ಅರುಣ್ ಕುಮಾರ್ ಪುತ್ತಿಲರಿಗೆ ಬಿಜೆಪಿಯಿಂದ ದೊರೆಯದ ಅವಕಾಶ-ಅಭಿಮಾನಿಗಳ ಆಕ್ರೋಶ-ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ತುರ್ತು ಸಭೆಯಲ್ಲಿ ಒಕ್ಕೊರಳ ಆಗ್ರಹ

0

2 ದಿನದಲ್ಲಿ ತಮ್ಮೆಲ್ಲರ ಯೋಚನೆಗಳನ್ನು ಸಾಕಾರಗೊಳಿಸುವ ಪ್ರಯತ್ನ ಮಾಡುತ್ತೇನೆ- ಬೆಂಬಲಿಗರಿಗೆ ಪುತ್ತಿಲ ಭರವಸೆ

ಕೊಟೇಚಾ ಹಾಲ್‌ನಲ್ಲಿ ನಡೆದ ಪುತ್ತಿಲ ಅಭಿಮಾನಿಗಳ ತುರ್ತು ಸಭೆ
ಪುತ್ತಿಲ ಪರ ಮುಗಿಲು ಮುಟ್ಟಿದ ಬೆಂಬಲಿಗರ ಕೂಗು
ನಾವು ಆರ್‌ಎಸ್‌ಎಸ್, ಬಿಜೆಪಿ ವಿರೋಧಿಗಳಲ್ಲ ಅಭ್ಯರ್ಥಿ ಆಯ್ಕೆ ರೀತಿಯ ಬಗ್ಗೆ ನೋವಿದೆ -ಭಾಸ್ಕರ ಆಚಾರ್ಯ ಹಿಂದಾರು

ಪುತ್ತೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಽಸಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷದ ಟಿಕೆಟ್ ದೊರೆಯದೇ ಇರುವುದರಿಂದ ಅಸಮಾಧಾನಗೊಂಡಿರುವ ಅವರ ಅಭಿಮಾನಿ, ಬೆಂಬಲಿಗರ ಆಕ್ರೋಶ ಭುಗಿಲೆದಿದ್ದು ತುರ್ತುಸಭೆ ನಡೆಸಿ ಪುತ್ತಿಲ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒಕ್ಕೊರಳಿನಿಂದ ಆಗ್ರಹಿಸಿರುವ ಘಟನೆ ನಡೆದಿದೆ.ಏ.12ರಂದು ಸಂಜೆ ಕೊಟೇಚಾ ಹಾಲ್‌ನಲ್ಲಿ ಪುತ್ತಿಲ ಅಭಿಮಾನಿಗಳ ಬೃಹತ್ ಸಮಾವೇಶ ನಡೆಯಿತು.


ಪುತ್ತೂರು ಕ್ಷೇತ್ರದಿಂದ ಅರುಣ್ ಕುಮಾರ್ ಪುತ್ತಿಲ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಹಿಂದೂ ಸಂಘಟನೆ ಕಾರ್ಯಕರ್ತರಿಂದ ಆಗ್ರಹ ವ್ಯಕ್ತವಾಗಿತ್ತಲ್ಲದೆ, ಪುತ್ತಿಲ ಅವರ ಅಭಿಮಾನಿಗಳು ಈ ಕುರಿತು ಟ್ವೀಟ್ ಅಭಿಯಾನ ನಡೆಸಿದ್ದರು.ಆದರೆ ಪುತ್ತಿಲ ಅವರಿಗೆ ಪಕ್ಷದ ಟಿಕೆಟ್ ಸಿಗದಾಗ ಬೆಂಬಲಿಗರು ತುರ್ತು ಸಭೆ ನಡೆಸಿದರು.ಸಾವಿರಾರು ಮಂದಿ ಬೆಂಬಲಿಗರು, ಅಭಿಮಾನಿಗಳು ಕಾರ್ಯಕರ್ತರು ಭಾಗವಹಿಸಿದ್ದು ಸಭಾಂಗಣ ತುಂಬಿ ತುಳುಕಿತ್ತು.


