ಪುತ್ತೂರು: ಬಸ್ ನಿಲ್ದಾಣದ ಬಳಿಯ ಜ್ಯೂಸ್ ಸೆಂಟರ್‌ನಲ್ಲಿ ಜ್ಯೂಸ್ ಕುಡಿಯುತ್ತಿದ್ದ ಸಹಪಾಠಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ವಿದ್ಯಾರ್ಥಿಯನ್ನು ಕರೆದೊಯ್ದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೇ.2ರಂದು ಪ್ರಕರಣ ದಾಖಲಾಗಿದೆ.ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ನಾನು ಮತ್ತು ನನ್ನ ತರಗತಿಯ ವಿದ್ಯಾರ್ಥಿನಿ ಬಸ್ಸ್ ನಿಲ್ದಾಣದ ಲಸ್ಸಿ ಸೆಂಟರ್ ನಲ್ಲಿ ಜ್ಯೂಸ್ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಸುಮಾರು 15 ಮಂದಿ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿಗಳು ಮತ್ತು ಆಟೋ ಚಾಲಕರೊಬ್ಬರು ನನ್ನ ಹೆಸರು ಕೇಳಿ, ನಿನ್ನಲ್ಲಿ ಮಾತನಾಡಲಿದೆ ಎಂದು ಹೇಳಿ ರೂಮ್‌ಗೆ ಕರೆದೊಯ್ದು ಅಲ್ಲಿ ನನಗೆ ವೈರ್ ಮತ್ತು ಲಾಠಿಯಿಂದ ಹಲ್ಲೆ ನಡೆಸಿ ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದರೆ ಪೋಕ್ಸೊ ಕಾಯ್ದೆ ದಾಖಲಾಗುವಂತೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಮೊಹಮ್ಮದ್ ಫರೀಸ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಹಲ್ಲೆ ಘಟನೆಯನ್ನು ಎಸ್‌ಡಿಪಿಐ ಮತ್ತು ಮುಸ್ಲಿಂ ಯುವಜನ ಪರಿಷತ್ ಖಂಡಿಸಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ.