ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ತೆರೆ

0

ಪುತ್ತೂರು: ಮಾಂಗಲ್ಯ ವರ ಪ್ರದಾಯಕನಾಗಿರುವ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಲವು ವೈಶಿಷ್ಟ್ಯಗಳೊಂದಿಗೆ ಏಳು ದಿನಗಳ ಕಾಲ ನಡೆದ ಅಷ್ಟಬಂಧ ಬ್ರಹ್ಮಲಕಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ವರ್ಷಾವಧಿ ಜಾತ್ರೋತ್ಸವದ ಸಂಭ್ರಮಗಳು ಮಾ.31ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಹಾಗೂ ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಮಾ.25ರಂದು ಹೊರೆಕಾಣಿಕೆ ಸಮರ್ಪಣೆ, ಪುಷ್ಪರಥದ ಆಗಮನದೊಂದಿಗೆ ಚಾಲನೆ ದೊರೆಯಿತು. ಸಂಜೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನಡೆದು, ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ಕ್ಷೇತ್ರದಲ್ಲಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ವಿವಿಧ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮಗಳು ಸಂಭ್ರಮಿಸಿದವು. ಉಮಾಮಹೇಶ್ವರ ಸಭಾಂಗಣದ ಶಿವಪಾರ್ವತಿ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು ವಿವಿಧ ಸಾಂಸ್ಕೃತಿಕ ತಂಡಗಳಿಂದ ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಲೈಸಿತು. ಖ್ಯಾತ ಪಾಕತಜ್ಞ ತುಳಸಿ ಕ್ಯಾಟರರ‍್ಸ್‌ನ ಹರೀಶ್ ಭಟ್ ನೇತೃತ್ವದಲ್ಲಿ ನಳಪಾಕ ಪಾಕ ಶಾಲೆಯಲ್ಲಿ ಶುಚಿ ರುಚಿಯಾದ ಬಗೆ ಬಗೆಯ ಭಕ್ಷ್ಯ, ಭೋಜನಗಳು ಸಿದ್ದಗೊಂಡು ಅನ್ನಪೂರ್ಣ ಅನ್ನಛತ್ರದಲ್ಲಿ ಶಿಸ್ತು ಬದ್ದವಾಗಿ ಭೋಜನ, ಉಪಹಾರಗಳು ಸಂಯೋಜನೆಗೊಂಡಿದ್ದವು.

ಬ್ರಹ್ಮಕಲಶೋತ್ಸವದಲ್ಲಿ ಮಾ.30ರಂದು ಪೂರ್ವಾಹ್ನ 108 ಕಾಯಿ ಮಹಾಗಣಪತಿಹೋಮ, ಮೀನ ಲಗ್ನ ಶುಭಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ, ಪುಷ್ಪರಥ ಸಮರ್ಪಣೆ, ಸಂಜೆ ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ದೇವರ ಪ್ರಥಮ ಪುಷ್ಪರಥೋತ್ಸವ, ಮಾ.31ರಂದು ಬೆಳಿಗ್ಗೆ ಶ್ರೀದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದು ವಾರಾಹಿ, ರಕ್ತೇಶ್ವರಿ, ಗುಳಿಗ ದೈವಗಳಿಗೆ ನೇಮೋತ್ಸವಗಳೊಂದಿಗೆ ಸಂಪನ್ನಗೊಂಡಿತು.

ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಾಟಿ ಎಂಬಂತೆ ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯ ಬೆದ್ರಾಳದಿಂದ ಮುಕ್ವೆ- ಪುರುಷರಕಟ್ಟೆಯ ತನಕ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾನರ್, ಬಂಟಿಂಗ್ಸ್, ಭಗವಧ್ವಜಗಳು ರಾರಾಜಿಸುತ್ತಿತ್ತು. ಆಕರ್ಷಕ ದ್ವಾರಗಳು, ರಸ್ತೆ ಬದಿಯಲ್ಲಿನ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡು ಭಕ್ತರನ್ನು ಕ್ಷೇತ್ರಕ್ಕೆ ಕೈಬೀಸಿ ಕರೆಯುತಿತ್ತು. ಊರಿನ ಯುವಕರ ನೇತೃತ್ವದ ಕರಸೇವಕ ತಂಡದಲ್ಲಿ ಬ್ರಹ್ಮಕಲಶೋತ್ಸವದಲ್ಲಿ ಕಲಶ ಪೂಜೆ ಕ್ಷೇತ್ರದಲ್ಲಿ ಆಕರ್ಷಕವಾದ ರೀತಿಯಲ್ಲಿ ವಿಶಾಲವಾದ ಕಲಶ ಮಂಟಪವು ನಿರ್ಮಾಣಗೊಂಡಿತ್ತು. ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ತಂಡೋಪ ತಂಡವಾಗಿ ಊರ, ಪರವೂರ ಭಕ್ತಾದಿಗಳ ಜನ ಸಾಗರವೇ ಹರಿದು ಬರುತ್ತಿದ್ದು ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.

40,೦೦೦ಕ್ಕೂ ಅಧಿಕ ಮಂದಿಗೆ ಅನ್ನದಾನ:
ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ನೆರವೇರಿದ್ದು ಒಟ್ಟು ಸುಮಾರು 40,೦೦೦ಕ್ಕೂ ಅಧಿಕ ಮಂದಿ ಅನ್ನಪ್ರಸಾದವನ್ನು ಸ್ವೀಕರಿಸಿದರು. ಜೊತೆಗೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಉಪಹಾರ, ತಂಪುಪಾನೀಯಗಳನ್ನು ಭಕ್ತಾದಿಗಳಿಗೆ ಒದಗಿಸಲಾಗಿತ್ತು.

