‘ಮನ್ ಕೀ ಬಾತ್ ಮನೆಮನೆಗೆ ತಿಳಿಸುತ್ತೀರಲ್ಲ?’ ಪುತ್ತೂರಿನ ಪ್ರಮುಖರನ್ನು ಪ್ರಶ್ನಿಸಿದ ಮೋದಿ
ಮಂಗಳೂರು: ಕರ್ನಾಟಕದಲ್ಲಿ ಸ್ಥಿರ ಸರಕಾರವನ್ನು ಸ್ಥಾಪಿಸಿ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ದೇಶದಲ್ಲಿ ನಂಬರ್ ಒನ್ ರಾಜ್ಯವನ್ನಾಗಿಸುವುದು ಬಿಜೆಪಿ ಸಂಕಲ್ಪವಾಗಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಈ ಸಂಕಲ್ಪವನ್ನು ಸಾಕಾರಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆನೀಡಿದ್ದಾರೆ. ಮೂಲ್ಕಿ ಕೊಳ್ನಾಡುವಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರಾರ್ಥ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಜಗತ್ತಿನ ಆರ್ಥಿಕತೆಯಲ್ಲಿ 9ನೇ ಸ್ಥಾನದಲ್ಲಿದ್ದ ಭಾರತ ನಮ್ಮ ಆಳ್ವಿಕೆಯಲ್ಲಿ ಐದನೇ ಸ್ಥಾನಕ್ಕೆ ತಲುಪಿದೆ. ಭಾರತ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು ಎಂಬುದು ನನ್ನ ಕನಸು. ಈ ಕನಸು ನನಸಾಗಲು ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಇನ್ನು ಮತದಾನ ಬಹಳ ದೂರವಿಲ್ಲ. ಮೇ10ರಂದು ಮತದಾನ ನಡೆಯಲಿದೆ. ಮಹಾಜನತೆ ಕರ್ನಾಟಕದಲ್ಲಿ ಸ್ಥಿರ ಮತ್ತು ಬಲಿಷ್ಟ ಸರಕಾರಕ್ಕೆ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಆರಿಸಬೇಕು’ ಎಂದು ಮೋದಿಯವರು ಮನವಿ ಮಾಡಿದರು.
‘ನವೋದ್ಯಮಗಳ ಅಭಿವೃದ್ಧಿಯಲ್ಲಿ ಕರ್ನಾಟಕ ತನ್ನ ತಾಕತ್ತನ್ನು ತೋರಿಸಿದೆ. ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ದೇಶದ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ. ರಾಕೆಟ್ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಅದ್ಭುತ ಕಾರ್ಯಗಳಾಗುತ್ತಿವೆ.ಇಲ್ಲಿ ಹೊಸ ಆವಿಷ್ಕಾರಗಳ ಹೊಸ ಅಲೆ ಸೃಷ್ಟಿಯಾಗಿದೆ’ ಎಂದು ಶ್ಲಾಘಿಸಿದ ಮೋದಿ, ‘ಕರ್ನಾಟಕದಲ್ಲಿ ಅಸ್ಥಿರ ಸರ್ಕಾರ ಬಂದರೆ, ಈ ರಾಜ್ಯದ ಭವಿಷ್ಯವೂ ಅಸ್ಥಿರವಾಗಲಿದೆ’ ಎಂದು ಎಚ್ಚರಿಸಿದರು.
‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಿವೆ. ಬ್ಯಾಂಕ್ಗಳ ತೊಟ್ಟಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪ್ರದೇಶವನ್ನು ಆರ್ಥಿಕ ಕೇಂದ್ರವನ್ನಾಗಿ ರೂಪಿಸುವಲ್ಲಿ ಯುವಶಕ್ತಿಯ ಕೊಡುಗೆ ಮಹತ್ತರವಾದುದು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದ ಮೋದಿಯವರು, ‘ಕರಾವಳಿ ತೀರದ ಹಾಗೂ ಮೀನುಗಾರರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ಸ್ಯ ಸಂಪದ ಯೋಜನೆ ಜಾರಿಗೊಳಿಸಿದರೆ, ರಾಜ್ಯ ಸರ್ಕಾರ ಮತ್ಸ್ಯ ಸಿರಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದಿತು. ನಾನು ಅಧಿಕಾರಕ್ಕೆ ಬರುವವರೆಗೆ ಮೀನುಗಾರರ ಬಗ್ಗೆ ಯಾವ ಸರ್ಕಾರವೂ ಗಮನ ವಹಿಸಿರಲಿಲ್ಲ.ನಾವು ಅವರಿಗಾಗಿ ಪ್ರತ್ಯೇಕ ಸಚಿವಾಲಯವನ್ನೇ ಆರಂಭಿಸಿದೆವು ಕರಾವಳಿ ತೀರದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದೇವೆ’ ಎಂದರು.
