ಪುತ್ತೂರು ಸೇರಿದಂತೆ ರಾಜ್ಯದಲ್ಲಿ 130 ಸ್ಥಾನ ಗಳಲ್ಲಿ ಬಿಜೆಪಿ ಗೆಲುವು ಖಚಿತ, 130ರಲ್ಲಿ ಒಂದು ಸೀಟೂ ಕಡಿಮೆ ಆಗುವುದಿಲ್ಲ – ಡಿ.ವಿ.ಸದಾನಂದ ಗೌಡ

0

ನಾನು ಬಿಜೆಪಿಯಲ್ಲಿ ಇದ್ದವರಿಗೆ ಆಪ್ತ ಮಿತ್ರ ಪಕ್ಷ ಬಿಟ್ಟು ಹೋದವರಿಗೆ ಆಪ್ತಮಿತ್ರನಲ್ಲ
ಯಾರೇ ಅಭ್ಯರ್ಥಿಯಾದರೂ ಇಲ್ಲಿ ಬಿಜೆಪಿಯನ್ನು ಏನೂ ಮಾಡಲಾಗುವುದಿಲ್ಲ

ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲೂ 130ರಲ್ಲಿ ಒಂದು ಸೀಟು ಕೂಡಾ ಕಡಿಮೆ ಆಗದೆ ಬಿಜೆಪಿ ಗೆಲುವು ಸಾಧಿಸಲಿದೆ. 130ರಲ್ಲಿ ಪುತ್ತೂರು ಕೂಡಾ ಸೇರಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರಾಗಿರುವ ಬೆಂಗಳೂರು ಉತ್ತರದ ಸಂಸದ ಡಿ.ವಿ.ಸದಾನಂದ ಗೌಡ ಅವರು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರ ಮತಯಾಚನೆಗೆ ಮೇ 2ರಂದು ಪುತ್ತೂರಿಗೆ ಆಗಮಿಸಿದ ಅವರು ಪುತ್ತೂರು ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಪ್ರಧಾನ ಮಂತ್ರಿ ಮೋದಿಯಿಂದ ಹಿಡಿದು ಅಮಿತ್ ಶಾ, ಜೆಪಿ ನಡ್ಡಾ ಅವರಿಂದ ಹಿಡಿದು ಎಲ್ಲಾ ನಾಯಕರು ತಮ್ಮ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಮೂರುನಾಲ್ಕು ದಿನಗಳಿಂದ ಪ್ರಧಾನಿಯವರ ರ‍್ಯಾಲಿಗಳು ಜಗತ್ತಿಗೆ ತೋರಿಸಿ ಕೊಡುವ ಕೆಲಸ ಆಗಿದೆ. ಮೇ 6ಕ್ಕೆ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಸುಮಾರು 32 ಕಿ.ಮೀ ರ‍್ಯಾಲಿ ಮಾಡಲಿದ್ದಾರೆ. ಇದು ಕೂಡಾ ಜನರ ಅಪೇಕ್ಷೆ ಮೇರೆಗೆ ಆಗುತ್ತಿದೆ. ಹಾಗಾಗಿ ಯಾವುದೇ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿಗೆ 130ಕ್ಕಿಂತ ಒಂದು ಸೀಟು ಕೂಡಾ ಕಡಿಮೆ ಆಗುವುದಿಲ್ಲ. ಪುತ್ತೂರು ಕೂಡಾ ಆ 130ರಲ್ಲಿ ಇದೆ, 22 ಸಾವಿರ ಮತಗಳ ಅಂತರದಿಂದ ಈ ಕ್ಷೇತ್ರವನ್ನು ನಾವು ಗೆಲ್ಲಲಿದ್ದೇವೆ ಎಂದು ಹೇಳಿದರು.

