ಪಕ್ಷದ ಸಭೆಯಲ್ಲಿ ಚರ್ಚೆಗೆ ಬಂದರೆ ಉತ್ತರಿಸುವೆ-ಸತೀಶ್ ಕುಂಪಲ
ರಾಜ್ಯ ಮಟ್ಟದಲ್ಲೇ ತೀರ್ಮಾನವಾಗಬೇಕಿದೆ-ದಯಾನಂದ ಶೆಟ್ಟಿ ಉಜಿರೆಮಾರು
ಪುತ್ತೂರು: ಅರುಣ್ ಕುಮಾರ್ ಪುತ್ತಿಲರಿಗೆ ನೀಡಿದ್ದ ಭರವಸೆ ಈಡೇರಿಸದ ವಿಚಾರದಲ್ಲಿ ಕಾರ್ಯಕರ್ತರಲ್ಲಿ ಉಂಟಾಗಿರುವ ಅಸಮಾಧಾನ ಕುರಿತು, ಪಕ್ಷದ ಸಭೆಯಲ್ಲಿ ಚರ್ಚೆಯಾದಾಗ ಉತ್ತರ ನೀಡುತ್ತೇನೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.ಇದು ರಾಜ್ಯ ಮಟ್ಟದ ನಿರ್ಧಾರ ಎಂದು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ನಂತರದಲ್ಲಾದ ರಾಜಕೀಯ ಬೆಳವಣಿಗೆಯಲ್ಲಿ, ಪಕ್ಷಕ್ಕೆ ಮರುಸೇರ್ಪಡೆ ಸಂದರ್ಭ ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡಿದ್ದ ಭರವಸೆಗಳು ಈಡೇರದೇ ಇದ್ದ ಹಿನ್ನೆಲೆಯಲ್ಲಿ, ಪುತ್ತಿಲ ಪರಿವಾರದಲ್ಲಿ ಸಕ್ರಿಯರಾಗಿರುವ ಬಿಜೆಪಿ ಪ್ರಮುಖರು ತುರ್ತು ಸಭೆ ಸೇರಿ ಕೈಗೊಂಡಿರುವ ತೀರ್ಮಾನದ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರನ್ನು ಸಂಪರ್ಕಿಸಿದಾಗ, ಈ ವಿಚಾರ ಪಕ್ಷದ ಸಭೆಯಲ್ಲಿ ಚರ್ಚೆಗೆ ಬಂದ ಸಂದರ್ಭ ಉತ್ತರ ನೀಡುತ್ತೇನೆ ಹೊರತು ಯಾರೋ ಎಲ್ಲೆಲ್ಲಿಯೋ ಕುಳಿತು ಸಭೆ ಮಾಡಿದ್ದಕ್ಕೆಲ್ಲ ಉತ್ತರ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಮಟ್ಟದ ವಿಚಾರ:
ಪುತ್ತಿಲ ಪರಿವಾರದ ಬಿಜೆಪಿ ಪ್ರಮುಖರ ತುರ್ತು ಸಭೆ ನಡೆದಿರುವುದು ತಿಳಿದಿದೆ.ಆದರೆ ಇದು ನಮ್ಮ ಮಂಡಲದ ವತಿಯಿಂದ ಆಗುವ ವಿಚಾರ ಅಲ್ಲ.ರಾಜ್ಯಮಟ್ಟದ ನಿರ್ಧಾರ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದ್ದಾರೆ.
ಪುತ್ತಿಲ ಪರಿವಾರ ಪಕ್ಷದೊಂದಿಗೆ ವಿಲೀನವಾದ ವಿಚಾರ ರಾಜ್ಯಮಟ್ಟದಲ್ಲಿ ಆಗಿರುವುದು.ಅದಾದ ಬಳಿಕ ಅವರ ಕಡೆಯಿಂದ ಇಬ್ಬರಿಗೆ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿತ್ತು.ಅರುಣ್ ಕುಮಾರ್ ಪುತ್ತಿಲರಿಗೆ ಜವಾಬ್ದಾರಿ ಕೊಡುವ ಕುರಿತು ಪ್ರಧಾನ ಕಾರ್ಯದರ್ಶಿಗಳು ಬೇಡಿಕೆ ಇಟ್ಟಿದ್ದರು.ಆದರೆ,ಅದರ ಬಗ್ಗೆ ತೀರ್ಮಾನ ಮಾಡುವುದು ರಾಜ್ಯಮಟ್ಟದಲ್ಲಿ ಎಂದಿರುವ ಉಜಿರೆಮಾರು, ರಾಜ್ಯದಲ್ಲಿಯೂ ವಿಜಯೇಂದ್ರ ಅವರ ನಾಯಕತ್ವವು ಪರಿಪೂರ್ಣ ಆಗಿಲ್ಲ.ಹಾಗಾಗಿ ಅರುಣ್ ಕುಮಾರ್ ಪುತ್ತಿಲರಿಗೆ ಜವಾಬ್ದಾರಿ ಕೊಡುವ ವಿಚಾರ ಮಂಡಲ ಮಟ್ಟದಲ್ಲೂ ಇಲ್ಲ,ಜಿಲ್ಲಾಮಟ್ಟದಲ್ಲೂ ಇಲ್ಲ.ರಾಜ್ಯಮಟ್ಟದಲ್ಲಿಯೇ ತೀರ್ಮಾನ ಆಗಬೇಕಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.