ವಿಧಾನ ಸಭಾ ಚುನಾವಣೆ ಶಾಂತಿಯುತ ಮುಕ್ತಾಯ

0

ಪುತ್ತೂರು ಕ್ಷೇತ್ರದಲ್ಲಿ ಶೇ.80.08 ಮತದಾನ

ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರದೊಳಗೆ ಭದ್ರ..ಮೇ 13ರಂದು ಪ್ರಕಟ

ಪುತ್ತೂರು ಕ್ಷೇತ್ರದಲ್ಲಿ 2,12,753 ಮತದಾರರಲ್ಲಿ 1,70,366 ಮಂದಿಯಿಂದ ಮತಚಲಾವಣೆ

ಸುಳ್ಯ 78.53%, ಬಂಟ್ವಾಳ 80.27%

ಹೈಲೈಟ್ಸ್..

ಇವಿಎಂ ದೋಷ..ಕೆಲವೆಡೆ ಅವಧಿ ಮುಗಿದ ಬಳಿಕವೂ ಮತದಾನ
ಶಿರಾಡಿಯಲ್ಲಿ ಮುಚ್ಚಿದ್ದ ಶಾಲೆ ಮತದಾನಕ್ಕಾಗಿ ತೆರೆದುಕೊಂಡಿತು
ಕಲ್ಪಣೆಯಲ್ಲಿ ಕೈಕೊಟ್ಟ ವಿದ್ಯುತ್-ಮತದಾರರ ಪರದಾಟ
ಅಭ್ಯರ್ಥಿ ಪರ ಕಾರ್ಯಕರ್ತರಿಂದ ರಾಜಕೀಯ ಸೌಹಾರ್ದತೆ

ಪುತ್ತೂರು: ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನ ಸಭಾ ಚುನಾವಣೆ ಮೇ 10ರಂದು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆದಿದೆ. ಕೆಲವೊಂದು ಕೇಂದ್ರಗಳಲ್ಲಿ ಅವಧಿ ಮುಗಿದ ಬಳಿಕವೂ ಮತದಾನ ನಡೆದಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 80.08 ಮತ ಚಲಾವಣೆಯಾಗಿದೆ. ಮತಚಲಾಯಿಸಲು ಹಕ್ಕು ಪಡೆದಿದ್ದ 2,12,753 ಮತದಾರರಲ್ಲಿ 1,70,366 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 1,04,918 ಪುರುಷ ಮತದಾರರ ಪೈಕಿ 84,087 ಮತ್ತು 1,07,832 ಮಹಿಳಾ ಮತದಾರರ ಪೈಕಿ 86,278 ಮಂದಿ ಮತ ಚಲಾಯಿಸಿದ್ದಾರೆ. ಇವಿಎಂನಲ್ಲಿನ ತಾಂತ್ರಿಕ ದೋಷದಿಂದಾಗಿ ಕೆಲವೊಂದು ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಸ್ಥಗಿತಗೊಂಡು ವಿಳಂಬ ಹೊರತುಪಡಿಸಿದರೆ ಮತದಾನ ಸುಸೂತ್ರವಾಗಿ ನಡೆದಿದೆ. ಕ್ಷೇತ್ರದ ಕೆಲವು ಬೂತ್‌ಗಳಲ್ಲಿ ಮತದಾನ ಅವಧಿ ಮುಕ್ತಾಯದ ವೇಳೆಯೂ ಜನ ಸರತಿ ಸಾಲಲ್ಲಿ ನಿಂತಿದ್ದರಿಂದ ರಾತ್ರಿ 7.30ರ ತನಕವೂ ಮತದಾನ ಪ್ರಕ್ರಿಯೆ ನಡೆದಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ.78.53 ಮತ ಚಲಾವಣೆಯಾಗಿದೆ. ಒಟ್ಟು 2,06,029 ಮತದಾರರ ಪೈಕಿ 1,61,788 ಮತದಾರರು ಮತ ಚಲಾಯಿಸಿದ್ದಾರೆ. ಬಂಟ್ವಾಳ ವಿಧಾನಸಭಾ ಚುನಾವಣೆಯಲ್ಲಿ 2,28,377 ಮತದಾರರ ಪೈಕಿ 1,83,326 ಮತದಾರರು ಮತ ಚಲಾಯಿಸುವ ಮೂಲಕ ಶೇ.80.27 ಮತದಾನವಾಗಿದೆ.

ಪ್ರಕ್ರಿಯೆ ವಿಳಂಬ: ಇವಿಎಂಗಳಲ್ಲಿ ಕಂಡು ಬಂದಿರುವ ತಾಂತ್ರಿಕ ದೋಷದಿಂದಾಗಿ ಕ್ಷೇತ್ರದ ಕೆಲವೊಂದು ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಿಧಾನಗತಿಯಿಂದ ನಡೆದು ವಿಳಂಬವಾಗಿದೆ. ಕೆಲವೊಂದು ಮತಗಟ್ಟೆಗಳಲ್ಲಿ ಇವಿಎಂ ಸಮಸ್ಯೆಯಿಂದಾಗಿ ಕೆಲಹೊತ್ತು ಮತದಾನ ಪ್ರಕ್ರಿಯೆ ಸ್ಥಗಿತಗೊಂಡು ಮತದಾರರು ಗಂಟೆ ಕಾಲ ಸರತಿಸಾಲಿನಲ್ಲಿ ನಿಲ್ಲುವಂತಾಗಿತ್ತು. ಬಳಿಕ ಸೆಕ್ಟರ್ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಿ ವ್ಯವಸ್ಥೆ ಸರಿಪಡಿಸಿದ ಬಳಿಕ ಪ್ರಕ್ರಿಯೆ ಸರಾಗವಾಗಿ ಮುಂದುವರಿದಿದೆ.

ಅವಧಿ ಮುಗಿದ ಬಳಿಕವೂ ಮತದಾರರು ಕ್ಯೂನಲ್ಲಿ!: ಬಲ್ನಾಡು 106 ಉಜ್ರುಪಾದೆ, ಬೆಟ್ಟಂಪಾಡಿ ರೆಂಜ, ಈಶ್ವರಮಂಗಲ ಸೇರಿದಂತೆ ಕೆಲವೊಂದು ಬೂತ್‌ಗಳಲ್ಲಿ ಮತದಾನದ ಅವಧಿ ಮುಗಿದ ಬಳಿಕವೂ ಮತದಾರರು ಸರತಿ ಸಾಲಲ್ಲಿದ್ದುದರಿಂದ ತಡವಾಗಿ ಮತದಾನ ಪ್ರಕ್ರಿಯೆ ಮುಗಿಸಲಾಗಿದೆ. ಬೂತ್ ನಂ.204 ಪಡುವನ್ನೂರು ಗ್ರಾಮದ ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಸಂಜೆ 6.25ಕ್ಕೆ ಮತದಾನ ಪ್ರಕ್ರಿಯೆ ಮುಗಿದಿದೆ. ಇಲ್ಲಿ ಮತದಾನ ಮುಕ್ತಾಯದ ಅವಧಿ ಸಂಜೆ 6 ಗಂಟೆ ವೇಳೆಗೆ ಸುಮಾರು 20 ಮತದಾರರು ಸರತಿ ಸಾಲಲ್ಲಿ ನಿಂತಿದ್ದರು. ಅವರು ಮತ ಚಲಾಯಿಸಿದ ಬಳಿಕ ಮತದಾನದ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಬೆಟ್ಟಂಪಾಡಿ 1ನೇ ವಾರ್ಡ್ನಲ್ಲಿ ಬೆಟ್ಟಂಪಾಡಿ ಗ್ರಾ.ಪಂ. ಮತಗಟ್ಟೆ ನಂಬ್ರ 167ರಲ್ಲಿ ರಾತ್ರಿ 7 ಗಂಟೆ ತನಕವೂ ಮತದಾನ ನಡೆದಿದೆ. ಇಲ್ಲಿ 1468 ಮತದಾರರಿದ್ದರೂ ಒಂದೇ ಮತಗಟ್ಟೆ ವ್ಯವಸ್ಥೆ ಇದ್ದುದರಿಂದಾಗಿ ಈ ಸಮಸ್ಯೆ ಉಂಟಾಗಿದೆ. ಇಲ್ಲಿಗೆ ಹೆಚ್ಚುವರಿಯಾಗಿ ಮತಗಟ್ಟೆಯೊಂದನ್ನು ತೆರೆಯಲು ಈ ಹಿಂದೆಯೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿತ್ತಾದರೂ ಹೆಚ್ಚುವರಿ ಮತಗಟ್ಟೆ ವ್ಯವಸ್ಥೆ ಆಗದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ನಾಗರಿಕರು ದೂರಿದ್ದಾರೆ. ಉಜ್ರುಪಾದೆ ಮತಗಟ್ಟೆಯಲ್ಲಿ ರಾತ್ರಿ 8ರ ತನಕವೂ ಮತದಾನ ನಡೆದಿದೆ ಎಂದು ವರದಿಯಾಗಿದೆ.

ಪಕ್ಷದ ಬೂತ್‌ಗಳಿದ್ದರೂ ಕೇಳುತ್ತಿರಲಿಲ್ಲ ಮತ: ಕ್ಷೇತ್ರದ ಹೆಚ್ಚಿನ ಮತದಾನ ಕೇಂದ್ರಗಳಿಂದ ನಿರ್ದಿಷ್ಟ ದೂರದಲ್ಲಿ ರಾಜಕೀಯ ಪಕ್ಷಗಳ ಬೂತ್‌ಗಳಿದ್ದರೂ ಕೆಲವು ಕಡೆಗಳಲ್ಲಿ ಮತದಾರರಲ್ಲಿ ತಮ್ಮ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಕೇಳುತ್ತಿರಲಿಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಪರವಾದ ಬೂತ್ ಬಹುತೇಕ ಎಲ್ಲಾ ಮತದಾನ ಕೇಂದ್ರಗಳ ಬಳಿಯಿತ್ತು. ಆದರೆ ಜೆಡಿಎಸ್, ಎಸ್‌ಡಿಪಿಐ, ಆಮ್ ಆದ್ಮಿಯ ಬೂತ್‌ಗಳು ಕೆಲವು ಕಡೆಗಳಲ್ಲಿ ಮಾತ್ರ ಕಂಡು ಬಂದಿತ್ತು. ರಾಜಕೀಯವಾಗಿ ಎದುರಾಳಿಗಳಾಗಿದ್ದರೂ ಮೊಟ್ಟೆತ್ತಡ್ಕ ಸೇರಿದಂತೆ ಕೆಲವೊಂದು ಬೂತ್‌ಗಳಲ್ಲಿ ವಿವಿಧ ಅಭ್ಯರ್ಥಿಗಳ ಪರವಾದ ಬೆಂಬಲಿಗರು, ಕಾರ್ಯಕರ್ತರು ಒಟ್ಟಿಗೇ ಕುಳಿತುಕೊಂಡು ರಾಜಕೀಯ ಸೌಹಾರ್ದತೆ ತೋರ್ಪಡಿಸುತ್ತಿದ್ದರು.

ಅಭ್ಯರ್ಥಿಗಳ ಭೇಟಿ: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ, ಬಿಜೆಪಿಯ ಆಶಾ ತಿಮ್ಮಪ್ಪ ಗೌಡ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಕ್ಷೇತ್ರದಾದ್ಯಂತ ಬೂತ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರು, ಮತದಾರರನ್ನು ಮಾತನಾಡಿಸಿದ್ದರು. ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಅವರೂ ಬೂತ್‌ಗಳಿಗೆ ಭೇಟಿ ನೀಡಿದ್ದರು. ಎಸ್‌ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ ಅವರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಅವರ ಪರವಾಗಿ ಪಕ್ಷದ ಪ್ರಮುಖರು ವಿವಿಧ ಬೂತ್‌ಗಳಿಗೆ ಭೇಟಿ ನೀಡಿದ್ದರು. ಕಾಂಗ್ರೆಸ್, ಬಿಜೆಪಿ ಪ್ರಮುಖರೂ ವಿವಿಧ ಬೂತ್‌ಗಳಿಗೆ ಭೇಟಿ ನೀಡಿದ್ದರು.

