ಕಡಬ,: ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದ ನಂದಕುಮಾರ್ ಇದೀಗ ತನ್ನ ನಿರ್ಧಾರ ಬದಲಾಯಿಸಿದ್ದು ಮುಂದಿನ ಚುನಾವಣೆಯಲ್ಲಿ ತಟಸ್ಥರಾಗಿರಲು ತೀರ್ಮಾನಿಸಿರುವ ಬಗ್ಗೆ ತಿಳಿದು ಬಂದಿದೆ. ಕೆಪಿಸಿಸಿ ಸದಸ್ಯ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಹೆಚ್.ಎಂ.ನಂದಕುಮಾರ್ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕುರಿತು ಏ.18ರಂದು ಕಡಬದಲ್ಲಿ ನಡೆದ ನಂದಕುಮಾರ್ ಅಭಿಮಾನಿ ಬಳಗದ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ನಂದಕುಮಾರ್ ಬಣ ಚುನಾವಣಾ ಕಣದಲ್ಲಿ ತಟಸ್ಥರಾಗಿ ಇರಲು ನಿರ್ಧರಿಸಲಾಗಿದೆ. ಪಕ್ಷೇತರರಾಗಿ ಸ್ಪರ್ಧೆ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದ ಹಿನ್ನಲೆಯಲ್ಲಿ ಅವರ ಮಾತಿಗೆ ಬೆಲೆ ಕೊಟ್ಟು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ನಂದಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿದರೂ ಎಂ ನಂದಕುಮಾರ್ ಅವರಿಗೆ ಬಿ ಫಾರಂ ಸಿಗಬೇಕು ಎಂದು ಹೈಕಮಾಂಡ್ ಬಳಿ ಬೇಡಿಕೆ ಇಟ್ಟು ಹೋರಾಟ ಮಾಡಿದ್ದೇವೆ. ಕೊನೆಯವರೆಗೆ ನಾವೆಲ್ಲರೂ ಬದಲಾವಣೆಯ ನಿರೀಕ್ಷೆಯಲ್ಲಿದ್ದೆವು. ಆದರೆ ಬಿ ಫಾರಂ ನಂದಕುಮಾರ್‌ಗೆ ಕೈ ತಪ್ಪಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳದೆ ತಟಸ್ಥರಾಗಿ ಉಳಿಯುವ ನಿರ್ಣಯಕ್ಕೆ ಬಂದಿರುತ್ತೇವೆ ಎಂದು ನಂದಕುಮಾರ್ ಅಭಿಮಾನಿಗಳು ತಿಳಿಸಿದ್ದಾರೆ. ಈ ಬಗ್ಗೆ ನಂದ ಕುಮಾರ್ ಅಭಿಮಾನಿ ಬಳಗದ ಮುಂದಾಳು ಬಾಲಕೃಷ್ಣ ಬಳ್ಳೇರಿಯವರು ಪ್ರತಿಕ್ರಿಯೆ ನೀಡಿ, ಏ.21ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಿರ್ಧಾರದ ಸಂಪೂರ್ಣ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದ್ದಾರೆ. ಈ ಬಾರಿ ಸುಳ್ಯ ವಿಧಾನಸಭೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಂದಕುಮಾರ್ ಅವರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸಿದ್ದರು. ಈ ಕುರಿತು ನಿಂತಿಕಲ್‌ನಲ್ಲಿ ಬೃಹತ್ ಸಮಾವೇಶ ನಡೆಸಿದ್ದ ನಂದಕುಮಾರ್ ಅಭಿಮಾನಿಗಳು ನಂದಕುಮಾರ್ ಅವರಿಗೆ ಪಕ್ಷದ ಬಿ ಫಾರಂ ದೊರೆಯದಿದ್ದಲ್ಲಿ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ತೀರ್ಮಾನಿಸಿದ್ದರು. ಆದರೆ ಜಿ. ಕೃಷ್ಣಪ್ಪ ಅವರಿಗೆ ಪಕ್ಷ ಬಿ ಫಾರಂ ನೀಡಿದ್ದು ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗೆಗಳ ಬೆನ್ನಲ್ಲೇ ನಂದಕುಮಾರ್ ಅವರು ಸ್ಪರ್ಧೆಯಿಂದ ಹಿಂದೆ ಪಡೆಯುವ ನಿರ್ಧಾರ ಕೈಗೊಂಡ್ಗಿದ್ದಾರೆ.