ಪಾರ್ಲಿಮೆಂಟ್ ಚುನಾವಣೆಯೊಳಗೆ ಸಿಎಂ ಬೊಮ್ಮಾಯಿಯವರ ಶಿಗ್ಗಾಂವಿ, ಮಾಜಿ ಸಿಎಂ ಸಿದ್ಧರಾಮಯ್ಯರ ವರುಣಾ ಕ್ಷೇತ್ರವನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡಿಯೇ ಸಿದ್ಧ – ಪಕ್ಷೇತರ ಅಭ್ಯರ್ಥಿ ಡಾ.ಯು.ಪಿ.ಶಿವಾನಂದರಿಂದ ಸುದ್ದಿಗೋಷ್ಠಿ

0

  • ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರೂ ನನಗೆ ವೋಟ್ ಬೇಡ
  • ಅಭ್ಯರ್ಥಿಗಳಲ್ಲಿ ಲಂಚ,ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿಸುವುದೇ ನನಗೆ ನೀಡುವ ವೋಟು

ಹಾವೇರಿ: ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಆಂದೋಲನದ ಮುಂದಿನ ಹೆಜ್ಜೆಯಾಗಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾಂವಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದ ಮತದಾರರಿಗೆ ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಸುದ್ದಿ ಜನಾಂದೋಲನ ವೇದಿಕೆ ಸಂಚಾಲಕ ಡಾ.ಯು.ಪಿ.ಶಿವಾನಂದ ಅವರು ಮೇ 2ರಂದು ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಉದ್ದೇಶದ ಮಾಹಿತಿ ನೀಡಿದ್ದಾರೆ.

ನಾನು ಶಿಗ್ಗಾಂವಿ ಮತ್ತು ವರುಣಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೂ ನನಗೆ ವೋಟ್ ನೀಡಬೇಡಿ.ನಿಮಗೆ ಬೇಕಾದ ಉತ್ತಮ ಅಭ್ಯರ್ಥಿಯನ್ನು ಗೆಲ್ಲಿಸಿರಿ. ಆದರೆ ಅಭ್ಯರ್ಥಿಗಳಲ್ಲಿ, ಲಂಚ ಭ್ರಷ್ಟಾಚಾರ ನಿಲ್ಲಿಸುತ್ತೀರಾ? ಮತ್ತು ಲಂಚವಾಗಿ ಅಧಿಕಾರಿಗಳು ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುತ್ತೀರಾ?ಎಂದು ಪ್ರಶ್ನೆ ಕೇಳಿದರೆ ಅದು ನನಗೆ ದೊರೆತ ಮತವೆಂದು ಪರಿಗಣಿಸುತ್ತೇನೆ. ಆ ಪ್ರಯತ್ನದ ಮೂಲಕ ಲಂಚ ಭ್ರಷ್ಟಾಚಾರ ಮುಕ್ತ ಕ್ಷೇತ್ರವಾದರೆ ಅದು ಸುದ್ದಿ ಜನಾಂದೋಲನಕ್ಕೆ ಸಿಕ್ಕಿದ ಜಯವೆಂದೂ ಪರಿಗಣಿಸುತ್ತೇನೆ ಎಂಬ ಮಾತನ್ನು ಮತದಾರರ ಮುಂದೆ ಇರಿಸಿದ್ದೇನೆ. ಈ ಮಾತಿಗೆ ವರುಣದಲ್ಲಿ ಅಪಾರ ಬೆಂಬಲ ದೊರಕಿದೆ. ಶಿಗ್ಗಾಂವಿಯಲ್ಲಿಯೂ ಒಂದೇ ದಿನದಲ್ಲಿ ಹಲವಾರು ಜನ ಬೆಂಬಲ ನೀಡಿದ್ದಾರೆ. ಆ ಕುರಿತು ನಾವು ನೀಡಿದ -ಲಕಗಳನ್ನು ಅಲ್ಲಲ್ಲಿ ಅಳವಡಿಸಿದ್ದಾರೆ ಎಂದರು.