ಬಿಜೆಪಿಯನ್ನು ಯಾರಿಗೂ ಏನೂ ಮಾಡಲು ಆಗುವುದಿಲ್ಲ. ಬಿಜೆಪಿ ಭದ್ರಕೋಟೆಯಲ್ಲಿ ಬಿರುಕನ್ನು ಉಂಟು ಮಾಡುವವರೇ ಬಲಿಯಾಗುತ್ತಾರೆ ಹೊರತು ಬಿಜೆಪಿ ಯಾವತ್ತೂ ಬಲಿಯಾಗುವುದಿಲ್ಲ. ಈ ಅಪಪ್ರಚಾರ ನನ್ನ ಜೀವನದುದ್ದಕ್ಕೂ ನಾನು ಅಪಪ್ರಚಾರ ಕಂಡವನು. ಪ್ರಚಾರ ಅಪಪ್ರಚಾರಗಳನ್ನು ತಲೆಯಲ್ಲಿಟ್ಟುಕೊಂಡು ರಾಜಕಾರಣ ಮಾಡಲು ಆಗುವುದಿಲ್ಲ. ನಿಮ್ಮ ಅಂತ:ಕರಣ ಸಾಕ್ಷಿಯಾಗಿ ನೀವು ನಡೆದುಕೊಳ್ಳಬೇಕು. ಮಹಾಲಿಂಗೇಶ್ನರ ದೇವರ ಮಹಿಮೆ, ಹಿರಿಯ ಕಿರಿಯ ಶಕ್ತಿಯಿಂದ ನಾನು ಉತ್ತಮ ಸ್ಥಾನ ಪಡೆದಿದ್ದೇನೆ. ಮುಂದೆ ಅದೇ ಅದೇ ಶಕ್ತಿ ಆಶಾಕ್ಕನನ್ನು ವಿಧಾನಸಭೆಗೆ ಕಳುಹಿಸುತ್ತದೆ ಎಂಬುದಕ್ಕೆ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಜನತೆ ಪಕ್ಷದ ರಿಪೋರ್ಟ್ ಕಾರ್ಡ್‌ಗಳನ್ನು ಮೌಲ್ಯ ಮಾಪನ ಮಾಡಲಿದ್ದಾರೆ: ಬಿಜೆಪಿ 8 ವರ್ಷ, ಜೆಡಿಎಸ್ 12 ವರ್ಷ, ಕಾಂಗ್ರೆಸ್ 50 ವರ್ಷಕ್ಕೂ ಮೇಲ್ಪಟ್ಟು ಆಡಳಿತ ಮಾಡಿತ್ತು. ಎಲ್ಲಾ ಪಕ್ಷಗಳು ಚುನಾವಣೆ ಬಂದಾಗ ಭರವಸೆ ನೀಡುತ್ತವೆ. ಎಲ್ಲಾ ಪಕ್ಷಗಳು ಆಡಳಿತ ಮಾಡುವ ಸಂದರ್ಭದಲ್ಲಿ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ರಿಪೋರ್ಟ್ ಕಾರ್ಡ್ ಮಾಡಬೇಕು. ನಾವು 8 ವರ್ಷದ ರಿಪೋರ್ಟ್ ಕಾರ್ಡ್‌ನ್ನು ಮಂಡನೆ ಮಾಡುತ್ತಿದ್ದೇವೆ. ನಮಗಿಂತ ಹೆಚ್ಚು ಆಡಳಿತ ಮಾಡಿದ ಜೆಡಿಎಸ್ ಮತ್ತು ಕಾಂಗ್ರೆಸ್ ಕೂಡಾ ರಿಪೋರ್ಟ್ ಕಾರ್ಡ್ ಮಂಡನೆ ಮಾಡಲಿ. ಇದರ ಮೌಲ್ಯ ಮಾಪನವನ್ನು ಮತದಾರರು ಮಾಡಲಿದ್ದಾರೆ. ಈ ಹೊಸ ರಾಜಕೀಯ ಚುನಾವಣಾ ಸೂತ್ರವನ್ನು ನಾವು ಜನತೆಯ ಮುಂದಿಡುತ್ತೇವೆ.ನಮ್ಮದು ಗ್ಯಾರೆಂಟಿ ಕಾರ್ಡ್ ಹಾಕಿ ಅಭಿವೃದ್ಧಿಯಲ್ಲ.ನಮ್ಮ ರಿಪೋರ್ಟ್ ಕಾರ್ಡ್‌ಗಳನ್ನು ಜನತೆ ಮೌಲ್ಯ ಮಾಪನ ಮಾಡಬೇಕೆಂದು ಡಿವಿಎಸ್ ಹೇಳಿದರು.

