ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವ ಘೋಷಣೆ ಮಾಡಿಸಲಿ
ಕಳೆದ 5 ವರ್ಷಗಳಲ್ಲಿಯ ಕ್ಷೇತ್ರದ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲಿ
ಉತ್ತಮ ಕೆಲಸಕ್ಕೆ ಪುರಸ್ಕಾರ – ಕೆಟ್ಟ, ಕಳಪೆ ಕೆಲಸಗಳಿಗೆ ಬಹಿಷ್ಕಾರ ಮಾಡಲಿ
ನಮಗಾಗಿ, ನಮ್ಮಿಂದ, ನಮ್ಮದೇ ಆಡಳಿತ ಎಂಬ ನಮ್ಮ ಈ ಪ್ರಜಾಪ್ರಭುತ್ವದಲ್ಲಿ, ಪ್ರತೀ ಕ್ಷೇತ್ರದ ಮತದಾರರು ಈ ಚುನಾವಣೆಯ ಸಂದರ್ಭದಲ್ಲಿ ನಾವು ಮತದಾರರು, ರಾಜರುಗಳು ಎಂದು ಅರ್ಥ ಮಾಡಿಕೊಳ್ಳಬೇಕು. ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ನಮ್ಮ ಜನಸೇವಕರಾಗಲು, ಜನಸೇವೆ ಮಾಡಲು ಸ್ಪರ್ಧೆಗೆ ನಿಂತಿದ್ದಾರೆ ಎಂದು ತಿಳಿಯಬೇಕು. ಅದಕ್ಕಾಗಿ ನಾವು ಅವರನ್ನು ಆರಿಸುವ ಮುಂಚೆ ಜಾಗೃತರಾಗಬೇಕು, ಅವರು ಭರವಸೆಗಳನ್ನು ನೀಡುತ್ತಾರೆ. ಪಕ್ಷ, ಜಾತಿ, ಧರ್ಮದ ಹೆಸರಿನಲ್ಲಿ ವೋಟ್ ಕೇಳುತ್ತಾರೆ. ಅದರೊಂದಿಗೆ ಆಯಾ ಕ್ಷೇತ್ರದಲ್ಲಿ ಲಂಚ ಭ್ರಷ್ಟಾಚಾರ ನಿರ್ಮೂಲನೆ ಅತೀ ದೊಡ್ಡ ದೇಶ ಸೇವೆ ಮತ್ತು ಜನ ಸೇವೆ ಎಂದು ಪರಿಗಣಿಸಿ ತಾನು ಗೆದ್ದು ಬಂದರೆ ಅದನ್ನು ಕಾರ‍್ಯರೂಪಕ್ಕೆ ತರುತ್ತೇನೆ. ನನ್ನ ಕ್ಷೇತ್ರದಲ್ಲಿ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ. ಅಧಿಕಾರಿಗಳು ಲಂಚ ಭ್ರಷ್ಟಾಚಾರ ಮಾಡಿ, ಜನರಿಂದ ಸುಲಿಗೆ ಮಾಡಿದ(ಜನರನ್ನು ದರೋಡೆ ಮಾಡಿದ) ಹಣವನ್ನು ಜನರಿಗೇ ಹಿಂತಿರುಗಿಸುತ್ತೇನೆ ಎಂದು ವೋಟಿಗೆ ನಿಂತ ಅಭ್ಯರ್ಥಿಯಲ್ಲಿ ಪ್ರತಿಯೊಬ್ಬ ಮತದಾರರು ಪ್ರತಿಜ್ಞೆ ಮಾಡಿಸಬೇಕು. ಹಾಗೆ ಮಾಡಿದರೆ ಗೆದ್ದು ಬರುವ ಅಭ್ಯರ್ಥಿ ಮಾತ್ರವಲ್ಲ ಸೋತ ಅಭ್ಯರ್ಥಿ ಕೂಡ ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವಂತಾಗುತ್ತದೆ. ಅದರಿಂದಾಗಿ ನಮ್ಮ ತಾಲೂಕಿನ ಎಲ್ಲಾ ಕಛೇರಿಗಳು ಲಂಚ, ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ.
