ಬಿಜೆಪಿ ಕಾಲೋನಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ: ಅಶೋಕ್ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕ್ಷೆತ್ರ ವ್ಯಾಪ್ತಿಯ ವಿವಿಧ ಕಾಲೋನಿಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.ಇರ್ದೆ ಬೆಟ್ಟಂಪಾಡಿ, ನಿಡ್ಪಳ್ಳಿ, ಕೊಳ್ತಿಗೆ, ಕೆಯ್ಯೂರು, ಕೆದಂಬಡಿ, ವಿಟ್ಲ, ಒಕ್ಕೆತ್ತೂರು ಸೇರಿದಂತೆ ಕ್ಷೆತ್ರ ವ್ಯಾಪ್ತಿಯ ವಿವಿಧ ಲಿತ ಕಾಲೋನಿಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಮತಯಾಚನೆ ನಡೆಸಿದರು. ಈ ವೇಳೆ ಮಾತನಾಡಿದ ಅಭ್ಯರ್ಥಿ ಅಶೋಕ್ ರೈಯವರು ಬಿಜೆಪಿ ದಲಿತ ಕಾಲೋನಿಗಳನ್ನು ಸಂಪೂರ್ನ ಕಡೆಗಣಿಸಿದೆ. ಬಹುತೇಕ ಕಾಲನಿಗಳಿಗೆ ರಸ್ತೆ ಸಂಪರ್ಕವಿಲ್ಲ, ದಲಿತರ ಮನೆಗಳಿಗೆ ಹಕ್ಕುಪತ್ರವನ್ನು ನೀಡಿಲ್ಲ, ಕುಡಿಯುವ ನೀರಿನ ಯೋಜನೆಯನ್ನೂ ರೂಪಿಸಿಲ್ಲ , ಒಟ್ಟಾರೆಯಾಗಿ ಕಾಲೋನಿಗಳನ್ನು ಯಾವ ರೀತಿಯಲ್ಲಿ ಅಭಿವೃದ್ದಿ ಮಾಡಬೇಕಿತ್ತೋ ಆ ಪ್ರಕಾರ ಅಭಿವೃದ್ದಿ ಮಾಡದೆ ಬಿಜೆಪಿ ದಲಿತರ ಮತವನ್ನು ಪಡೆದು ಅವರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿದರು. ಮಾತೆತ್ತಿದರೆ ಹಿಂದುತ್ವ ಎಂದು ಹೇಳುವ ಬಿಜೆಪಿಗೆ ದಲಿತರು ಹಿಂದೂಗಳಾಗಿ ಕಾಣಲಿಲ್ಲ, ಅವರ ಮತ ಮಾತ್ರ ಬಿಜೆಪಿಗೆ ಬೇಕಾಗಿದ್ದು ಅಭಿವೃದ್ದಿ ಬೇಕಾಗಿಲ್ಲ ಎಂದು ಹೇಳಿದರು. ತಾನು ಭೇಟಿ ನೀಡಿದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯವೂ ಇಲ್ಲವಾಗಿದೆ. ಕೆಲವು ಮನೆಗಳಿಗೆ ಈಗಲೂ ವಿದ್ಯುತ್ ಸೌಲಭ್ಯವಿಲ್ಲ ಎಂದು ಹೇಳಿದ ಅಶೋಕ್ ರೈಯವರು ಬಿಜೆಪಿ ಚುನವಣೆ ಸಮಯದಲ್ಲಿ ಕೇವಲ ಭರವಸೆಯನ್ನು ಮಾತ್ರ ನೀಡುತ್ತಿದೆ ವಿನಾ ಅವರಿಗೆ ಬೇಕದ ಸೌಲಭ್ಯವನ್ನು ಕಲ್ಪಿಸಿಲ್ಲ ಎಂದು ದೂರಿದರು.
ದಲಿತರ ಅಭಿವೃದ್ದಿಗೆ ಕಾಂಗ್ರೆಸ್ ಮಹತ್ತರ ಕೊಡುಗೆಯನ್ನು ನೀಡಿದೆ. ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ದಲಿತ ಬಂಧುಗಳಿಗೆ ನೆರವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿತ್ತು. ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಅವೆಲ್ಲವನ್ನೂ ರದ್ದು ಮಾಡಿತ್ತು ಎಂದು ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಪುತ್ತೂರಿನಲ್ಲಿಯೂ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದ ಅಶೋಕ್ ರೈ ಕಾಂಗ್ರೆಸ್ ಗೆದ್ದಲ್ಲಿ ಕಾಲನಿ ನಿವಾಸಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.
ಅರ್ಜಿಗಳ ಮಹಾಪೂರ
ಕಾಲನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕ ಮಂದಿ ಮನೆ ದುರಸ್ಥಿಗಾಗಿ ಅಶೋಕ್ ರೈಯವರಲ್ಲಿ ಅರ್ಜಿ ನೀಡಲು ಮುಂದಾದರು. ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಅವರು ಅರ್ಜಿಯನ್ನು ಸ್ವೀಕರಿಸಲು ಅಸಾಧ್ಯ ಎಂದು ಹೇಳಿ. ಮುಂದೆ ಗೆದ್ದು ಬಂದಲ್ಲಿ ದಲಿತರ ಎಲ್ಲಾ ಮನೆಗಳಿಗೂ ದುರಸ್ಥಿ ಅಥವ ಹೊಸ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಕೆಲವು ಮಹಿಳೆಯರು ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ನಿಮ್ಮ ಸಹಾಯವನ್ನು ಮಾತ್ರ ನಾವು ನಂಬಿದ್ದೇವೆ, ದಲಿತರಿಗೆ ಸಹಾಯ ಮಾಡುವವರೇ ಇಲ್ಲ. ಕೇವಲ ಭರವಸೆ ಕೊಟ್ಟು ಹೋಗುತ್ತಾರೆ. ಈ ಬಾರಿ ನೀವು ಗೆದ್ದು ಶಾಸಕರಾಗಬೇಕು ಎಂದು ಕಾಲೋನಿಗಳ ಮಹಿಳೆಯರು ಆಶೀರ್ವಾದ ಮಾಡಿದರು.
ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ , ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ರಸಾದ್ ಆಳ್ವ, ಮುರಳೀದರ್ ರೈ ಮಠಂತಬೆಟ್ಟು, ರಾಕೇಶ್ ರೈ ಬಡಗನ್ನೂರು,ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ, ಆಲಿಕುಂಞಿ ಕೊರಿಂಗಿಲ, ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರುಗಳು ಉಪಸ್ತಿತರಿದ್ದರು.