ನೆಲ್ಯಾಡಿ: ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಡ್ರೈನೇಜ್‌ಗೆ ಬಿದ್ದು ವೃದ್ಧರೋರ್ವರು ಗಾಯಗೊಂಡಿರುವ ಘಟನೆ ನೆಲ್ಯಾಡಿಯಲ್ಲಿ ಎ.10ರಂದು ಮಧ್ಯಾಹ್ನ ನಡೆದಿದೆ.
ನೆಲ್ಯಾಡಿ ಗ್ರಾಮದ ಕುರುಬರಕೇರಿ ನಿವಾಸಿ ಬಾಬು(65ವ.) ಗಾಯಗೊಂಡವರು. ನೆಲ್ಯಾಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಪೇಟೆಯ ಎರಡೂ ಬದಿಯೂ ಇರುವ ಡ್ರೈನೇಜ್‌ಗೆ ಕಾಂಕ್ರಿಟ್ ತಡೆಗೋಡೆ ಮಾಡಿ ಕಾಂಕ್ರಿಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಆದರೆ ಅಲಲ್ಲಿ ಡ್ರೈನೇಜ್ ಮುಚ್ಚದೇ ಓಪನ್ ಬಿಡಲಾಗಿದೆ. ಬಾಬು ಅವರು ಡ್ರೈನೇಜ್ ಸ್ಲ್ಯಾಬ್ ಮೇಲೆ ನಡೆದುಕೊಂಡು ಬಂದವರು ನೆಲ್ಯಾಡಿ ಸೂರ್ಯ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಸ್ಲ್ಯಾಬ್ ಅಳವಡಿಸದೇ ಇರುವುದು ಅರಿವಿಗೆ ಬರದೇ ಆಕಸ್ಮಿಕವಾಗಿ ಡ್ರೈನೇಜ್ ಒಳಕ್ಕೆ ಬಿದ್ದಿದ್ದಾರೆ. ಸುಮಾರು ನಾಲ್ಕೈದು ಅಡಿ ಆಳಕ್ಕೆ ಬಿದ್ದಿದ್ದ ಬಾಬು ಅವರನ್ನು ಸ್ಥಳೀಯರು ಮೇಲಕ್ಕೆತ್ತಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಬಾಬು ಅವರ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಸೊಳ್ಳೆಗಳ ಕಾಟ: ನೆಲ್ಯಾಡಿ ಪೇಟೆಯಲ್ಲಿನ ಚರಂಡಿಯ ಎರಡೂ ಬದಿ ಕಾಂಕ್ರಿಟ್ ತಡೆಗೋಡೆ ಮಾಡಿ ಮೇಲ್ಬಾಗವನ್ನು ಕಾಂಕ್ರಿಟ್ ಸ್ಲ್ಯಾಬ್‌ನಿಂದಲೇ ಮುಚ್ಚಲಾಗಿದೆ. ಆದರೆ ಅಲ್ಲಲ್ಲಿ ಸ್ಲ್ಯಾಬ್‌ನಿಂದ ಮುಚ್ಚದೇ ಚರಂಡಿಯನ್ನು ಒಪನ್ ಬಿಡಲಾಗಿದೆ. ಚರಂಡಿಯಲ್ಲಿ ಹರಿದು ಬರುವ ಕೊಳಚೆ ನೀರೂ ಅಲ್ಲಲ್ಲಿ ನಿಂತಿದ್ದು ಸೊಳ್ಳೆಗಳ ಕಾಟವೂ ವಿಪರೀತವಾಗಿದೆ. ದುರ್ವಾಸನೆಯೂ ಬರುತ್ತಿರುವುದರಿಂದ ವರ್ತಕರು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದೂರು ವ್ಯಕ್ತಗೊಂಡಿದೆ.