ಈ ವಿಚಾರವನ್ನು ಕಾರ್ಯರೂಪಕ್ಕೆ ತರಲು ಕಳೆದ 5 ವರ್ಷಗಳಲ್ಲಿ ಕ್ಷೇತ್ರಕ್ಕೆ ಬಂದ ಅನುದಾನ, ಮಾಡಿದ ಕಾಮಗಾರಿಗಳು, ಅಭಿವೃದ್ಧಿ ಕೆಲಸಗಳು, ಅವುಗಳ ಗುಣಮಟ್ಟ ಎಲ್ಲವನ್ನೂ ಪರಿಶೀಲಿಸಿ, ಉತ್ತಮ ಕೆಲಸವಾಗಿದ್ದಲ್ಲಿ ಈ 5 ವರ್ಷಗಳಲ್ಲಿ ಕೆಲಸಮಾಡಿದ ಶಾಸಕರನ್ನು, ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರನ್ನು ಅಭಿನಂದಿಸಬೇಕು. ಕಳಪೆ ಕಾಮಗಾರಿಗಳಾಗಿದ್ದಲ್ಲಿ, ಭ್ರಷ್ಟಾಚಾರ ನಡೆದಿದ್ದಲ್ಲಿ, ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳನ್ನು, ಶಾಸಕರನ್ನು ಹೊಣೆಗಾರರನ್ನಾಗಿ ಮಾಡಿ ಪ್ರಶ್ನಿಸಬೇಕು. ಕಳಪೆ ಕೆಲಸಗಳಿಗೆ ನೇರ ಹೊಣೆಗಾರರಾಗಿರುವ ಗುತ್ತಿಗೆದಾರರನ್ನು, ಅಧಿಕಾರಿಗಳನ್ನು ಖಂಡಿಸಬೇಕು. ಆ ಬಗ್ಗೆ ಸೂಕ್ತ ಕ್ರಮಕ್ಕೆ, ಸರಿಯಾದ ಪರಿಹಾರಕ್ಕೆ ಆಗ್ರಹಿಸಬೇಕು. ಹಾಗೆ ಮಾಡಿದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಇನ್ನು ಮುಂದೆ ಆರಿಸಿಬರುವ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಕ್ಕೆ ಪುರಸ್ಕಾರವನ್ನು ಪಡೆಯುತ್ತಾರೆ. ಲಂಚ, ಭ್ರಷ್ಟಾಚಾರ ಮಾಡಿದ್ದಲ್ಲಿ ಬಹಿಷ್ಕಾರಕ್ಕೆ ಒಳಗಾಗುತ್ತಾರೆ ಎಂಬ ಸಂದೇಶವನ್ನು ಮತದಾರರು ನೀಡಿದಂತೆ ಆಗುತ್ತದೆ. ನಾವು ಮತದಾರರು ರಾಜರುಗಳು. ನಮ್ಮ ಓಟಿನಿಂದ ನಮ್ಮ ಜನಪ್ರತಿನಿಧಿಯ ಆಯ್ಕೆ. ಅಇವರು ನಮ್ಮ ಜನಸೇವೆಗಾಗಿ ನಮ್ಮ ಶಾಸಕರಾಗುತ್ತಾರೆ. ಹೊರತು ನಮ್ಮ ರಾಜರುಗಳಾಗುವುದಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಯೊಂದಿಗೆ ನಮ್ಮ ಕ್ಷೇತ್ರದ ಅಧಿಕಾರಿಗಳು ಉತ್ತಮ ಕೆಲಸಮಾಡುವಂತೆ, ಲಂಚ ಭ್ರಷ್ಟಾಚಾರ ಮಾಡದಂತೆ, ಕಳಪೆ ಕೆಲಸಗಳು ಆಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿರುತ್ತದೆ ಎಂಬುವುದನ್ನು ನಾವು ಮತದಾರರು ಅರಿತುಕೊಳ್ಳಬೇಕು. ಅದನ್ನು ಕಾರ್ಯರೂಪಕ್ಕೆ ತರಲು ಈ ಚುನಾವಣೆಯನ್ನು, ಮತದಾನವನ್ನು ಬಳಸಿಕೊಳ್ಳಬೇಕು ಎಂಬುದೇ ಈ ಲೇಖನದ ಆಶಯ ಎಂದು ತಿಳಿಸಲು ಇಚ್ಚಿಸುತ್ತೇನೆ.
ಡಾ.ಯು.ಪಿ.ಶಿವಾನಂದ