ಈ ಬಾರಿಯ ನಿರ್ಧಾರ-ಬಹುಮತದ ಬಿಜೆಪಿ ಸರಕಾರ..: ‘ಈ ಬಾರಿಯ ನಿರ್ಧಾರ’ ಎಂದು ಪ್ರಧಾನಿ ಮೋದಿಯವರು ಜನರತ್ತ ನೋಡಿ ಹೇಳಿದಾಗ ‘ಬಹುಮತದ ಬಿಜೆಪಿ ಸರಕಾರ’ ಎಂದು ಸಭಿಕರು ಕೂಗಿದರು. ‘ಕರ್ನಾಟಕ ದೇಶದಲ್ಲಿ ನಂಬರ್ ಒನ್ ರಾಜ್ಯವಾಗಬೇಕೋ, ಬೇಡವೋ’ ಎಂದು ಜನರನ್ನು ಪ್ರಶ್ನಿಸಿದಾಗ ‘ಆಗಬೇಕು’ ಎಂದು ಜನರು ಕೂಗಿದರು. ನಂಬರ್ ಒನ್ ರಾಜ್ಯವಾಗಬೇಕಾದರೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು. ನಾನು ಕರ್ನಾಟಕದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಜನರ ಪ್ರೀತಿ, ವಿಶ್ವಾಸ, ಮಹಿಳೆಯರ ಅಶೀರ್ವಾದ, ಯುವಜನತೆಯ ಉತ್ಸಾಹ ಅಭೂತಪೂರ್ವವಾಗಿದೆ. ಹೋದ ಕಡೆಗಳಲ್ಲೆಲ್ಲಾ ಒಂದೇ ಮಂತ್ರ ಕೇಳುತ್ತಿದೆ. ಅದು ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರಕಾರ ಎಂಬುದಾಗಿದೆ ಎಂದರು. ಕಾಂಗ್ರೆಸ್ಗೆ ಈ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ಹೊಸದಿಲ್ಲಿಯಲ್ಲಿ ಕುಟುಂಬದ ಅಭಿವೃದ್ದಿ ಮಾತ್ರ ಬೇಕಾಗಿದೆ. ಕಾಂಗ್ರೆಸ್ ಪ್ರಗತಿ, ಶಾಂತಿಯ ವಿರುದ್ದವಾಗಿದೆ.ತುಷ್ಟೀಕರಣದ ನೀತಿ ಕಾಂಗ್ರೆಸ್ನ ನೀತಿಯಾಗಿದೆ.ದೇಶದಲ್ಲಿ ಆತಂಕದ ಪರಿಸ್ಥಿತಿ ಸೃಷ್ಠಿ ಅದರ ಗುರಿಯಾಗಿದೆ.ಅದಕ್ಕೆ ಜನಹಿತ ಬೇಕಾಗಿಲ್ಲ.ನಮ್ಮ ನಾಯಕರು ನಿವೃತ್ತರಾಗುತ್ತಿದ್ದಾರೆ.ಅವರಿಗೆ ಮತ ನೀಡಿ ಎಂದು ಕಾಂಗ್ರೆಸ್ ಮತಕೇಳುತ್ತಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರಗತಿ ದಶಕದ ಅವಧಿಯಷ್ಟು ಹಿನ್ನಡೆಗೆ ಹೋಗಲಿದೆ ಎಂದರು. ಕರ್ನಾಟಕದ ಡಬಲ್ ಎಂಜಿನ್ ಸರಕಾರದಲ್ಲಿ ಕೈಗಾರಿಕೆ, ಕೃಷಿ, ಮೀನುಗಾರಿಕೆ, ಸೇವಾ ಕ್ಷೇತ್ರ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ಸಾಧಿಸಿದೆ.ಉಡುಪಿ-ದಕ್ಷಿಣ ಕನ್ನಡ ಜಿಲ್ಲೆ ಅರ್ಥಿಕ ಹಬ್ ಆಗಿದೆ. ಡಬಲ್ ಎಂಜಿನ್ ಸರಕಾರದ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಸಾಽಸಿದೆ.ಇಂದು ವಿಶ್ವಮಟ್ಟದಲ್ಲಿ ಭಾರತ ಪ್ರಕಾಶಿಸುತ್ತಿದೆ. ಪ್ರತಿಯೊಂದು ವಿದೇಶಿ ರಾಷ್ಟ್ರ ಕೂಡಾ ಭಾರತವನ್ನು ಗೌರವದಿಂದ ಕಾಣುತ್ತಿದೆ.ನೀವು ನೀಡಿದ ಮತದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದ ಮೋದಿಯವರು, ಭಾರತದ ಈ ಅಭಿವೃದ್ಧಿ ಪಥಕ್ಕೆ ಇನ್ನಷ್ಟು ವೇಗ ನೀಡಲು ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಽಕಾರಕ್ಕೆ ಬರಬೇಕು ಎಂದರು.