ಎರಡು ದಿನದಲ್ಲಿ ತಮ್ಮೆಲ್ಲರ ಯೋಚನೆಗಳನ್ನು ಸಾಕಾರಗೊಳಿಸುವ ಪ್ರಯತ್ನ ಮಾಡುತ್ತೇನೆ:
ಬೆಂಬಲಿಗರ ಅನಿಸಿಕೆಗಳನ್ನು ಆಲಿಸಿದ ಅರುಣ್ ಕುಮಾರ್ ಪುತ್ತಿಲ ಅವರು ಕೊನೆಗೆ ಮಾತನಾಡಿದರು.ಈ ಕ್ಷೇತ್ರವನ್ನು ಉಳಿಸಬೇಕು.ಸಾಮಾಜಿಕ ಬದ್ದತೆಯ ಜೊತೆಗೆ ಈ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿ ನಮ್ಮ ಅಸ್ಮಿತೆಯನ್ನು ಉಳಿಸುವ ಜೊತೆಗೆ ಹಿಂದು ಸಮಾಜದ ಪರವಾಗಿ ನಿಲ್ಲುವ ಚುನಾಯಿತ ಪ್ರತಿನಿಧಿಯನ್ನು ಈ ಕ್ಷೇತ್ರಕ್ಕೆ ಕೊಡಬೇಕು ಎಂಬ ಆಗ್ರಹದೊಂದಿಗೆ ಈ ಸಭೆಯಲ್ಲಿ ಸೇರಿದ ಎಲ್ಲಾ ಹಿಂದು ಕಾರ್ಯಕರ್ತರಿಗೆ ನಮನ ಮಾಡುತ್ತಿದ್ದೇನೆ ಎಂದು ಮಾತು ಆರಂಭಿಸಿದ ಪುತ್ತಿಲ ಅವರು ಚುನಾವಣೆಗೆ ಅಭ್ಯರ್ಥಿಯ ಪಟ್ಟಿ ನಿನ್ನೆ ರಾತ್ರಿ ಬಿಡುಗಡೆ ಆಗಿದೆ.ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ಜನಪ್ರತಿನಿಽಗಳ ಆಯ್ಕೆಯನ್ನು ಕಾರ್ಯಕರ್ತರ ಆಗ್ರಹಕ್ಕೆ ತಕ್ಕಂತೆ ಸಮೀಕ್ಷೆ ನಡೆಸಿ, ಪಕ್ಷದ ಕಚೇರಿಯಲ್ಲಿ ಚುನಾವಣೆಗೆ ಮತದಾನ ಮಾಡಿ.ಸಂಘಪರಿವಾರದ ಪ್ರಮುಖರು ಸೇರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ.ಆದರೆ ಈ ಬಾರಿ ಚುನಾವಣೆಯಲ್ಲಿ ಕಾರ್ಯಕರ್ತರ ನೋವಿಗೆ ಬೆಲೆ ಸಿಗದ ಸಂದರ್ಭ ಈ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕೆಂದು ಚಿಂತಿಸಬೇಕಾಗಿದೆ.ಪುತ್ತೂರು ಕ್ಷೇತ್ರದಲ್ಲಿ ಹಿಂದುತ್ವವನ್ನು ಉಳಿಸಲು ನಾವೆಲ್ಲ ಜೊತೆಯಾಗಿ ಸಾಗಬೇಕು.ಇಲ್ಲಿ ನಮಗೆ ಟಿಕೆಟ್ ಸಿಗಬೇಕೆಂಬ ನಿಟ್ಟಿನಲ್ಲಿ ಇವತ್ತಿನ ಸಭೆ ನಡೆಯುವುದಲ್ಲ ಎಂಬುದನ್ನು ಅತ್ಯಂತ ಸ್ಪಷ್ಟ ಸಂದೇಶ ಕೊಡುತ್ತೇನೆ.ಕಾರ್ಯಕರ್ತರ ಆಯ್ಕೆ ಹೇಗೂ ಇರಲಿ ಅದಕ್ಕೆ ಪೂರಕವಾಗಿ ಯಾವುದೇ ಕಾರ್ಯಕರ್ತ ವಿಧಾನಸಭೆ ಪ್ರವೇಶಿಸಿದರೆ ಮೊದಲು ಸಂತೋಷ ಪಡುವ ವ್ಯಕ್ತಿ ನಾನು ಎಂದರಲ್ಲದೆ ನಾನು ಜನಪ್ರತಿನಿಧಿಯಾಗಿ ಸ್ಪರ್ಧಿ ಸುವ ಆಗ್ರಹ ಮತ್ತು ನೋವಿನ ಕೂಗನ್ನು ಕಂಡಿದ್ದೇನೆ. ನಿಮ್ಮ ಪ್ರೀತಿ ವಿಶ್ವಾಸ ಆಶೀರ್ವಾದ ಇದ್ದರೆ ಯಾವುದನ್ನೂ ಸಾಧಿಸಬಹುದೆಂಬುದಕ್ಕೆ ಇವತ್ತು ಸೇರಿದ ಜನಸಾಗರವೇ ನಮಗೆಲ್ಲ ಸ್ಪೂರ್ತಿಯಾಗಿದೆ. ನಮಗೆಲ್ಲ ಕೆಲಸ ಮಾಡುವ ಶಕ್ತಿ ಭಗವಂತ ಕೊಡಲಿ. ಅದೇ ರೀತಿ ನೀವು ಕೊಟ್ಟ ಸಲಹೆ, ಯೋಚನೆಗಳನ್ನು ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪಕ್ಷದ ಮುಖಂಡರು. ಸಂಘ ಪರಿವಾರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು, ಸ್ವಾಮೀಜಿಗಳ ಆಶೀರ್ವಾದ ಪಡೆದು ಮಂದಿನ ೨ ದಿನದಲ್ಲಿ ತಮ್ಮೆಲ್ಲರ ಯೋಚನೆಗಳನ್ನು ಸಾಕಾರಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದರು.ಚುನಾವಣೆ ಎದುರಿಸಬೇಕೆಂಬ ನಿರ್ಣಯ ನಾವೆಲ್ಲ ತೆಗೆದುಕೊಂಡರೆ ಇಲ್ಲಿ ನೆರೆದಿರುವ ಬೆಂಬಲಿಗರ ಹತ್ತುಪಾಲು ಜನ ಚುನಾವಣೆ ಸಂರ್ಭದಲ್ಲಿ ಕಾರ್ಯಕರ್ತರಾಗಬೇಕು ಎಂದು ಪುತ್ತಿಲ ಹೇಳಿದರು.