ಗೂಂಡಾ ರಾಜಕಾರಣ ಮಾಡಲು ಬಿಡುವುದಿಲ್ಲ ಹಾವಿಗೆ ಪ್ರಾಯ ಆಗಿರಬಹುದು, ವಿಷಕ್ಕಾಗಿಲ್ಲ: ಜನರ ನಂಬಿಕೆಗೆ ಅರ್ಹವಾಗುವ ಆಡಳಿತ, ಶಾಂತಿ ಸುವ್ಯವಸ್ಥೆ,ಸಾಮಾಜಿಕ ವ್ಯವಸ್ಥೆ ಜೋಡಣೆಯನ್ನು ಬಿಜೆಪಿ ಮಾಡುತ್ತಾ ಬಂದಿದೆ. ಪುತ್ತೂರಿನ ವ್ಯವಸ್ಥೆ ಒಂದು ಕಾಲದಲ್ಲಿ 90ರ ದಶಕದಲ್ಲಿ
ಅಡಿಕೆ ಮಾರಲು ಬಂದವರಿಗೆ ತಲವಾರು ತೋರಿಸಿ ಹಣ ದೋಚುತ್ತಿದ್ದ ಗೂಂಡಾ ಸಾಮ್ರಾಜ್ಯ ನಿರ್ಮಾಣ ಆಗಿತ್ತು. ಶಿರಾಡಿ,ನೆಲ್ಯಾಡಿಯಲ್ಲಿ ನಮ್ಮ ಕಾರ್ಯಕರ್ತರನ್ನು ಬೂತ್‌ನಲ್ಲಿ ಕುಳಿತುಕೊಳ್ಳಲು ಬಿಡುತ್ತಿರಲಿಲ್ಲ. ಈಶ್ವರಮಂಗಲ ಒಂದು ರೀತಿ ಮಿನಿ ಪಾಕಿಸ್ಥಾನ ಆಗಿತ್ತು. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರಿಗೂ ನೆಮ್ಮದಿ ಕೊಡುವ ರಾಜನೀತಿಯನ್ನು ಬಿಜೆಪಿ ಮಾಡಿ ಪುತ್ತೂರಿನಲ್ಲಿ ಸಾಮಾನ್ಯ ಜನರು ಕೂಡಾ ಗೌರವದಿಂದ, ನೆಮ್ಮದಿಯ ಜೀವನ ನಡೆಸಲು ಬಿಜೆಪಿ ಕಾರಣವಾಗಿದೆ. ಗೂಂಡಾ ಸಾಮ್ರಾಜ್ಯಕ್ಕೆ ಇತ್ತಿಶ್ರೀ ಹಾಕಿದ್ದನ್ನು ಮತ್ತೆ ಪುನರ್ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಪಾರ್ಟಿ ಪ್ರಯತ್ನ ಪಡುತ್ತಾ ಇದೆ ಮತ್ತು ಸ್ವಯಂ ಘೋಷಿತ ಖಲಿಸ್ಥಾನ್ ಕಮಾಂಡೋ ರೀತಿಯಲ್ಲಿ ಹಿಂದು ನಾಯಕರ ರೀತಿಯಲ್ಲಿ ಘೋಷಿಸಿಕೊಂಡ ನಾಯಕ ಕೂಡಾ ಇದೇ ವ್ಯವಸ್ಥೆ ಮಾಡುತ್ತಿದ್ದಾರೆ.ನಮ್ಮೊಂದಿಗೆ ಬಂದರೆ ಸರಿ.ಇಲ್ಲವಾದರೆ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡುವ ಕೆಲಸ ಆಗುತ್ತಿದೆ.ಆದರೆ, ನಾವೇನು ಶಸ್ತಾಸ ಕೆಳಗಿಡಲಿಲ್ಲ.ಹಾವು ಸ್ವಲ್ಪ ಪ್ರಾಯವಾಗಿರಬಹುದು.ಆದರೆ ಅದರ ವಿಷಕ್ಕಲ್ಲ, ಗೂಂಡಾ ರಾಜ್ಯ ಸ್ಥಾಪಿಸಲು ಪ್ರಯತ್ನಿಸಿದರೆ ತಕ್ಕ ಪಾಠ ಕಲಿಸಲು ನಾವು ಸಿದ್ಧ, ಜನರೂ ನಿಮ್ಮನ್ನು ಬಿಡುವುದಿಲ್ಲ ಎಂದು ಡಿವಿ ಹೇಳಿದರು.

