ರದಿಂದ ಅಲ್ಲ:
ಕ್ಷೇತ್ರದ ಶಾಸಕ ಸ್ಥಾನಗಳಿಗೆ ಈಗ ನಡೆಯುತ್ತಿರುವ ಅಭ್ಯಥಿಗಳ ಆಯ್ಕೆಯ ವಿಧಾನ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿ ಕೆಲಸ ಮಾಡುತ್ತಿದೆ. ಅಭ್ಯರ್ಥಿಗಳ ಆಯ್ಕೆ ರಾಜ್ಯದಿಂದ ಡೆಲ್ಲಿಯಿಂದ ಆಗುತ್ತಿದೆ. ಹಾಗೆ ಮಾಡಿದರೆ ಅವರು ಕೇಂದ್ರದ ರಾಜ್ಯದ ರಾಜರುಗಳ ಪ್ರತಿನಿಧಿಗಳಾಗುತ್ತಾರೆ. ಜನರ ಪ್ರತಿನಿಧಿಗಳಾಗುವುದಿಲ್ಲ. ಜನರ ಪ್ರತಿನಿಧಿಗಳು ಆಗಬೇಕಿದ್ದರೆ ಆಯಾ ಪಕ್ಷದವರು, ಆಯಾ ಕ್ಷೇತ್ರಕ್ಕೆ ಅಲ್ಲಿಯ ಜನರಿಂದಲೇ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಮಾಡಬೇಕು. ಹಿಂದೆ ಬಿಜೆಪಿ ಪಕ್ಷದಲ್ಲಿ ಆ ಕ್ರಮ ಚಾಲ್ತಿಯಲ್ಲಿತ್ತು. ಕಾಂಗ್ರೆಸ್‌ನಲ್ಲಿ ಮಾತ್ರ ಡೆಲ್ಲಿಯಿಂದ ಲಕೋಟೆಯಲ್ಲಿ ಅಭ್ಯರ್ಥಿಯ ಹೆಸರು ಬರುತ್ತಿತ್ತು. ಈಗ ಬಿಜೆಪಿಯೂ ಕಾಂಗ್ರೆಸ್‌ನ ಪಡಿಯಚ್ಚಾಗಿ ಕೆಲಸ ಮಾಡುತ್ತಿದೆ. ಇಲ್ಲಿಂದಲೇ ಜನರು ತಮಗೆ ಬೇಕಾದ ಅಭ್ಯರ್ಥಿಯ ಆಯ್ಕೆಯನ್ನು ಮಾಡಿದರೆ ಅವರು ಇಲ್ಲಿಯ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಾರೆ. ಆಡಳಿತ ಹಳ್ಳಿಯಿಂದ ಡೆಲ್ಲಿಗೆ ಹೋಗುತ್ತದೆ ಎಂಬುವುದನ್ನು ತಿಳಿಸಲಿಕ್ಕಾಗಿ ಪ್ರಧಾನಿ ಮೋದಿಜಿಯವರ ವಾರಣಾಸಿ ಕ್ಷೇತ್ರದಲ್ಲಿ ಹಾಗೂ ರಾಹುಲ್ ಗಾಂಧಿಯವರ ಅಮೇಥಿಯಲ್ಲಿ ಸ್ಪರ್ಧಿಸಿ ಅವರುಗಳ ಗಮನಕ್ಕೆ ತರಲು ಬಯಸಿದ್ದೆ. ಈ ವಿಚಾರವನ್ನು ವಾರಣಾಸಿ ಮತ್ತು ಅಮೇಥಿ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿಯ ಮೂಲಕ ಜನರಿಗೆ ತಲುಪಿಸಲು ಪ್ರಯತ್ನಿಸಿದ್ದೆ. ನಾನು ಹೇಳುವ ವಿಚಾರವನ್ನು ಜನರು ಅರ್ಥ ಮಾಡಿಕೊಂಡು ಆತ ಯಾವುದೇ ಪಕ್ಷದ ನೆಲೆಯಲ್ಲಿ ನಿಂತರೂ ಆತ ತನ್ನ ಕ್ಷೇತ್ರಕ್ಕೇ ಕೆಲಸ ಮಾಡುವ ಸಾಮರ್ಥ್ಯವನ್ನು, ತೊಂದರೆಯಾದಾಗ ರಾಜ್ಯ ಮತ್ತು ಕೇಂದ್ರವನ್ನು ಎದುರಿಸಿ ನ್ಯಾಯ ಪಡೆಯುವ ಶಕ್ತಿಯನ್ನು ಪಡೆಯಬೇಕು ಎಂದು ನಾನು ಬಯಸುತ್ತೇನೆ. ಈ ವಿಚಾರವಾಗಿ ಜನರನ್ನು ತಲುಪಿ ಪ್ರಜಾಪ್ರಭುತ್ವದ ನಿಜವಾದ ಆಡಳಿತಕ್ಕೆ ಜನರು ಹೋರಾಟ ಮಾಡಬೇಕೆಂದು ತಿಳಿಸಲು ಪ್ರಯತ್ನ ಮಾಡಲಿದ್ದೇನೆ.

ಪ್ರಧಾನಿ ಮೋದಿಜಿಯವರು, ಭ್ರಷ್ಟಾಚಾರಿಗಳು ಒಗ್ಗಟ್ಟಾಗಿ ನಮ್ಮನ್ನು ಎದುರಿಸುತ್ತಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಮೋದಿಜಿಯವರು ಪ್ರಾಮಾಣಿಕರಾಗಿದ್ದರೂ ಅವರ ಪಕ್ಷದ ಹಲವರು, ಶಾಸಕರು, ಮಂತ್ರಿಗಳು ಮತ್ತು ಅಧೀನದಲ್ಲಿರುವವರು ಭ್ರಷ್ಟಾಚಾರಿಗಳು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಆದುದರಿಂದ ಈ ಚುನಾವಣೆಯಲ್ಲಿ ಭ್ರಷ್ಟಾಚಾರಿಗಳು ಯಾರೇ ಆಗಲಿ ಜನರು ಅವರನ್ನು ಒಗ್ಗಟ್ಟಾಗಿ ಎದುರಿಸಬೇಕು, ಗೆಲ್ಲಿಸಬಾರದು ಎಂಬ ಕರೆಯನ್ನು ಅವರು ನೀಡಬೇಕು. ಇಲ್ಲದಿದ್ದರೆ ಬಿಜೆಪಿಯವರಿಗೆ ಮಾತ್ರ ಭ್ರಷ್ಟಾಚಾರ ಮಾಡಲು ಲೈಸೆನ್ಸ್ ಇದೆ ಎಂಬ ಅರ್ಥ ಬರಬಹುದು ಎಂಬುವುದು ನಮ್ಮ ಕಳಕಳಿಯ ವಿನಂತಿ.

LEAVE A REPLY

Please enter your comment!
Please enter your name here