ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ.7ರಿಂದ ಎ.11 ರವರೆಗೆ 5 ದಿನಗಳ ಕಾಲ ನಡೆದ ವರ್ಷಾವಧಿ ಜಾತ್ರೋತ್ಸವು ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಜಾತ್ರೋತ್ಸವದ ಕಡೇ ದಿನವಾದ ಎ.11 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ತೀರ್ಥಪ್ರಸಾದ ವಿತರಣೆ, ತುಲಾಭಾರ ಸೇವೆ ನಡೆದು ರಾತ್ರಿ ಪಡುಪೇಟೆ ಸವಾರಿ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ದ್ವಜಾವರೋಹಣ ನಡೆಯಿತು.ಬಳಿಕ ನೆತ್ತರ್ ಕಣ, ವ್ಯಾಘ್ರ ಚಾಮುಂಡಿ ಇತ್ಯಾದಿ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವಿ ಮಹಿಳಾ ಯಕ್ಷಗಾನ ಮಂಡಳಿ ದೇವಿನಗರ ಇವರಿಂದ ಮೀನಾಕ್ಷಿ ಕಲ್ಯಾಣ, ಶ್ರೀ ಮಹಿಷಮರ್ದಿನಿ ಕಲಾವೃಂದ ಅಜ್ಜಿನಡ್ಕ ಇವರಿಂದ ವೀರಮಣಿ ಕಾಳಗ, ಸ್ಥಳೀಯ ಹವ್ಯಾಸಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ರತಿ ಕಲ್ಯಾಣ ಎಂಬ ಕನ್ನಡ ಪೌರಾಣಿಕ ಯಕ್ಷಗಾನ ಪ್ರಸಂಗ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಿತು..
ದೇವಸ್ಥಾನದ ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಸಮಿತಿ, ಭಜನಾ ಮಂಡಳಿ ಹಾಗೂ ಊರ ಪರಊರ ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.