ಬಿಜೆಪಿಯಲ್ಲಿದ್ದವರಿಗೆಲ್ಲ ನಾನು ಆಪ್ತಮಿತ್ತ, ಪಾಲುದಾರ ಪಕ್ಷ ಬಿಟ್ಟು ಹೋದವರಿಗಲ್ಲ: ನನ್ನ ಬಗ್ಗೆ ಅನೇಕ ಟ್ವೀಟ್‌ಗಳಿವೆ. ವಿರೋಧ ಪಕ್ಷದವರೇ ನನಗೆ ಟ್ಟೀಟ್ ಕಳುಹಿಸಿದ್ದಾರೆ. ಸದಾನಂದ ಗೌಡ ಆಮದು ಅಭ್ಯರ್ಥಿಯ ಪರವಾಗಿ ಬರಲಿದ್ದಾರೋ? ಅವರ ಪಾಲುದಾರರ ಸ್ನೇಹಿತರಾಗಿ ಬರುವರೋ ಎಂದು ಟ್ವೀಟ್‌ನಲ್ಲಿತ್ತು. ಆದರೆ ಬಿಜೆಪಿಯಲ್ಲಿ ಯಾರೆಲ್ಲ ಜನರಿದ್ದಾರೋ ಅವರಿಗೆಲ್ಲ ನಾನು ಆಪ್ತಮಿತ್ರ. ಪಕ್ಷದಲ್ಲಿರುವವರಿಗೆಲ್ಲ ನಾನು ಪಾಲುದಾರ. ಆದರೆ ಪಕ್ಷ ಬಿಟ್ಟು ಹೋದವರಿಗೆ ಆಪ್ತ ಮಿತ್ರನೂ ಅಲ್ಲ. ಪಾಲುದಾರನೂ ಅಲ್ಲ. ನನ್ನ ಪಕ್ಷ ನಿಷ್ಟೆಯ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ.ಮಹಾಲಿಂಗೇಶ್ವರನ ಮತ್ತು ಹಿರಿಯರ ಆಶೀರ್ವಾದದಿಂದ ಎಲ್ಲಾ ಸ್ಥಾನಗಳನ್ನು ನಾನು ಅಲಂಕರಿಸಿದ್ದು ಅತ್ಯಂತ ಸಂತೃಪ್ತನಾಗಿದ್ದೇನೆ.ಇನ್ನು ನಾನೇನು ಪಕ್ಷಕ್ಕೆ ಕೊಡಬೇಕೆಂದು ಅದನ್ನು ಕೊಡುತ್ತಿದ್ದೇನೆ ಎಂದ ಡಿವಿಎಸ್ ಹೇಳಿದರು.