ವರುಣಾ ಮತ್ತು ಶಿಗ್ಗಾಂವಿಯಲ್ಲಿ ಸ್ಪರ್ಧೀಸುವ ಅಭ್ಯರ್ಥಿಗಳು ತಾವು ಸೋತರೂ, ಗೆದ್ದರೂ ಲಂಚ ಭ್ರಷ್ಟಾಚಾರ ನಿಲ್ಲಿಸುತ್ತೇವೆ. ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುತ್ತೇವೆ ಎಂಬ ಪ್ರತಿಜ್ಞೆ ಮಾಡುವಂತೆ ಮಾಡಲು ಮತದಾರರ ಜಾಗೃತಿ ಮಾಡಲಿದ್ದೇವೆ. ಆ ಮೂಲಕ ತಾಲೂಕನ್ನು ಭ್ರಷ್ಟಾಚಾರ ಮುಕ್ತ ಮಾಡಲಿದ್ದೇವೆ ಎಂಬ ಬಗ್ಗೆ ಕರಪತ್ರದಲ್ಲಿ ನೀಡಲಾಗಿದೆ ಹಾಗೂ ಆ ಕುರಿತು ಕೆಲವು ದಾಖಲೆಗಳನ್ನು ನೀಡಲಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕ್ಷೇತ್ರ ವರುಣಾದಲ್ಲಿಯೂ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಯಲ್ಲಿಯೂ ಸರಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಇದೆ, ಇತರ ಕ್ಷೇತ್ರಗಳಿಗಿಂತ ಕಡಿಮೆ ಏನೂ ಇಲ್ಲ ಎಂಬ ಅಭಿಪ್ರಾಯ ಜನರಲ್ಲಿದೆ. ಈ ನೆಲೆಯಲ್ಲಿ ನಾನು ವರುಣಾ ಹಾಗೂ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯಾಗಿ ಇಲ್ಲಿ ಯಾರೇ ಗೆದ್ದರೂ, ಸೋತರೂ, ಯಾರೇ ಮುಖ್ಯಮಂತ್ರಿಯಾದರೂ, ಆಗದೇ ಇದ್ದರೂ ಈ ಎರಡು ಕ್ಷೇತ್ರಗಳನ್ನು ಮುಂದಿನ ಪಾರ್ಲಿಮೆಂಟ್ ಚುನಾವಣೆಯ ಅಥವಾ ಪಂಚಾಯತ್ ಚುನಾವಣೆಯ ಒಳಗಡೆ ಲಂಚ ಭ್ರಷ್ಟಾಚಾರ ಮುಕ್ತ ಕ್ಷೇತ್ರವನ್ನಾಗಿ ಮಾಡುವುದಲ್ಲದೇ, ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯವನ್ನು ಅಲ್ಲಿ ಪ್ರತಿಪಾದಿಸಲಿದ್ದೇನೆ ಎಂದು ತಿಳಿಸಲು ಇಚ್ಚಿಸುತ್ತೇನೆ ಎಂದು ಅವರು ಹೇಳಿದರು.

ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಚುನಾವಣೆ ಕಳೆದು ತಿಂಗಳೊಳಗೆ ಭ್ರಷ್ಟಾಚಾರ ಮುಕ್ತ ತಾಲೂಕು ಘೋಷಣೆಯಾಗಲಿದೆ: ಸುಳ್ಯ, ಪುತ್ತೂರು, ಬೆಳ್ತಂಗಡಿ ಕ್ಷೇತ್ರಗಳಲ್ಲಿ ಈ ಚುನಾವಣೆ ಕಳೆದ ಒಂದು ತಿಂಗಳ ಒಳಗಾಗಿ ಲಂಚ ಭ್ರಷ್ಟಾಚಾರ ಮುಕ್ತ ತಾಲೂಕು ಘೋಷಣೆಯಾಗಲಿದೆ.ಮತ್ತು ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವ ಕೆಲಸವನ್ನು ಪ್ರಾರಂಭಿಸಲಿದ್ದಾರೆ. ಯಾಕೆಂದರೆ ಅಲ್ಲಿ ಸ್ಪರ್ಧೆಗೆ ನಿಂತಿರುವ ಎಲ್ಲಾ ಅಭ್ಯರ್ಥಿಗಳು ತಾವು ಸೋತರೂ, ಗೆದ್ದರೂ ಆ ವಿಷಯವನ್ನು ಕೈಗೆತ್ತಿಕೊಳ್ಳಲಿದ್ದಾರೆ. ದ.ಕ. ಜಿಲ್ಲೆಯ ಇತರ ಕ್ಷೇತ್ರಗಳಲ್ಲಿಯ ಅಭ್ಯರ್ಥಿಗಳೂ ಮುಂಬರುವ ಯಾವುದೇ ಚುನಾವಣೆಯ ಒಳಗಾಗಿ ಆ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ ಡಾ.ಶಿವಾನಂದರು, ರಾಜ್ಯದ ಎಲ್ಲಾ ಕೇಂದ್ರಗಳು ಪಾರ್ಲಿಮೆಂಟ್ ಚುನಾವಣೆಯ ಒಳಗಾಗಿ ಲಂಚ ಭ್ರಷ್ಟಾಚಾರ ಮುಕ್ತವಾಗಬೇಕು. ಅಲ್ಲಿ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯದ ಆಶಯ ಕಾರ್ಯರೂಪಕ್ಕೆ ಬರಬೇಕೆಂಬ ಆಶಯಕ್ಕೆ ಮಾಧ್ಯಮದವರಾದ ನಿಮ್ಮ ಬೆಂಬಲ ಅವಶ್ಯಕತೆಯಿದೆ ಎಂದರು.
ಪುತ್ತೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸಲು ಸಂಸದ ತೇಜಸ್ವಿ ಸೂರ್ಯ, ರಾಜ್ಯ ಬಿಜೆಪಿ ಉಸ್ತುವಾರಿ ಅಣ್ಣಾಮಲೈ, ರಾಷ್ಟ್ರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬಂದಿರುವುದು, ಯೋಗಿ ಆದಿತ್ಯನಾಥರನ್ನು ಕರೆಸುತ್ತಿರುವುದು, ಸುಳ್ಯಕ್ಕೆ ಪುತ್ತೂರಿಗೆ ರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಂದಿರುವುದು, ದೇವೇ ಗೌಡರು ಬರುತ್ತಿರುವುದು ಪ್ರಜಾಪ್ರಭುತ್ವದ ನನ್ನ ನಂಬಿಕೆಗೆ ಬಲ ಕೊಟ್ಟಿದೆ. ಒಂದು ಸೀಟ್ ಗೆಲ್ಲಿಸಲು ಮತ್ತು ತಮ್ಮ ಪಕ್ಷದ ಪ್ರತಿಷ್ಠೆ ಉಳಿಸಿಕೊಳ್ಳಲು ಪ್ರಧಾನಿ ಮೋದಿಯವರು ಸೇರಿದಂತೆ ರಾಷ್ಟ್ರ ನಾಯಕರು ಇಷ್ಟೆಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದಾದರೆ ಲಂಚ ಭ್ರಷ್ಟಾಚಾರ ನಿಲ್ಲಿಸಲು ಅವರು ಹೋರಾಟ ಮಾಡುವಂತೆ ಮಾಡುವುದು ಮತದಾರರಿಗೆ ಬಹಳ ಸುಲಭ ಎಂದು ನಂಬಿದ್ದೇನೆ. ನೀವು ಮಾಧ್ಯಮದವರು ಮನಸ್ಸು ಮಾಡಿದರೆ ಮುಂದಿನ ಯಾವುದೇ ಚುನಾವಣೆಯ ಒಳಗಾಗಿ ಯಾವುದೇ ಕ್ಷೇತ್ರದಲ್ಲಿ ಲಂಚ ಭ್ರಷ್ಟಾಚಾರ ನಿಲ್ಲಿಸಬಹುದು ಎಂದು ಹೇಳಿದ ಡಾ.ಶಿವಾನಂದರು ಮಾಧ್ಯಮದವರ ಬೆಂಬಲವನ್ನು ಕೋರುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here