ಪುತ್ತೂರು:ಮಕ್ಕಳ ಸಾಧನೆ ಪೋಷಕರಿಗೆ ಮಾತ್ರವಲ್ಲ ಕಲಿತ ವಿದ್ಯಾಸಂಸ್ಥೆ ಹಾಗೂ ಕಲಿಸಿದ ಗುರುಗಳಿಗೂ ವಿಶೇಷ ಗೌರವ ತಂದು ಕೊಡುತ್ತದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಏರ್ಪಡಿಸಲಾದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 2023-24ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ 625ರಲ್ಲಿ 623 ಅಂಕ ಗಳಿಸಿ, ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಹಿಮಾನಿ.ಎ. ಸಿ. (ಶ್ರೀ ಚಿದಾನಂದ ಪೂಜಾರಿ ಮತ್ತು ಶ್ರೀಮತಿ ಶೋಭಾ ದಂಪತಿಗಳ ಪುತ್ರಿ) ಹಾಗೂ 625ರಲ್ಲಿ 620 ಅಂಕ ಗಳಿಸಿದ ಕುಮಾರಿ ಧಾತ್ರಿ ( ಡಾ. ದಿನೇಶ್ ಮತ್ತು ಶ್ರೀಮತಿ ಪದ್ಮಲಕ್ಷ್ಮೀ ದಂಪತಿಗಳ ಪುತ್ರಿ) ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಸುಂದರ ಗೌಡ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್. ಎಂ, ಸಂಚಾಲಕರಾದ ಶ್ರೀ ರವಿನಾರಾಯಣ. ಎಂ. ಹಾಗೂ ಸದಸ್ಯರಾದ ಡಾ.ಮಾಲಾ ಮಹೇಶ್, ಡಾ. ಅಮೃತಾ ಪ್ರಸಾದ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಸ್ವಾಗತಿಸಿ, ಶ್ರೀಮತಿ ಸಾಯಿಗೀತಾ ರಾವ್ ವಂದಿಸಿದರು. ಶ್ರೀಮತಿ ಅನುರಾಧಾ ಕಾರ್ಯಕ್ರಮ ನಿರೂಪಿಸಿದರು.