ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರ: ಮಠಂದೂರು, ಎಸ್.ಅಂಗಾರ ಅಸಮಾಧಾನ-ಮಠಂದೂರು ಮನೆಗೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕಾರ್ಯಕರ್ತರ ತರಾಟೆ

0

ಜಂಟಲ್‌ಮ್ಯಾನ್ ಪೊಲಿಟಿಷಿಯನ್ಅಂಗಾರ ಜೊತೆಗೆ ಮಾತನಾಡುವೆ-ಸಿಎಂ

ಪುತ್ತೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪುತ್ತೂರು, ಸುಳ್ಯ ಕ್ಷೇತ್ರದಿಂದ ಹಾಲಿ ಶಾಸಕರಾಗಿರುವ ಸಂಜೀವ ಮಠಂದೂರು ಮತ್ತು ಎಸ್.ಅಂಗಾರ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ದೊರೆಯದೇ ಇರುವುದಕ್ಕೆ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ.ಪಕ್ಷದ ಜಿಲ್ಲಾಧ್ಯಕ್ಷರು ಸಂಜೀವ ಮಠಂದೂರು ಅವರ ಮನೆಗೆ ಹೋದ ಸಂದರ್ಭದಲ್ಲಿ ಕಾರ್ಯಕರ್ತರು ಘೆರಾವ್ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.


ಮಠಂದೂರು ಬದಲು ಆಶಾ ತಿಮ್ಮಪ್ಪ:
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಸಂಜೀವ ಮಠಂದೂರು ಬದಲು ಮಾಜಿ ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರನ್ನು ಪಕ್ಷ ಆಯ್ಕೆ ಮಾಡಿದೆ.ಸುಳ್ಯದಲ್ಲಿ ಎಸ್.ಅಂಗಾರ ಅವರ ಬದಲು ಮಾಜಿ ಜಿ.ಪಂ.ಸದಸ್ಯೆ ಭಾಗೀರಥಿ ಮುರುಳ್ಯ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತಲೇ ಏ.೧೧ರಂದು ರಾತ್ರಿಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶದ ಹೇಳಿಕೆಗಳು ಪ್ರಸಾರವಾಗುತ್ತಿದ್ದವು.ಜಾತಿ ರಾಜಕೀಯ, ಬಿಜೆಪಿ ಯುಗಾಂತ್ಯ ಈ ರೀತಿಯಾಗಿ ನಾನಾ ರೀತಿಯ ಆಕ್ರೋಶದ ಹೇಳಿಕೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ರವಾನೆಯಾಗುತ್ತಿದ್ದವು. ತಮಗೆ ಪಕ್ಷದ ಟಿಕೆಟ್ ದೊರೆಯದೇ ಇರುವ ಬಗ್ಗೆ ಶಾಸಕ ಸಂಜೀವ ಮಠಂದೂರು ಮತ್ತು ಎಸ್.ಅಂಗಾರ ಅವರೂ ಅಸಮಾಧಾನ, ಬೇಸರ ವ್ಯಕ್ತಪಡಿಸಿದ್ದಾರೆ.ತನಗೆ ಪಕ್ಷದ ಟಿಕೆಟ್ ಕೈತಪ್ಪಲು ಕಾರಣವೇನು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.ಈ ಬಗ್ಗೆ ಸಣ್ಣ ಬೇಸರವಿದೆಯಾದರೂ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಸಂಜೀವ ಮಠಂದೂರು ಹೇಳಿದ್ದಾರೆ.ಆದರೆ,ಸುಳ್ಯ ಕ್ಷೇತ್ರದಿಂದ ಟಿಕೆಟ್ ದೊರೆಯದೇ ಇರುವುದರಿಂದ ಅಸಮಾಧಾನಗೊಂಡಿರುವ ಸಚಿವ ಎಸ್.ಅಂಗಾರ ಅವರು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದಾರಲ್ಲದೆ,ಪಕ್ಷದ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರಕ್ಕೂ ಹೋಗುವುದಿಲ್ಲ.ಹೊಸ ಅಭ್ಯರ್ಥಿಯ ಗೆಲುವಿನ ಬಗ್ಗೆ ಪಕ್ಷವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.


ಪುತ್ತಿಲ ಬೆಂಬಲಿಗರ ಸಭೆ ಪಕ್ಷೇತರವಾಗಿ ಕಣಕ್ಕಿಳಿಯಲು ಒತ್ತಾಯ:
ಮತ್ತೊಂದೆಡೆ, ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಈ ಬಾರಿಯೂ ಅವಕಾಶ ದೊರೆಯದೇ ಇರುವುದರಿಂದ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಏ.೧೨ರಂದು ಸಂಜೆ ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಪುತ್ತಿಲ ಅಭಿಮಾನಿಗಳ ಬೃಹತ್ ಸಭೆ ನಡೆದಿದೆ.ಅರುಣ್ ಕುಮಾರ್ ಪುತ್ತಿಲ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲೇಬೇಕು ಎಂದು ಅಭಿಮಾನಿಗಳು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ.ಸಾವಿರಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.ಒಂದೆರಡು ದಿನಗಳಲ್ಲಿ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.


ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಘೋಷಣೆಗೆ ಮೊದಲೇ ಎಚ್ಚರಿಕೆ:
ಕಾಂಗ್ರೆಸ್ ಪಕ್ಷ ಇನ್ನೂ ಅಭ್ಯರ್ಥಿಯನ್ನೇ ಘೋಷಿಸಿಲ್ಲ.ಇದರ ಮೊದಲೇ ಕೆಲವರು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿಯವರ ಪರ ಮಾತನಾಡಲಾರಂಭಿಸಿದ್ದಾರೆ.ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್ ನೀಡದೇ ಇದಲ್ಲಿ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘಟಕದ ಅಧ್ಯಕ್ಷೆ ಶಾರದಾ ಅರಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರೆ, ಶಕುಂತಳಾ ಶೆಟ್ಟಿಯವರಿಗೆ ಅವಕಾಶ ದೊರೆಯದೇ ಇದ್ದರೆ ಪಕ್ಷದ ಕೆಲವು ಪದಾಧಿಕಾರಿಗಳು ರಾಜೀನಾಮೆ ನೀಡಲಿದ್ದಾರೆ ಎಂದು ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ ಹೇಳಿದ್ದಾರೆ.

ಜಂಟಲ್‌ಮ್ಯಾನ್ ಪೊಲಿಟಿಷಿಯನ್
ಅಂಗಾರ ಜೊತೆಗೆ ಮಾತನಾಡುವೆ-ಸಿಎಂ
ಪಕ್ಷದ ಟಿಕೆಟ್ ದೊರೆಯದೇ ಅಸಮಾಧಾನಿತರಾಗಿರುವ ಸಚಿವ ಎಸ್.ಅಂಗಾರ ಅವರ ಜೊತೆಗೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಏ.೧೨ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು `ಸತ್ಯಕ್ಕೆ ಜಯ ಕೊಡಿ’ ಎಂದು ಪ್ರಾರ್ಥನೆ ಸಲ್ಲಿಸಿದ ಬೊಮ್ಮಾಯಿಯವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.ಟಿಕೆಟ್ ಸಿಗದವರನ್ನೂ ಪಕ್ಷ ಗೌರವದಿಂದ ಕಾಣಲಿದೆ.ಬೇಸರ ಆದವರ ಜೊತೆಗೂ ನಾನು ಮಾತನಾಡುತ್ತೇನೆ.ಪಕ್ಷ ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಮುಖಂಡರ ಜೊತೆಗೂ ಮಾತನಾಡುತ್ತಿದ್ದೇನೆ.ಪಕ್ಷವೇ ಅವರಿಗೆ ಶಾಸಕ ಸ್ಥಾನ ಸೇರಿದಂತೆ ಎಲ್ಲ ಅವಕಾಶಗಳನ್ನೂ ನೀಡಿದೆ.ಪಕ್ಷ ಸದಾ ಅವರನ್ನು ಗೌರವದಿಂದ ಕಾಣುತ್ತದೆ.ಮುಂದೆಯೂ ಗೌರವದಿಂದಲೇ ಕಾಣಲಿದೆ.ಅವರ ರಾಜಕೀಯ ಭವಿಷ್ಯ ಸುರಕ್ಷಿತವಾಗಿರುವ ರೀತಿಯಲ್ಲಿ ಪಕ್ಷ ನೋಡಿಕೊಳ್ಳುತ್ತದೆ.ಎಸ್.ಅಂಗಾರ, ಲಕ್ಷ್ಮಣ ಸವದಿ ಜೊತೆಗೂ ಮಾತನಾಡುತ್ತೇನೆ.ಅಂಗಾರರು ಜಂಟಲ್‌ಮ್ಯಾನ್ ಪೊಲಿಟಿಷಿಯನ್ ಅವರ ಜೊತೆಗೂ ಮಾತನಾಡಲಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.

ಎಂಎಲ್‌ಎ ಟಿಕೆಟ್ ವಂಚಿತರಾದ ಸಂಜೀವ ಮಠಂದೂರು ಅವರ ಮನೆಗೆ ಬುಧವಾರ ಸಂಜೆ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು ಕಾರ್ಯಕರ್ತರು ತರಾಟೆಗೆತ್ತಿಕೊಂಡ ಬಗ್ಗೆ ವರದಿಯಾಗಿದೆ.