ಬಿಜೆಪಿ ಬಲಿಷ್ಟವಾದಲ್ಲಿ ಮಹಿಳೆಯರಿಗೆ ಸ್ಥಾನ: ಪುತ್ತೂರು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ. ಬೇರೆ ಪಕ್ಷಗಳಲ್ಲಿ ಎಲ್ಲಿ ಸೋಲುತ್ತದೆಯೋ ಅಲ್ಲಿ ಮಹಿಳೆಯರಿಗೆ ಸೀಟ್ ಕೊಡುವ ಕೆಲಸ ಆಗುತ್ತಿದೆ. ಆದರೆ ಬಿಜೆಪಿ ಎಲ್ಲಿ ಬಲಿಷ್ಟವಾಗಿದೆಯೋ ಅಲ್ಲಿ ಮಹಿಳೆಯರಿಗೆ ಸೀಟ್ ಕೊಡಲು ನಿಶ್ಚಯಿಸಿದೆ. ಈ ನಿಟ್ಟಿನಲ್ಲಿ ಮಠಂದೂರು ಮತ್ತು ಸುಳ್ಯದ ಅಂಗಾರ ಆದರ್ಶ ರಾಜಕಾರಣಿ ಅವರು ತಮ್ಮ ಸ್ಥಾನ ಬಿಟ್ಟು ಕೊಟ್ಟು ಮಹಿಳೆಯರಿಗೆ ಅವಕಾಶ ನೀಡಿದ್ದಾರೆ ಎಂದು ಡಿವಿಎಸ್ ಹೇಳಿದರಲ್ಲದೆ, ನನ್ನ ಪಕ್ಷದಲ್ಲಿ ತನಗೆ ಅವಕಾಶ ದೊರೆಯಲಿಲ್ಲ ಎಂದು ಸ್ವಯಂಘೋಷಿತ ನಾಯಕನೆಂದು ಹೇಳಿಕೊಂಡು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವವರು ಮತ್ತು ತಾನೋರ್ವ ಸ್ವಯಂಘೋಷಿತ ಹಿಂದುನಾಯಕ ಎಂದು ಹೇಳಿಕೊಂಡು ಪಕ್ಷದ ವಿರುದ್ದ ಮಾತನಾಡುವುದು ರಾಜಕಾರಣ ಅಲ್ಲ ಎಂದರು.

ಸಿಕ್ಕಿದ ಅವಕಾಶದಿಂದ ಸಂತೃಪ್ತಿ ಪಡೆಯಬೇಕು: ಕಾಂಗ್ರೆಸ್ ಅಭ್ಯರ್ಥಿಯಾಗಿರುವವರಿಗೆ ಹಿಂದೆ ಬಿಜೆಪಿಯು ಮಂಗಳೂರು ವಿವಿ ಸೆನೆಟ್ ಸದಸ್ಯತ್ವ ನೀಡಿತ್ತು.ಸುಳ್ಯ ಪುತ್ತೂರಿನಲ್ಲಿರುವ ಸಾವಿರಾರು ಕಾರ್ಯಕರ್ತರಲ್ಲಿ ಎಷ್ಟು ಜನರಿಗೆ ಇಂತಹ ಅವಕಾಶ ಸಿಕ್ಕಿದೆ ಎಂದು ಪ್ರಶ್ನಿಸಿದ ಡಿವಿಎಸ್ ಅವರು, ಸಿಕ್ಕಿರುವ ಅವಕಾಶದಲ್ಲಿ ಸಂತೃಪ್ತಿ ಪಡೆದವರು ಸಮಾಜದಲ್ಲಿ ಅತ್ಯದ್ಭುತ ಅದ್ಭುತ ನಾಯಕನಾಗಬಹುದೆಂಬುದಕ್ಕೆ ನರೇಂದ್ರ ಮೋದಿಯವರೇ ಉದಾಹರಣೆ ಎಂದರು.

ಎತ್ತಿನಹೊಳೆ ಕೆಲಸ ಆಗಿಲ್ಲ, ಹೊಳೆ ಬತ್ತಲು ನಾನು ಕಾರಣನಲ್ಲ: ಎತ್ತಿನ ಹೊಳೆ ಕುರಿತು ಇವತ್ತು ಕ್ರಿಕೆಟ್ ಆಡುವ ಮೂಲಕ ವ್ಯಂಗ್ಯ ಮಾಡುತ್ತಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ 1300 ಟಿಎಂಸಿ ನೀರು ಸಮುದ್ರಕ್ಕೆ ಹೋಗುವ ನೀರಿನಲ್ಲಿ 23 ಟಿಎಮ್‌ಸಿ ಕುಡಿಯಲು ನೀರು ಕೊಡಲು ಯೋಗ್ಯತೆ ಇಲ್ಲದಿದ್ದರೆ ನಾನು ಈ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾಲಾಯಕ್. ಕೇವಲ ನೂರು ದಿನಗಳ ಕಾಲ ಮಳೆಗಾಲದಲ್ಲಿ ಮಾತ್ರ ಆ ನೀರನ್ನು ಉಪಯೋಗಿಸಲಾಗುತ್ತದೆ. 23 ಟಿಎಮ್‌ಸಿ ಕೊಡುವುದು ಅನ್ಯಾಯ ಅಂತ ಆದರೆ ಇವತ್ತು ಎತ್ತಿನ ಹೊಳೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ನೇತ್ರಾವತಿ ಇವತ್ತು ಬತ್ತಲು ಸದಾನಂದ ಗೌಡ ಕಾರಣ ಅಲ್ಲ. ನೀರು ಈಗ ಲಿಫ್ಟ್ ಆಗುತ್ತಿಲ್ಲ.‌ ಸಂಬಂಧವಿಲ್ಲದ ಕುಮಾರಧಾರೆಯೂ, ಪಯಸ್ವಿನಿ ನದಿಯೂ ಬತ್ತಿದೆ. ಈ ನಿಟ್ಟಿನಲ್ಲಿ ಆರೋಪಗಳನ್ನು ಮಾಡುವುದು, ಇದು ರಾಜಕಾರಣದಲ್ಲಿ ರಾಜಕೀಯ ಸೂತ್ರವಲ್ಲ ಎಂದು ಡಿವಿಎಸ್ ಹೇಳಿದರು.