ಏನೇ ಆದರೂ ನಾವು ಅರುಣ್ ಕುಮಾರ್ ಪುತ್ತಿಲರೊಂದಿಗೆ:
ಭಾಸ್ಕರ್ ಆಚಾರ್ಯ ಹಿಂದಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ದೇಶಕ್ಕಾಗಿ ಹಿಂದುತ್ವದ ವಿಚಾರ ಇಟ್ಟುಕೊಂಡಿರುವ ನಮ್ಮ ಕಾರ್ಯಕರ್ತ ಮಿತ್ರರು ಯಾವುದೇ ಅಪೇಕ್ಷೆ ಇಲ್ಲದೆ ಇರುವವರು.ನಮಗೆ ಹಿಂದುತ್ವ ಜೀವನದ ಅವಿಭಾಜ್ಯ ಅಂಗ.ಹಿಂದುತ್ವಕ್ಕಾಗಿ ಅನೇಕ ಹೋರಾಟದಲ್ಲಿ ಭಾಗವಹಿಸಿದ್ದೇವೆ.ಕರೆ ಕೊಟ್ಟಾಗ ನಿಮಿಷಾರ್ಧದಲ್ಲಿ ಸೇರಿದ್ದೇವೆ.ಇವತ್ತು ಹಿಂದುತ್ವದ ಶಕ್ತಿ ಏನೆಂದು ಯೋಚನೆ ಮಾಡಬೇಕಾಗಿದೆ.ಹಿಂದುತ್ವದ ಲಾಭ ಪಡೆದವರು ಇದ್ದಾರೆ.ಆದರೆ ಇಲ್ಲಿ ಸೇರಿದವರೆಲ್ಲ ಲಾಭ ಪಡೆದವರಲ್ಲ.ನೋವು ತಿಂದವರು. ಇವತ್ತು ಜಾತಿಯ ಆಧಾರದಲ್ಲಿ ಎಲ್ಲವನ್ನು ಪರಿಗಣನೆ ಮಾಡಲಾಗುವುದಿಲ್ಲ.ಜಾತಿ, ಕುಟುಂಬ ಮನೆಯಲ್ಲಿ ಇರಬೇಕು.ಹೊರ ತರಬಾರದು.ಈ ನಿಟ್ಟಿನಲ್ಲಿ ಏನೇ ಆದರೂ ನಾವು ಅರುಣ್ ಕುಮಾರ್ ಪುತ್ತಿಲ ಅವರ ಹಿಂದೆ ಇರಬೇಕು.ನೈಜ ಹಿಂದುತ್ವದ ಶಕ್ತಿ ಏನೆಂದು ತೋರಿಸಬೇಕು ಎಂದರು.ಶನಿ ಪೂಜೆ ಮಾಡುವ ಸಂದರ್ಭ ಹಿಂದುತ್ವ ಯಾರಿಗೆಲ್ಲ ಪೆಟ್ಟು ಕೊಟ್ಟಿದೆ ಎಂಬುದಕ್ಕೆ ನಾನೊಬ್ಬ ನೈಜ ಉದಾಹರಣೆ ಎಂದ ಅವರು, ಅಮಿತ್ ಷಾ , ನರೇಂದ್ರ ಮೋದಿಯವರು ನೈಜವಾಗಿ ಹಿಂದುತ್ವಕ್ಕೆ ಪೂರಕವಾಗಿ ಇರುವವರು.ನಾವು ಆರ್.ಎಸ್.ಎಸ್. ಅಥವಾ ಬಿಜೆಪಿ ವಿರೋಧಿಗಳಲ್ಲ. ಆದರೆ ಅಭ್ಯರ್ಥಿಯ ಆಯ್ಕೆ ನಡೆಯುವ ರೀತಿಯ ಬಗ್ಗೆ ನಮಗೆ ನೋವಿದೆ.ಈ ವಿಚಾರ ಸಂಬಂಧಿಸಿದವರಿಗೆ ತಿಳಿಯಪಡಿಸುವಂತಾಗಬೇಕು ಎಂದು ಹೇಳಿದರು.