ಮನೆಗೆ ಆಗಮಿಸುತ್ತಿದ್ದಂತೆಯೇ ಮನೆಯ ಹೊರಗೆಯೇ ತಡೆದ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಗಡೆವಿದರು. ಸಂಜೀವ ಮಠಂದೂರು ಅವರನ್ನು ಕಡೆಗಣಿಸಲು ಕಾರಣವೇನೆಂದು ಪ್ರಶ್ನಿಸಿದ ಕಾರ್ಯಕರ್ತರು ಹಾಗಾದರೆ ಮಂಡಲ, ಜಿಲ್ಲೆಯ ಪದಾಧಿಕಾರಿಗಳ ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಬೆಲೆ ಇಲ್ಲವೆಂದಾದರೆ ನೀವು ಹುದ್ದೆಯಲ್ಲಿರುವುದಾದರು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಜೀವ ಮಠಂದೂರು ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈಗ ಅವರನ್ನು ಕಡೆಗಣಿಸುವುದು ಎಂದಾದರೆ, ಇದರ ಅರ್ಥವೇನು? ಪ್ರಾಮಾಣಿಕರಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲ ಎಂದಾಯಿತು. ನಾವು ಬಿಜೆಪಿ ಪರವಾಗಿ ಕೆಲಸವೇ ಮಾಡುವುದಿಲ್ಲ. ನೀವೇ ಪ್ರಚಾರ ಕಾರ್ಯ ನಡೆಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಿ ಎಂದು ಅಸಹನೆ ಹೊರ ಹಾಕಿದರು. ಸುಮಾರು 15 ನಿಮಿಷದಷ್ಟು ಕಾಲ ಗೊಂದಲಗಳು ನಡೆದು, ಬಳಿಕ ನಾಯಕರು ಮನೆಯೊಳಗೆ ಹೋಗಿ ಸಂಜೀವ ಮಠಂದೂರು ಅವರನ್ನು ಮಾತನಾಡಿಸಿದರು.


ವಿಡೀಯೋ, ಪೊಟೋ ಡಿಲೀಟ್!?:
ಈ ಗೊಂದಲಗಳ ವೀಡಿಯೋ, ಪೋಟೋಗಳನ್ನು ಕೆಲವು ಕಾರ್ಯಕರ್ತರು ತೆಗೆದಿದ್ದು, ಬಳಿಕ ನಾಯಕರ ಸೂಚನೆಯಂತೆ ಅವುಗಳನ್ನು ಡಿಲೀಟ್ ಮಾಡಿಸಲಾಯಿತು ಎಂಬ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ. ಆದರೆ ಅದರಲ್ಲೊಂದು ವೀಡಿಯೋ ಮಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿದೆ.
ಬಿಜೆಪಿ ಜಿಲ್ಲಾಧ್ಯಕ್ಷರೊಂದಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ಬಿಜೆಪಿ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮತ್ತಿತರರಿದ್ದರು.

ಅಣ್ಣ ವಿಡಿಯೋ ಮಾಡ್ಬೇಡಿ
ವೀಡಿಯೋ ಮಾಡೋದೆ
ಪಕ್ಷದ ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಮಠಂದೂರು ಅವರ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಅಲ್ಲಿದ್ದ ಕಾರ್ಯಕರ್ತರು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭ ಮಾತನಾಡಿದ ಸುದರ್ಶನ್ ಅವರು ಅಣ್ಣ ವೀಡಿಯೋ ಮಾಡ್ಬೇಡಿ’ ಎಂದು ಹೇಳಿದಾಗ ಆ ಕಡೆಯಿಂದ ಮಹಿಳೆಯೋರ್ವರುವೀಡಿಯೋ ಮಾಡೋದೇ’ ಎಂದು ಆಕ್ರೋಶಿತರಾಗಿ ಹೇಳಿದರು. `ಸಂಜೀವಣ್ಣ ಜಿಲ್ಲಾಧ್ಯಕ್ಷರಾಗಿದ್ದಾಗ ನಾನು ಅವರ ಜೊತೆ ಜನರಲ್ ಸೆಕ್ರೆಟರಿ ಆಗಿ ಕೆಲಸ ಮಾಡಿದವ.ಸಂಜೀವಣ್ಣನ ಬಗ್ಗೆ ನೀವು ನನಗೆ ಹೇಳಬೇಕಾಗಿಲ್ಲ.ಅವರು ಹೇಗೆಂದು ನನಗೇ ಗೊತ್ತಿದೆ’ ಎಂದು ಸುದರ್ಶನ್ ಅವರು ಹೇಳುತ್ತಿದ್ದ ವೇಳೆ ಕಾರ್ಯಕರ್ತರು ವೀಡಿಯೋ ಚಿತ್ರೀಕರಣ ಮಾಡಲಾರಂಭಿಸಿದರು.ಈ ಸಂದರ್ಭ ಸುದರ್ಶನ್ ಅವರು ವೀಡಿಯೋ ಚಿತ್ರೀಕರಣ ಮಾಡೋದು ಬೇಡ ಎಂದು ಹೇಳಿದಾಗ ಆಕ್ರೋಶಿತ ಕಾರ್ಯಕರ್ತೆಯೋರ್ವರು ವೀಡಿಯೋ ಮಾಡೋದೇ ಎಂದು ಹೇಳಿದರು.ಜೊತೆಗಿದ್ದವರು ಅವರನ್ನು ಬೆಂಬಲಿಸಿ ಘೋಷಣೆ ಕೂಗಿದರು.ಬಳಿಕ ಸ್ವಲ್ಪ ಹೊತ್ತು ಸುದರ್ಶನ್ ಅವರು ಮೌನರಾದರು.

LEAVE A REPLY

Please enter your comment!
Please enter your name here