‘ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವೆಪ್ಪನ ಜೋಕುಲೆಗ್ ನಮಸ್ಕಾರ’ ಎಂದು ತುಳುವಿನಲ್ಲಿ ಮಾತು ಆರಂಭಿಸಿದ ನರೇಂದ್ರ ಮೋದಿಯವರು ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನೂ ಉಲ್ಲೇಖಿಸಿದರು. ಮಾತಿನುದ್ದಕ್ಕೆ ‘ಸಹೋದರ ಸಹೋದರಿಯರೇ, ಸ್ನೇಹಿತರೆ’ ಎಂದು ಸಂಬೋಧಿಸುತ್ತಾ ಮಾತು ಮುಂದುವರಿಸಿದರು. ಬಜರಂಗ ಬಲಿ ಕೀ ಜೈ, ಭಾರತಾ ಮಾತಾಕೀ ಜೈ ಎಂದು ಭಾಷಣಕ್ಕೆ ಮುಕ್ತಾಯ ಹಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಮೋದಿಯವರ ಆಗಮನ ಕರಾವಳಿಯಲ್ಲಿ ಕಮಲ ಪಾಳೆಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.ಸಮಾವೇಶಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳಿಂದ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದ್ದರು.
ಇಂಧನ ಸಚಿವ ಸಚಿವ, ಕಾರ್ಕಳದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್, ಶಾಸಕರಾದ ಸಂಜೀವ ಮಠಂದೂರು, ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಉಭಯ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳಾದ ಆಶಾ ತಿಮ್ಮಪ್ಪ ಗೌಡ ಪುತ್ತೂರು, ಭಾಗೀರಥಿ ಮುರುಳ್ಯ ಸುಳ್ಯ, ರಾಜೇಶ್ ನಾಯಕ್ ಬಂಟ್ವಾಳ, ಹರೀಶ್ ಪೂಂಜಾ ಬೆಳ್ತಂಗಡಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್,ಯಶಪಾಲ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ ಗುರುರಾಜ್, ಸತೀಶ್ ಕುಮಾರ್ ಕುಂಪಲ, ಡಾ.ಭರತ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಸ್ವಾಗತಿಸಿದರು. ರಾಜ್ಯ ಬಿಜೆಪಿ ವಕ್ತಾರ,ಕ್ಯಾ|ಗಣೇಶ್ ಕಾರ್ನಿಕ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಸೇರಿದಂತೆ ಉಭಯ ಜಿಲ್ಲೆಗಳ ಬಿಜೆಪಿ ನಾಯಕರು, ಮಾಜಿ ಶಾಸಕರು ಉಪಸ್ಥಿತರಿದ್ದರು.
ಪ್ರತಿ ಮನೆಗೆ ಹೋಗಿ ನನಗೆ ಆಶೀರ್ವಾದ ಬೇಡಿ
‘ಪ್ರತಿ ಮನೆಗೆ ಹೋಗಿ, ನನಗೆ ಆಶೀರ್ವಾದ ಬೇಡಿ’ ಎಂದು ನಾನು ಇಲ್ಲಿರುವ ಪ್ರತಿಯೊಂದು ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದೇನೆ. ನೀವು ಇದನ್ನು ಪ್ರತಿಯೊಂದು ಮನೆಗೆ ಮುಟ್ಟಿಸಬೇಕು. ಮುಟ್ಟಿಸುತ್ತೀರೋ ಇಲ್ಲವೋ ಎಂದು ಕಾರ್ಯಕರ್ತರಲ್ಲಿ ಪ್ರಶ್ನಿಸಿದ ಪ್ರಧಾನಿ ಮೋದಿಯವರು, ಮುಟ್ಟಿಸುವುದಾದರೆ ಮೊಬೈಲ್ನ ಫ್ಲ್ಯಾಶ್ ಲೈಟ್ ಆನ್ ಮಾಡಿ ಮೇಲಕ್ಕೆ ಎತ್ತಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷಾಂತರ ಕಾರ್ಯಕರ್ತರು ಮೊಬೈಲ್ನ ಫ್ಲ್ಯಾಶ್ ಲೈಟ್ ಆನ್ ಮಾಡಿ ಮೇಲಕ್ಕೆ ಎತ್ತಿದರು. ಆಗ ಮಾತು ಮುಂದುವರಿಸಿದ ಪ್ರಧಾನಿಯವರು ಪ್ರತಿಯೊಂದು ಮನೆಗೆ ಹೋಗಿ. ಅಲ್ಲಿ ಹೇಳಿ ಮೋದಿ ದಿಲ್ಲಿಯಿಂದ ಮೂಲ್ಕಿಗೆ ಬಂದಿದ್ದಾರೆ. ನಿಮಗೆ ನಮಸ್ಕಾರಗಳನ್ನು ತಿಳಿಸಿದ್ದಾರೆ. ಪ್ರಣಾಮಗಳನ್ನು ಸಲ್ಲಿಸಿದ್ದಾರೆ. ನಿಮ್ಮ ಆಶೀರ್ವಾದಗಳನ್ನು ಬೇಡಿದ್ದಾರೆ ಎಂದು ಅವರಿಗೆ ತಿಳಿಸಿ ಅವರ ಆಶೀರ್ವಾದವನ್ನು ಬೇಡಿ ಎಂದರು.