ಬೆಂಬಲಿಗರ ಅಭಿಪ್ರಾಯಗಳು:
ಶೇಷಪ್ಪ ಅವರು ಮಾತನಾಡಿ ಹಿಂದುತ್ವ ಗಟ್ಟಿ ಇದ್ದಲ್ಲಿ ಏನೂ ಆಗುವುದಿಲ್ಲ.ಈ ನಿಟ್ಟಿನಲ್ಲಿ ನಮ್ಮ ನಾಯಕ ಅರುಣ್ ಕುಮಾರ್ ಪುತ್ತಿಲ ಬರಬೇಕು.ಇಲ್ಲಿ ಜಾತಿ ಬೇಡ. ನಾವೆಲ್ಲ ಒಂದೇ ಜಾತಿ ಅಹಂಕಾರ ನಿಲ್ಲಿಸಿ ಎಂದರಲ್ಲದೆ ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ನಿಲ್ಲಿಸಬೇಕು ಎಂದರು.ಸುದರ್ಶನ್ ಮುರ ಅವರು ಮಾತನಾಡಿ ಹಿಂದು ಸಮಾಜದ ಒಬ್ಬ ಗೌಡ ಜಾತಿಯವ ಎಂದು ಹೇಳಲು ನನಗೆ ಅಸಹ್ಯ ಆಗುತ್ತಿದೆ.ಪುತ್ತೂರಿನಲ್ಲಿ ಅಸಹ್ಯ ರಾಜಕೀಯ ನಡೆಯುತ್ತಿದೆ.ನಮಗೆ ೬೫ ವರ್ಷದ ಮಹಿಳೆ ಅಭ್ಯರ್ಥಿಯಾಗಿ ಬೇಕಿತ್ತಾ?.ಈ ಸಂದೇಶ ಬಿಜೆಪಿಗೆ ಕೊಡುವ ಎಂದರಲ್ಲದೆ, ನೋಟಾ ಮತದಾನ ಮಾಡದೆ ಸ್ವತಂತ್ರ ಅಭ್ಯರ್ಥಿಯನ್ನಾಗಿ ಅರುಣ್ ಕುಮಾರ್ ಪುತ್ತಿಲ ಅವರನ್ನು ನಿಲ್ಲಿಸೋಣ ಎಂದರು.ಕೊಡಿಪ್ಪಾಡಿ ಗ್ರಾ.ಪಂ ಸದಸ್ಯರೊಬ್ಬರು ಮಾತನಾಡಿ ಹಿಂದು ಭದ್ರಕೋಟೆಯನ್ನು ಉಳಿಸಲು ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಯಾವ ಪಕ್ಷದಲ್ಲಿ ಅರುಣ್ ಕುಮಾರ್ ಪುತ್ತಿಲ ನಿಂತರೂ ಅವರನ್ನು ಗೆಲ್ಲಿಸಿಯೇ ಸಿದ್ಧ ಎಂದರು.ಮೋನಪ್ಪ ಪುರುಷ ಅವರು ಮಾತನಾಡಿ ಪುತ್ತೂರಿಗೆ ಸಿಡಿಲಿನಂತೆ ಘರ್ಜಿಸುವ ಸಿಂಹದ ಮರಿ ಬೇಕಾಗಿದ್ದಾರೆ ಎಂದರು.ಹಿಂದು ಮಹಾಸಭಾದ ಸುಶಾಂತ್, ಕಬಕ ವಿದ್ಯಾಪುರದ ವ್ಯಕ್ತಿ ಸಹಿತ ಹಲವು ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದರು.ರವಿ ಕುಮಾರ್ ರೈ ಪ್ರಾರ್ಥಿಸಿದರು.ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.ಅಶೋಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಮಾತಿನ ಕೊನೆಯಲ್ಲಿ ಭಾವುಕರಾದ ಪುತ್ತಿಲ :
ಅರುಣ್ ಕುಮಾರ್ ಪುತ್ತಿಲ ಅವರು ತಮ್ಮ ಮಾತಿನ ಕೊನೆಯ ಕ್ಷಣದಲ್ಲಿ ಭಾವುಕರಾದ ಘಟನೆಯೂ ನಡೆಯಿತು. ನಾನು ಯಾವತ್ತು ಕೂಡಾ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಜೊತೆಗೆ ಕಷ್ಟಸುಖಗಳಲ್ಲಿ ದಿನದ 24 ಗಂಟೆಯಲ್ಲೂ ಯಾವುದೇ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿ ಭಾವುಕರಾದರು.