ಸಣ್ಣ ಕಂಪೆನಿಯಲ್ಲಿ ಪಾಲುದಾರ: ನಿಮ್ಮ ಮಿತ್ರ ಕಾಂಗ್ರೆಸ್‌ಗೆ ಹೋದವರು ನಿಮ್ಮ ಪಾಲುದಾರರರು, ಅವರಲ್ಲಿ ನಿಮ್ಮ ಎಲ್ಲಾ ಬೇನಾಮಿಗಳು ಇದೆ ಎಂದು ಯಾರಾದರೂ ಆರೋಪ ಮಾಡಿದರೆ ಐಟಿ ದಾಳಿ ಆಗಲಿ ಸ್ವಾಗತಿಸುತ್ತೇನೆ.ಆದರೂ ಸದಾನಂದ ಗೌಡರದ್ದು ಏನಾದರೂ ಒಂದು ಸಣ್ಣ ಕಂಪೆನಿಯಲ್ಲಿ ಪಾಲುದಾರಿಕೆ ಇರಬಹುದು.ಸದಾನಂದ ಗೌಡರ ಯಾವುದೇ ಬೇನಾಮಿ ಸ್ವತ್ತುಗಳು ಅಶೋಕ್ ರೈಯವರಲ್ಲಿ ಇದ್ದರೆ ಅದನ್ನು ಮುಟ್ಟುಗೋಲು ಹಾಕಬೇಕು ಎಂದು ನನ್ನ ವಿನಂತಿ ಎಂದು ಡಿವಿಎಸ್ ಹೇಳಿದರಲ್ಲದೆ ಅಶೋಕ್ ರೈಗೆ ಪ್ರತ್ಯಕ್ಷ, ಪರೋಕ್ಷವಾಗಿ ನಾನು ಏನಾದರೂ ಸಹಕಾರ ಮಾಡಿದ್ದೇ ಆದರೆ ಖಂಡಿತವಾಗಿಯೂ ನೀವು ಹೇಳಿದ್ದನ್ನು ಕೇಳುತ್ತೇನೆ, ರಾಜಕೀಯ ನಿವೃತ್ತಿ ಇವೆಲ್ಲ ಸಣ್ಣ ಪದಗಳು ಎಂದರು.

ಒಟ್ಟಿಗೆ ಇರುವಾಗ ದೇವರು.. ಹೊರ ಹೋದಾಗ ದೆವ್ವ: ಇಲ್ಲಿ ಕೆಲವರು ತಮ್ಮ ಜೊತೆ ಇದ್ದಾಗ ದೇವರಂತೆ, ಅದೇ ಅವರ ಸ್ವಾರ್ಥಕ್ಕೆ ಬೆಂಬಲ ಮಾಡದಿದ್ದರೆ ಅವರು ದೆವ್ವಗಳಾಗುತ್ತಾರೆ ಎಂಬುದಕ್ಕೆ ನಮ್ಮ ಪಕ್ಷೇತರ ಅಭ್ಯರ್ಥಿ, ಯಾವತ್ತೂ ನಮ್ಮ ಪ್ರಸಾದ್ ಭಂಡಾರಿಯವರ ಆಸ್ಪತ್ರೆಯಲ್ಲಿ ಇರುತ್ತಿದ್ದರು.ಡಾ.ಪ್ರಭಾಕರ ಭಟ್ ಎಂದರೆ ಅವರಿಗೆ ದೇವರು.ಇವತ್ತು ಅವರಿಬ್ಬರೂ ಅವರಿಗೆ ದೆವ್ವವಾಗಿ ಕಾಣುತ್ತಿದ್ದಾರೆ.ವ್ಯಕ್ತಿ ತನ್ನ ಅಸೆ, ಆಕಾಂಕ್ಷೆಗಳಿಗೆ ಪಕ್ಷವನ್ನು ಬಲಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಡಿವಿ ಆರೋಪಿಸಿದರು.