ಅಭ್ಯರ್ಥಿಗಳ ಭವಿಷ್ಯ ಮತಯಂತ್ರದೊಳಗೆ!: ಪುತ್ತೂರು,ಸುಳ್ಯ, ಬಂಟ್ವಾಳ ಕ್ಷೇತ್ರದಲ್ಲಿ ಒಟ್ಟು 21 ಅಭ್ಯರ್ಥಿಗಳು ಕಣದಲ್ಲಿದ್ದು ಚುನಾವಣೆ ಎದುರಿಸಿದ್ದಾರೆ. ಇವರೆಲ್ಲರ ರಾಜಕೀಯ ಭವಿಷ್ಯ ಮತಯಂತ್ರದೊಳಗೆ ಭದ್ರವಾಗಿದ್ದು ಮೇ 13ರಂದು ಪ್ರಕಟವಾಗಲಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ನ ಪ್ರವರ್ತಕರಾಗಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ, ಉದ್ಯಮಿ ಅಶೋಕ್ ಕುಮಾರ್ ರೈ, ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿರುವ ಕಡಬ ತಾಲೂಕು ಕುಂತೂರು ಕುಂಡಡ್ಕದ ಆಶಾ ತಿಮ್ಮಪ್ಪ ಗೌಡ, ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆಯಾಗಿರುವ ಸುಳ್ಯ ತಾಲೂಕು ನಡುಗಲ್ಲು ನಾಲ್ಕೂರು ಗ್ರಾಮದ ಹಳೆಮಜಲು ಚಿಲ್ತಡ್ಕದ ದಿವ್ಯಪ್ರಭಾ ಗೌಡ, ಅಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕೃಷಿ ವಿಜ್ಞಾನಿ ಮೈಸೂರು ಜಯನಗರ ಡಾ|ಬಿ.ಕೆ.ವಿಶು ಕುಮಾರ್, ಎಸ್‌ಡಿಪಿಐ ಪಕ್ಷದ ಅಭ್ಯರ್ಥಿಯಾಗಿ ಸುಳ್ಯ ತಾಲೂಕು ಬೆಳ್ಳಾರೆಯ ಕುಂಞಗುಡ್ಡೆ ಮನೆಯ ಇಸ್ಮಾಯಿಲ್ ಶಾಫಿ ಕೆ., ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಪೆನ್ನೆ ಮನೆಯ ಐವನ್ ಫೆರಾವೋ ಪಿ., ಪಕ್ಷೇತರ ಅಭ್ಯರ್ಥಿಗಳಾಗಿ ಹಿಂದು ಸಂಘಟನೆಗಳ ಮುಖಂಡ ಮುಂಡೂರು ಗ್ರಾಮದ ನರಿಮೊಗರು ಪುತ್ತಿಲ ನಿವಾಸಿ ಅರುಣ್ ಕುಮಾರ್ ಪುತ್ತಿಲ ಹಾಗೂ ಮಂಗಳೂರು ಮರಕ್ಕಡ ಕುಂಜತ್ತಬೈಲು ಅಯ್ಯಪ್ಪ ಗುಡಿ ಬಳಿಯ ರವಿ ಶೆಟ್ಟಿ ಕಾಂಪೌಂಡ್ ನಿವಾಸಿ ಸುಂದರ ಕೊಯಿಲ ಅಂತಿಮ ಕಣದಲ್ಲಿದ್ದು ಚುನಾವಣೆ ಎದುರಿಸಿದ್ದಾರೆ.

ಸುಳ್ಯದಲ್ಲಿ..: ಕಡಬ ತಾಲೂಕಿನ 46 ಗ್ರಾಮಗಳ ವ್ಯಾಪ್ತಿಯನ್ನೂ ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್‌ನಿಂದ ಜಿ.ಕೃಷ್ಣಪ್ಪ, ಜೆಡಿಎಸ್‌ನಿಂದ ಹೆಚ್.ಎಲ್.ವೆಂಕಟೇಶ್, ಆಮ್ ಆದ್ಮಿಯಿಂದ ಸುಮನಾ ಬೆಳ್ಳಾರ್ಕರ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಣೇಶ್ ಎಂ., ಉತ್ತಮ ಪ್ರಜಾಕೀಯ ಪಕ್ಷದಿಂದ ರಮೇಶ್ ಬೂಡು, ಕಲ್ಯಾಣ ರಾಜ್ಯ ಪ್ರಗತಿಪಕ್ಷದಿಂದ ಸುಂದರ ಮೇರ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ ಕಲ್ಲುಗುಡ್ಡೆ ಕಣದಲ್ಲಿದ್ದು ಚುನಾವಣೆ ಎದುರಿಸಿದ್ದಾರೆ.