ಮನ್ ಕೀ ಬಾತ್ ಮನೆಮನೆಗೆ ತಿಳಿಸುತ್ತೀರಲ್ಲ?’ – ಪುತ್ತೂರಿನ ಪ್ರಮುಖರನ್ನು ಪ್ರಶ್ನಿಸಿದ ಮೋದಿ
ಪುತ್ತೂರು:ಮನ್ ಕೀ ಬಾತ್ ಎಷ್ಟು ಅರ್ಥವಾಗುತ್ತಿದೆ ಮತ್ತು ಇದನ್ನು ಮನೆ ಮನೆಗೆ ತಿಳಿಸುವ ಕಾರ್ಯ ಮಾಡುತ್ತೀರಲ್ಲ ಎಂದು ಪುತ್ತೂರಿನ ಬಿಜೆಪಿ ಕಾರ್ಯಕರ್ತರನ್ನು ಪ್ರಧಾನಿ ಮೋದಿಯವರು ಪ್ರಶ್ನಿಸಿದರು.
ಮೂಲ್ಕಿ ಕೋಲ್ನಾಡು ಹೆಲಿಪ್ಯಾಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೆಲಿಕಾಪ್ಟರ್ನಿಂದ ಇಳಿಯುತ್ತಿದ್ದ ವೇಳೆ ಅವರನ್ನು ಸ್ವಾಗತಿಸಲು ಪುತ್ತೂರಿನ ಕಾರ್ಯಕರ್ತ ಪ್ರಮುಖರಿಗೂ ಅವಕಾಶ ಮಾಡಿಕೊಡಲಾಗಿತ್ತು. ಹೆಲಿಕಾಫ್ಟರ್ನಿಂದ ಇಳಿದ ಮೋದಿಯವರು ಕಾರ್ಯಕರ್ತರಿಗೆ ವಂದಿಸಿ ಮುಂದಕ್ಕೆ ಚಲಿಸಿ ತಕ್ಷಣ ಮತ್ತೆ ಹಿಂದಿರುಗಿ ಬಂದು ಪುತ್ತೂರಿನ ಕಾರ್ಯಕರ್ತರನ್ನು ಕರೆದು ಮಾತನಾಡಿದರು.ಮನ್ ಕೀ ಬಾತ್ ಎಷ್ಟು ಅರ್ಥವಾಗುತ್ತಿದೆ ಮತ್ತು ಇದನ್ನು ಮನೆ ಮನೆಗೆ ತಿಳಿಸುವ ಕಾರ್ಯ ಮಾಡುತ್ತೀರಲ್ಲ ಎಂದು ಪ್ರಶ್ನಿಸಿದರು. ಈ ಸಂದರ್ಭ ಕಾರ್ಯಕರ್ತರು ಮನ್ಕೀ ಬಾತ್ ಕನ್ನಡದಲ್ಲೂ ಅನುವಾದ ಬರುತ್ತಿದೆ ಎಂದರು. ಮೋದಿಯವರು ಚುನಾವಣೆ ಹೇಗಿದೆ ಎಂದರು. ದ.ಕ.ಜಿಲ್ಲೆಯ 8 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಖಚಿತ ಎಂದು ಕಾರ್ಯಕರ್ತರು ಹೇಳಿದರು.ಹೀಗೆ ಸ್ವಲ್ಪ ಹೊತ್ತು ಕಾರ್ಯಕರ್ತರೊಂದಿಗೆ ಮಾತನಾಡಿದ ಬಳಿಕ ಮೋದಿಯವರು ಸಮಾವೇಶಕ್ಕೆ ತೆರಳಿದರು ಎಂದು ಮೋದಿಯವರನ್ನು ಸ್ವಾಗತಿಸಿದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ತಿಳಿಸಿದ್ದಾರೆ.ಈ ಸಂದರ್ಭ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್, ಜಯಶ್ರೀ ಎಸ್ ಶೆಟ್ಟಿ ಉಪಸ್ಥಿತರಿದ್ದರು.