





ನೆಲ್ಯಾಡಿ: ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಹಾನಿಗೊಂಡಿರುವ ಘಟನೆ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಎ.11ರಂದು ಮಧ್ಯಾಹ್ನ ಸಂಭವಿಸಿದೆ.


ಅಡ್ಡಹೊಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಮರವೊಂದು ಮುರಿದು ವಿದ್ಯುತ್ ತಂತಿಯ ಮೇಲೆಯೇ ಬಿದ್ದಿದೆ. ಇದರಿಂದಾಗಿ ನಾಲ್ಕು ವಿದ್ಯುತ್ ಕಂಬಗಳು ತುಂಡಾಗಿವೆ. ಇದರಿಂದಾಗಿ ಶಿರಾಡಿ, ಅಡ್ಡಹೊಳೆ, ಗುಂಡ್ಯ ಪರಿಸರದಲ್ಲಿ ವಿದ್ಯುತ್ ಸಂಚಾರದಲ್ಲೂ ಅಡಚಣೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಮರ ಅಡ್ಡವಾಗಿ ಬಿದ್ದ ಪರಿಣಾಮ ತುಸು ಹೊತ್ತು ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಶಿರಾಡಿ, ಅಡ್ಡಹೊಳೆ, ಗುಂಡ್ಯ ಪರಿಸರದಲ್ಲಿ ಹೆದ್ದಾರಿ ಬದಿಯಲ್ಲಿ ಬೃಹತ್ ಮರಗಳು ಬೆಳೆದು ನಿಂತಿದ್ದು ಅಪಾಯಕಾರಿಯಾಗಿವೆ. ಈ ಹಿಂದೆಯೂ ಇಲ್ಲಿ ಹೆದ್ದಾರಿ ಬದಿಯ ಮರ ಬಿದ್ದು ಜೀವ ಹಾನಿಯಾದ ಘಟನೆಯೂ ನಡೆದಿದೆ.