ಪಕ್ಷೇತರ, ಕಾಂಗ್ರೆಸ್ ಒಳ ಒಪ್ಪಂದ: ಪಕ್ಷೇತರ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ. ಅವರ ಆಟ ನಡೆಯುವುದಿಲ್ಲ. ಹಣದ ಆಟವೂ ನಡೆಯುವುದಿಲ್ಲ. ಈಗಾಗಲೇ ಅವರಿಬ್ಬರು ಜಂಟಿ ಸರ್ವೆ ಮಾಡಿಸಿ ಯಾರಿಗೆ ಹೆಚ್ಚು ಬೆಂಬಲವಿದೆಯೋ ಅವರಿಗೆ ಬೆಂಬಲ ನೀಡಿ ಬಿಜೆಪಿಯನ್ನು ಸೋಲಿಸುವ ಪ್ರಯತ್ನ ನಡೆಸುತ್ತಿರುವ ವರದಿ ನಮಗೆ ಬಂದಿದೆ, ಆದರೆ ಯಾರೇ ಅಭ್ಯರ್ಥಿಯಾದರೂ ಇಲ್ಲಿ ಬಿಜೆಪಿಯನ್ನು ಏನೂ ಮಾಡಲು ಸಾಧ್ಯವಿಲ್ಲ. ಮಠಂದೂರು ಅವರಿಗಿಂತ 3 ಸಾವಿರ ಹೆಚ್ಚು ಅಂದರೆ ಸುಮಾರು 22 ಸಾವಿರ ಮತಗಳ ಅಂತರದಿಂದ ಇಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸುತ್ತೇವೆ ಎಂದು ಡಿವಿಎಸ್ ಹೇಳಿದರು. ಶಾಸಕ ಸಂಜೀವ ಮಠಂದೂರು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ, ನಗರ ಮಂಡಲದ ಅದ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು.

ಬಜರಂಗದಳವನ್ನು ತಾಕತ್ ಇದ್ರೆ ಬ್ಯಾನ್ ಮಾಡಿ ತೋರಿಸಿ

ನಿಮಗೆ ತಾಕತ್ ಇದ್ರೆ ಬಜರಂಗದಳ ಬ್ಯಾನ್ ಮಾಡಿ ತೋರಿಸಿ.ಬಜರಂಗದಳ ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆ.ದೇಶ ವಿರೋಧಿ ಸಂಘಟನೆ ಅಲ್ಲ. ಮಹಿಳೆಯರ ರಕ್ಷಣೆ, ಗೋ ಕಳ್ಳರ ಹುಟ್ಟು ಅಡಗಿಸುವ ಬಜರಂಗದಳವನ್ನು ನಿಷೇಽಸಿದರೆ ಮಹಿಳೆಯರು ಸಿಡಿದೇಳಲಿದ್ದಾರೆ, ಹಿಂದೂ ಹೆಣ್ಣು ಮಕ್ಕಳ, ಮಹಿಳೆಯರ ರಕ್ಷಣೆ ಜತೆಗೆ ಯಾವುದೇ ಒಂದು ಕೆಲಸವನ್ನು ಒಂದು ನಿರ್ಧಾರ ಇಟ್ಟುಕೊಂಡು ಮಾಡುವ ಬಜರಂಗದಳವನ್ನು ನಿಷೇಧಿಸುವ ಕುರಿತು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು, ತಾಕತ್ತಿದ್ದರೆ ಕಾಂಗ್ರೆಸ್ ಬಜರಂಗದಳ ಕಾರ್ಯಕರ್ತರ ಮೈಮುಟ್ಟಿ ನೋಡಲಿ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಸವಾಲೆಸೆದರು.

ಶನಿಪೂಜೆಯಲ್ಲಿ ಅವರ ಶನಿ ಬಿಡಿಸಿದ್ದೂ ನೋಡಿದ್ದೀರಿ !

ನಾನಿರುವಾಗ ನಮ್ಮೊಂದಿಗೆ ಪಕ್ಷದಲ್ಲಿ ಭಾಸ್ಕರ್ ಆಚಾರ್ಯ ಮತ್ತು ಇದೇ ಅರುಣ್ ಪುತ್ತಿಲ ಕೆಲಸ ಮಾಡಿದ್ದಾರೆ. ಹಾಗೆಂದು ಶನಿಪೂಜೆಯಲ್ಲಿ ಅವರ ಶನಿ ಬಿಡಿಸಿದ್ದೂ ನೋಡಿದ್ದೀರಿ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿ.ವಿ.ಎಸ್ ಅವರು, ಈ ವಿಚಾರದ ವಿವರಣೆ ನಿಮಗೆ ಕೊಡಬೇಕಾಗಿಲ್ಲ. ನಿಮಗೇ ಗೊತ್ತಿದೆ ಎಂದರು. ಎನ್‌ಕೌಂಟರ್ ವಿಚಾರ ಪ್ರಸ್ತಾಪವಾದಾಗ ಮುಸ್ಲಿಂ ಭಯೋತ್ಪಾದಕರು ಭಾರೀ ಸಂಖ್ಯೆಯಲ್ಲಿದ್ದಾರೆ. ಅವರದೆಲ್ಲ ಮುಗಿಯಲಿ ಆಮೇಲೆ ನೋಡೋಣ. ದೇಶ ದ್ರೋಹ ಯಾರು ಮಾಡಿದರೂ ಕಾಂಪ್ರಮೈಸ್ ಇಲ್ಲ ಎಂದು ಡಿ.ವಿ.ಎಸ್ ಹೇಳಿದರು.

ಬಜರಂಗದಳವನ್ನು ನಿಷೇಧದ ಚಿಂತನೆ ಮುಂದುವರಿಸಿದರೆ ಹೋರಾಟ ಎಚ್ಚರಿಕೆ

ಬಜರಂಗದಳ, ವಿಹಿಂಪ, ಹಿಂಜಾವೇ ಇವೆಲ್ಲ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿದ್ದು, ಹಿಂದೂಗಳ ರಕ್ಷಣೆ ಮಾಡುವ ಇಂತಹ ಸಂಘಟನೆಗಳನ್ನು ನಿಷೇಧಿಸುವ ವಿಚಾರವನ್ನು ಕಾಂಗ್ರೆಸ್ ಎತ್ತಿರುವುದು ಸಹಿಸಲಸಾಧ್ಯ. ಬಜರಂಗದಳವನ್ನು ಯಾವುದೇ ಕಾರಣಕ್ಕೂ ನಿಷೇಧ ಮಾಡಲು ನಾವು ಬಿಡುವುದಿಲ್ಲ. ಮಾಂಸಕ್ಕಾಗಿ ಗೋಹತ್ಯೆ, ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್‌ಗೆ ಗೋಶಾಪ ತಟ್ಟದೇ ಇರುವುದಿಲ್ಲ. ಮುಂದೆ ನಿಷೇಧ ಚಿಂತನೆ ಮಾಡಿದರೆ ಕಾಂಗ್ರೆಸ್ ವಿರುದ್ಧ ಬೀದಿ ಬದಿಯಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಬಿಜೆಪಿ ಜಿಲ್ಲಾ ಚುನಾವಣಾ ಸಹಸಂಯೋಜಕ ಗೋಪಾಲಕೃಷ್ಣ ಹೇರಳೆ ತಿಳಿಸಿದರು.

LEAVE A REPLY

Please enter your comment!
Please enter your name here