ಬೆಟ್ಟಂಪಾಡಿ: ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ

0

ಸ್ಪರ್ಧಾತ್ಮಕ ಮನೋಭಾವ ಇದ್ದಲ್ಲಿ ಯಶಸ್ಸು ಖಚಿತ – ಮನಮೋಹನ ರೈ ಚೆಲ್ಯಡ್ಕ

ಬೆಟ್ಟಂಪಾಡಿ: ಸ್ಪರ್ಧಾತ್ಮಕ ಮನೋಭಾವ ಇದ್ದಲ್ಲಿ ಯಶಸ್ಸು ಖಚಿತ, ಉದ್ಯೋಗ ಮಾರುಕಟ್ಟೆ ಹಲವಾರು ಸವಾಲುಗಳನ್ನು ತರುತ್ತವೆ ಅದನ್ನು ಎದುರಿಸುವ ಸಾಮರ್ಥ್ಯ ಉದ್ಯೋಗಾಕಾಂಕ್ಷಿಗಳಲ್ಲಿ ಬೆಳೆಯಬೇಕು ಎಂದು ಮಂಗಳೂರಿನ ಬ್ರೈಟ್ ವೇ ಇಂಡಿಯಾ ಕನ್ಸಲ್ಟೆನ್ಸಿ ಇದರ ನಿರ್ದೇಶಕರಾದ ಮನಮೋಹನ ರೈ ಚೆಲ್ಯಡ್ಕ ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ವಾಣಿಜ್ಯ ವಿಭಾಗ ಆಯೋಜಿಸಿದ ‘ವಾಣಿಜ್ಯ ವಿದ್ಯಾರ್ಥಿಗಳಿಗೆ ಇರುವ ಉದ್ಯೋಗಾವಕಾಶಗಳು ಮತ್ತು ಕೌಶಲ್ಯ ಅಭಿವೃದ್ಧಿ’ ಬಗೆಗಿನ ಪಿಯುಸಿ ವಿದ್ಯಾರ್ಥಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಹಲವಾರು ಕಾರ್ಯಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಇವೆ ಇದಕ್ಕಾಗಿ ನಮ್ಮಲ್ಲಿ ಔದ್ಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಒತ್ತಡದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಕುಶಲತೆಯು ಯುವ ಜನತೆಯಲ್ಲಿ ಮೂಡಬೇಕು ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಹರಿಪ್ರಸಾದ್ ಎಸ್ ಇವರು ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಪದವಿ ಪೂರ್ವ ಶಿಕ್ಷಣ ಹೊಂದಿದ ಬಳಿಕ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳ ಮನದಲ್ಲಿ ಮೂಡುವುದು ಸಹಜ, ಸೂಕ್ತ ಮಾಹಿತಿಯ ಕೊರತೆ ವಿದ್ಯಾರ್ಥಿಗಳಲ್ಲಿ ಹಲವಾರು ಗೊಂದಲಗಳನ್ನು ಸೃಷ್ಟಿಸುತ್ತದೆ. ಜೀವನದಲ್ಲಿ ಯಶಸ್ಸನ್ನು ಗಳಿಸಲು ಕೌಶಲ್ಯಾಭಿವೃದ್ಧಿ ಮತ್ತು ಜ್ಞಾನಾರ್ಜನೆ ಅನುವು ಮಾಡಿಕೊಡುತ್ತದೆ. ಈ ಕಾರ್ಯಕ್ರಮವು ಭವಿಷ್ಯದ ನಿರ್ಧಾರವನ್ನು ತೆಗೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ. ಕಾಂತೇಶ್ ಎಸ್ ಇವರು ಮಾತನಾಡುತ್ತಾ ವೃತ್ತಿ ಜೀವನದ ಸವಾಲುಗಳನ್ನು ಎದುರಿಸುವ ಕಲೆಯನ್ನು ಪದವಿ ಶಿಕ್ಷಣವು ಬೋಧಿಸುತ್ತದೆ. ಈ ಸಂದರ್ಭದಲ್ಲಿ ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಇವರು ಒಂದು ವಿದ್ಯಾಸಂಸ್ಥೆ ಎಂಬುದು ವಿದ್ಯಾರ್ಥಿಗಳ ಅಲ್ಪಸಮಯದ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ಅವರ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಯಪ್ರವೃತ್ತವಾಗುತ್ತದೆ. ಪದವಿ ಶಿಕ್ಷಣವು ಕೇವಲ ಶಿಕ್ಷಣವನ್ನು ನೀಡುವುದಲ್ಲದೆ ಉದ್ಯೋಗ ಜೀವನದಲ್ಲಿ ಬೇಕಾಗುವ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿಗೊಳಿಸಲು ಅವಕಾಶ ಕಲ್ಪಿಸುತ್ತದೆ ಎಂದರು.

ಕಾರ್ಯಾಗಾರದ ಮೊದಲ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಚಿಕ್ಕಮಗಳೂರು ಇಲ್ಲಿನ ಸಹಾಯಕ ಪ್ರಾಧ್ಯಾಪಕ
ಪ್ರೊ. ದೀಕ್ಷಿತ್ ಕುಮಾರ್ ಇವರು ‘ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿಜೀವನದಲ್ಲಿ ಇರುವ ಅವಕಾಶಗಳು’ ಎಂಬ ವಿಷಯವನ್ನುದ್ದೇಶಿಸಿ ಮಾತನಾಡಿದರು. ಎರಡನೆ ಅವಧಿಯ ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಹರಿಪ್ರಸಾದ್ ಎಸ್ ಇವರು ‘ಕೌಶಲ್ಯಾಭಿವೃದ್ಧಿ’ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ‘ಕಾಮ್ ಕ್ವೆಂಚ್’ ಎಂಬ ಶಿರೋನಾಮೆಯಡಿಯಲ್ಲಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾಲೇಜಿನ ಗ್ರಂಥಪಾಲಕರಾದ ರಾಮ ಕೆ., ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸಂಧ್ಯಾ ಲಕ್ಷ್ಮಿ, ಹರ್ಷಿತಾ, ಶಶಿಕಲಾ ಹಾಗೂ ಕಾಲೇಜಿನ ಇತರ ಪ್ರಾಧ್ಯಾಪಕರು, ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾಣಿಜ್ಯ ಸಂಘದ ಅಧ್ಯಕ್ಷೆ ಕವಿತಾ ಎಸ್. ಪೈ ಸ್ವಾಗತಿಸಿ, ಕೋಶಾಧಿಕಾರಿ ದೀಪಿಕಾ ವಂದಿಸಿದರು. ವಿದ್ಯಾರ್ಥಿ ಸಂಚಾಲಕ ಸಾರ್ಥಕ್ ಟಿ. ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here