ಅಚ್ಚುಕಟ್ಟಾದ ವ್ಯವಸ್ಥೆಗಳು:
ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಉತ್ಸವಗಳು, ವಾಹನ ಪಾರ್ಕಿಂಗ್, ಊಟ, ಉಪಹಾರ, ಪ್ರಸಾದ ವಿತರಣೆ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೆಲ್ಲವೂ ವ್ಯವಸ್ಥಿತ ಹಾಗೂ ಶಿಸ್ತು ಬದ್ದವಾಗಿ ನೆರವೇರಿತ್ತು. ಅಲ್ಲದೆ ವಿಶೇಷವಾಗಿ ಶುಚಿತ್ವಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವಗಳು ಯಶಸ್ವಿಯಾಗಿ ನೆರವೇರುವಲ್ಲಿ ಭಕ್ತರ ಸಮರ್ಪಣಾ ಭಾವದ ಕರಸೇವೆಯು ಪ್ರಮುಖವಾಗಿತ್ತು. ಪ್ರತಿದಿನ ಸುಮಾರು 300ಕ್ಕೂ ಅಧಿಕ ಮಂದಿ ಉತ್ಸಾಹ ಯುವಕರು, ಮಹಿಳೆಯರು ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಗೌರವಸಲಹೆಗಾರರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ, ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಉಪ್ಪಳ, ಉಪಾಧ್ಯಕ್ಷ ಕೆ.ಎಂ ಬೆಳಿಯಪ್ಪ ಗೌಡ ಕೆದ್ಕಾರ್, ಯಂ ಕೇಶವ ಪೂಜಾರಿ ಮುಕ್ವೆ, ಕೋಶಾಧಿಕಾರಿ ನವೀನ್ ರೈ ಶಿಬರ, ಸದಸ್ಯರಾದ ಸುಜಯ್ ತಂತ್ರಿ ಉಪ್ಪಳ, ಪ್ರಸನ್ನ ಭಟ್ ಪಂಚವಟಿ, ಕೆ.ಗಿರೀಶ್ ರೈ ಮಣಿಯ, ಯಂ.ರವಿ ಮಣಿಯ, ಯಂ ಸುಧೀರ್ ಹೆಬ್ಬಾರ್ ಮಣಿಯ, ಪದ್ಮನಾಭ ಪೂಜಾರಿ ಬೆದ್ರಾಳ, ಮೋನಪ್ಪ ಪುರುಷ ಮುಗೇರಡ್ಕ, ಗಣೇಶ್ ಭಟ್ ಮಜಲುಮಾರು, ಗಣೇಶ್ ಶೆಟ್ಟಿ ಶಿಬರ, ಅರ್ಚಕ ಪ್ರಸಾದ್ ಅಡಿಗ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ತಂತ್ರಿ ಕೆಮ್ಮಿಂಜೆ, ಉಪಾಧ್ಯಕ್ಷರಾದ ಚಂದ್ರಕಲಾ ಮುಕ್ವೆ, ರವೀಂದ್ರ ರೈ ನೆಕ್ಕಿಲು, ರಾಧಾಕೃಷ್ಣ, ನವೀನ್ ನಾಯಕ್ ಚಂದ್ರಮ್‌ಸಾಗ್, ವಸಂತ ರೈ ಶಿಬರ, ಜತೆಕಾರ್ಯದರ್ಶಿ ದಿನೇಶ್ ಹೆಬ್ಬಾರ್ ದೋಳ್ತಟ್ಟ, ವಿಶ್ವನಾಥ ರೈ ಅಳಕೆ, ಸದಸ್ಯರಾದ ಸುರೇಶ್ ಪ್ರಭು ಶೆಟ್ಟಿಮಜಲು, ಜಯರಾಮ ಪೂಜಾರಿ ಒತ್ತೆಮುಂಡೂರು, ಮಂಜುನಾಥ ಶೇಖ ಶಿಬರ, ವಸಂತ ಗೌಡ ಸೇರಾಜೆ, ನಾರ್ಣಪ್ಪ ಸಾಲಿಯಾನ್ ಮರಕ್ಕೂರು, ಸುಂದರ ರೈ ಕಾಯರ್‌ಮುಗೇರು, ಶರತ್‌ಚಂದ್ರ ಬೈಪಾಡಿತ್ತಾಯ ಬಜಪ್ಪಳ, ರಾಜೇಂದ್ರ ಭಟ್ ಮಣಿಯ, ಉಮೇಶ್ ಇಂದಿರಾನಗರ ವಿವಿಧ ಉಪ ಸಮಿತಿಗಳ ಸಂಚಾಲಕರು, ಸದಸ್ಯರು, ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮುಖಂಡರುಗಳು ಸೇರಿದಂತೆ ಸಹಸ್ರಾರು ಮಂದಿ ಊರ, ಪರವೂರ ಭಕ್ತಾದಿಗಳು ಪಾಲ್ಗೊಂಡು ಬ್ರಹ್ಮಕಲಶೋತ್ಸವದ ವೈಭವವನ್ನು ಕಣ್ತುಂಬಿಕೊಂಡು ಪುನೀತರಾದರು.

LEAVE A REPLY

Please enter your comment!
Please enter your name here