ಕಾರ್ಯಕರ್ತರ ನೋವಿಗೆ ಶಾಶ್ವತ ಪರಿಹಾರ ಬೇಕು
ಬಿಜೆಪಿಯ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ನಿನ್ನೆ ರಾತ್ರಿ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ.ಅವರ ಬಗ್ಗೆ ನಾನೇನೂ ಮಾತನಾಡುವುದಿಲ್ಲ.ಆದರೆ ಕಾರ್ಯಕರ್ತರ ಧ್ವನಿಯಾಗಿ ವಿಧಾನ ಸಭೆಯನ್ನು ಪ್ರತಿನಿಧಿಸುವ ಕೆಲಸ ಆಗಬೇಕಾಗಿದೆ.ನಮ್ಮ ಅನೇಕ ಕಾರ್ಯಕರ್ತರ ಮೇಲೆ ಕೇಸು, ರೌಡಿ ಲಿಸ್ಟ್ ಇದೆ.ಅನೇಕರ ಮೇಲೆ 107 ಕೇಸು ದಾಖಲಾಗಿದೆ.ಲವ್ ಜಿಹಾದ್, ಮತಾಂತರದ ವಿರುದ್ಧ ನಡೆದ ಘರ್ಷಣೆಯಲ್ಲೂ ಅನೇಕ ಅಮಾಯಕರ ಮೇಲೆ ಪೊಲೀಸ್ ದೌರ್ಜನ್ಯ ಆಗಿದೆ.ಅದಕ್ಕೆಲ್ಲ ಶಾಶ್ವತ ಪರಿಹಾರ ಆಗಬೇಕು.ಈ ಕೂಗು ವಿಧಾನಸಭೆಯಲ್ಲಿ ಪ್ರತಿನಿಧಿಸಬೇಕೆಂಬ ಕಾರಣಕ್ಕಾಗಿ ನಾವೆಲ್ಲ ಇಲ್ಲಿ ಒಂದೇ ವೇದಿಕೆಯಲ್ಲಿ ಸೇರಿದ್ದೇವೆ.ಜನಪ್ರತಿನಿಧಿಗಳು ಅಂಧಕಾರದ ಮದದಲ್ಲಿ ಇರಬಾರದು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ೧೦೦ನೇ ವರ್ಷದಲ್ಲಿ ಗ್ರಾಮ ಗ್ರಾಮದಲ್ಲಿ ಭಗವಧ್ವಜ ಹಾರಾಡಬೇಕು.ಹಿಂದುತ್ವದಲ್ಲಿ ಗೋ ಮಾತೆ ರಾಷ್ಟ್ರೀಯ ಪ್ರಾಣಿ ಆಗಬೇಕು.ಶನಿ ಪೂಜೆಯ ಸಂದರ್ಭದಲ್ಲಿ ಅನೇಕ ಕಾರ್ಯಕರ್ತರು ನೋವು ಅನುಭವಿಸಿದ್ದೇವೆ. ಎನ್‌ಕೌಂಟರ್ ಆದೇಶ ಕೊಡುವ ಸಂದರ್ಭವನ್ನೂ ಮರೆತ್ತಿಲ್ಲ.ಮಹಾಲಿಂಗೇಶ್ವರ ದೇವರ ಧರ್ಮಭೂಮಿಯಲ್ಲಿ ಸಂಕಲ್ಪ ಮಾಡಿ.ಸನಾತನ ಧರ್ಮ ಉಳಿಯಲು ಹಿಂದುತ್ವದ ಆಧಾರದಲ್ಲಿ ರಾಷ್ಟ್ರ ನಡೆಯಬೇಕು. ಕಾರ್ಯಕರ್ತರ ನೋವಿಗೆ ಶಾಶ್ವತ ಪರಿಹಾರ ಬೇಕು.ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರನಿರ್ಮಾಣದ ಆಶಯವನ್ನು ಸಾಕಾರಗೊಳಿಸವ ಪ್ರಯತ್ನ ಈ ಕ್ಷೇತ್ರದಿಂದ ಆಗಲಿ. ನಾನು ದಿನದ ೨೪ ಗಂಟೆಯಲ್ಲಿ ಯಾವ ಸಂದರ್ಭದಲ್ಲೂ ನಿಮ್ಮ ಜೊತೆ ಇದ್ದೇನೆ-
ಅರುಣ್ ಕುಮಾರ್ ಪುತ್ತಿಲ

