ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತಯಾಚನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಿದರು.
ಕಿಲ್ಲೆ ಮೈದಾನದಲ್ಲಿ ತಮ್ಮ 10 ನಿಮಿಷ 7 ಸೆಕುಂಡುಗಳ ಭಾಷಣದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ನಿಂತು ಪ್ರಾರ್ಥನೆ ಮಾಡಿದ ಅವರು ಬಳಿಕ ತೆರೆದ ಬಸ್ನಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪುತ್ತೂರು ಪ್ರಧಾನ ಅಂಚೆ ಕಚೇರಿ ಬಳಿಯಿಂದ ಮುಖ್ಯರಸ್ತೆ ಶ್ರೀಧರ್ ಭಟ್ ಅಂಗಡಿಯ ಮೂಲಕ ಕಿಲ್ಲೆ ಮೈದಾನಕ್ಕೆ ತೆರಳಿ ಅಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಕಿಲ್ಲೆ ಮೈದಾನದಲ್ಲಿ ಸೇರಿದ ಸಾವಿರಾರು ಮಂದಿ ಜನರಿಂದ ಕೇಳಿ ಬರುತ್ತಿದ್ದ ಜೈ ಶ್ರೀರಾಮ್, ಬಜರಂಗಬಲಿ ಕಿ ಜೈ, ಜೈ ಮೋದಿ, ಜೈ ಯೋಗಿ ಎನ್ನುವ ಘೋಷಣೆಗಳ ನಡುವೆಯೇ ಮಾತು ಆರಂಭಿಸಿದ ಯೋಗಿ ಆದಿತ್ಯನಾಥ್ ಪುತ್ತೂರಿನ ಮುತ್ತಿನಂತ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು ಎಂದು ಅರಂಭದಲ್ಲಿ ಮಾತನಾಡಿ ಜನರನ್ನು ಕನ್ನಡ ಮಾತಿನ ಮೂಲಕ ಮೋಡಿ ಮಾಡಿದರು.

ಪ್ರಚಾರ ವಾಹನದಲ್ಲಿ ಯೋಗಿಯೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಸಾಜಾ ರಾಧಕೃಷ್ಣ ಆಳ್ವ, ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಉಪಸ್ಥಿತರಿದ್ದರು.