ಪರವಾನಿಗೆ ಹೊಂದಿದ ಆಯುಧಗಳನ್ನು ಏ.13ರ ಒಳಗೆ ಠೇವಣಿ ಇಡಲು ಜಿಲ್ಲಾಧಿಕಾರಿ ಪರಿಷ್ಕೃತ ಆದೇಶ

0

ಪುತ್ತೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧಿಸಿ ದ.ಕ.ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸುವ ಉದ್ದೇಶದಿಂದ ಪರವಾನಿಗೆ ಹೊಂದಿದ ಆಯುಧಗಳನ್ನು ಎ.13ರ ಒಳಗಾಗಿ ಠೇವಣಿ ಇಡಲು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 17 (3) (ಬಿ) ರನ್ವಯ, 2023 ಮಾ.30ರಂದು ಹೊರಡಿಸಿದ ಆದೇಶದಲ್ಲಿ ದ.ಕ.ಜಿಲ್ಲೆಯಲ್ಲಿರುವ ಬೆಳೆ ರಕ್ಷಣೆ ಹಾಗೂ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಪರವಾನಿಗೆದಾರರು ತಮ್ಮ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರಲ್ಲಿ ಎ.24ರೊಳಗಾಗಿ ಠೇವಣಿ ಇಡಲು ಆದೇಶಿಸಿದ್ದರು. ಈ ಆದೇಶವನ್ನು ಮಾರ್ಪಡಿಸಿ ಎ.6ರಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಪರಿಷ್ಕೃತ ಆದೇಶವನ್ನು ಹೊರಡಿಸಿದ್ದು, ಈ ಆದೇಶದಲ್ಲಿ ಬೆಳೆ ಹಾಗೂ ಆತ್ಮರಕ್ಷಣೆ ಆಯುಧಗಳ ಪರವಾನಿಗೆದಾರರು ತಮ್ಮ ಆಯುಧಗಳನ್ನು ಪೊಲೀಸ್ ಠಾಣೆ ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರಲ್ಲಿ ಎ.13ರೊಳಗಾಗಿ ಠೇವಣಿ ಇರಿಸುವಂತೆ ಆದೇಶಿಸಿರುತ್ತಾರೆ.

ಅದರಂತೆ ಜಿಲ್ಲೆಯ ಎಲ್ಲ ಆಯುಧಗಳ ಪರವಾನಿಗೆದಾರರು ನಿಗದಿತ ದಿನಾಂಕದ ಒಳಗಾಗಿ ತಮ್ಮ ಬಳಿಯಿರುವ ಆಯುಧ/ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಜಮಾ ಮಾಡಿ ರಶೀದಿಗಳನ್ನು ಪಡೆದುಕೊಳ್ಳುವುದು ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರಲ್ಲಿ ಜಮಾ ಮಾಡಿ ಈ ಬಗ್ಗೆ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು. ಇದಕ್ಕೆ ತಪ್ಪಿದಲ್ಲಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು. ಆದುದರಿಂದ ಜಿಲ್ಲೆಯಲ್ಲಿರುವ ಶಸ್ತ್ರಾಸ್ತ್ರ, ಪರವಾನಿಗೆದಾರರು ಈ ವಿಷಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ಅಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here