ತುಂಬಿ ತುಳುಕಿದ ಸಭಾಂಗಣ
ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪುತ್ತಿಲ ಅವರಿಗೆ ಟಿಕೆಟ್ ದೊರೆಯದ ವಿಚಾರ ತಿಳಿಯುತ್ತಿದ್ದಂತೆ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ತುರ್ತು ಸಭೆ ಸೇರುವ ತೀರ್ಮಾನ ಕೈಗೊಂಡಿದ್ದರು.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆ ಮಾಡಿದರು.ಕೊಟೇಚಾ ಸಭಾಂಗಣದಲ್ಲಿ ಪುತ್ತಿಲ ಬೆಂಬಲಿಗರ ನೇತೃತ್ವದಲ್ಲಿ ನಡೆದ ತುರ್ತು ಸಭೆಗೆ ಬೆಂಬಲಿಗರ ದಂಡೇ ಆಗಮಿಸಿತ್ತು.ಕೆಲ ಕ್ಷಣದಲ್ಲೇ ಸಭಾಂಗಣ ಪೂರ್ತಿ ತುಂಬಿದ್ದು, ಸಭಾಂಗಣದ ಮೇಲಿನ ಅಂತಸ್ತಿನಲ್ಲೂ ಜನರು ತುಂಬಿದ್ದರು.

LEAVE A REPLY

Please enter your comment!
Please enter your name here