ಬಂಟ್ವಾಳದಲ್ಲಿ!: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಚಿವ, ಪುತ್ತೂರು ಮೂಲದವರಾಗಿರುವ ಬೆಳ್ಳಿಪ್ಪಾಡಿ ರಮಾನಾಥ ರೈ, ಬಿಜೆಪಿಯಿಂದ ಹಾಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜೆಡಿಎಸ್‌ನಿಂದ ಪ್ರಕಾಶ್ ಗೋಮ್ಸ್, ಆಮ್ ಆದ್ಮಿಯಿಂದ ಪುರುಷೋತ್ತಮ ಕೋಲ್ಪೆ ಮತ್ತು ಎಸ್‌ಡಿಪಿಐನಿಂದ ಇಲ್ಯಾಸ್ ಮೊಹಮ್ಮದ್ ತುಂಬೆ ಅಂತಿಮ ಕಣದಲ್ಲಿದ್ದು ಚುನಾವಣಾ ಎದುರಿಸಿದ್ದಾರೆ.‌ ಬಂಟ್ವಾಳದಲ್ಲಿ ಒಟ್ಟು 249 ಮತದಾನ ಕೇಂದ್ರಗಳಲ್ಲಿ ಮತದಾನ ನಡೆದಿದೆ.

ನ್ಯಾಯ ಸಮ್ಮತ ಮತದಾನಕ್ಕೆ ಆಯೋಗದಿಂದ ಸಕಲ ವ್ಯವಸ್ಥೆ: ಚುನಾವಣೆಯನ್ನು ಪಾರದರ್ಶಕವಾಗಿ ಮತ್ತು ನ್ಯಾಯ ಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿತ್ತು. ವ್ಯಾಪಕ ಬಂದೋಬಸ್ತ್ ಕಾರ್ಯಕೈಗೊಳ್ಳಲಾಗಿದ್ದು ಎಲ್ಲೆಡೆ ಬಿಗಿ ಕಣ್ಗಾವಲು ಇರಿಸಲಾಗಿತ್ತು. ಭಯಮುಕ್ತ ಹಕ್ಕು ಚಲಾವಣೆಗಾಗಿ ಚುನಾವಣಾ ಆಯೋಗದ ನೇತೃತ್ವದಲ್ಲಿ ಸಕಲ ಸಿದ್ಧತೆ ನಡೆಸಲಾಗಿದ್ದು ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್., ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಗಿರೀಶ್ ನಂದನ್, ಸಹಾಯಕ ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್ ಶಿವಶಂಕರ್ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದೆ. ವಿಧಾನಸಭಾ ಕ್ಷೇತ್ರದ 220 ಮತಗಟ್ಟೆಗಳ ಪೈಕಿ 1 ಅತಿಸೂಕ್ಷ್ಮ ಹಾಗೂ 14 ಸೂಕ್ಷ್ಮ ಹಾಗೂ ಇತರ ಸಾಮಾನ್ಯ ಮತಗಟ್ಟೆಗಳು ಎಂದು ವಿಂಗಡಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ಮಾದರಿಯ ಮದ್ಯದಂಗಡಿಗಳನ್ನು ಮೇ 10ರ ಮಧ್ಯರಾತ್ರಿ 12 ಗಂಟೆ ತನಕ ಬಂದ್ ಮಾಡಲಾಗಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಒಟ್ಟು 220 ಮತಗಟ್ಟೆಗಳಲ್ಲಿ ಮತದಾನದ ಪ್ರಕ್ರಿಯೆಗಳು ನಡೆಯಲಿದೆ. ಈ ಪೈಕಿ ನೆಹರುನಗರದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಮತಗಟ್ಟೆ ಅತಿ ಸೂಕ್ಷ್ಮ ಮತಗಟ್ಟೆಯಾಗಿದೆ. ಸರಕಾರಿ ಮಾದರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಉಪ್ಪಿನಂಗಡಿ, ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ-ಉತ್ತರ ಭಾಗ, ಸ.ಪ.ಪೂ.ಕಾಲೇಜು ಉಪ್ಪಿನಂಗಡಿ-ದಕ್ಷಿಣ ಭಾಗ, ಕಬಕ ಹಿ.ಪ್ರಾ ಶಾಲೆ-ಪಶ್ಚಿಮ ಭಾಗ, ಕಬಕ ಹಿ.ಪ್ರಾ.ಶಾಲೆ-ಪೂರ್ವ ಭಾಗ, ಕಬಕ ಹಿ.ಪ್ರಾ.ಶಾಲೆ-ದಕ್ಷಿಣ ಭಾಗ, ಹಾರಾಡಿ ಉ ಹಿ.ಪ್ರಾ. ಶಾಲೆ(ಕೆಳಗಿನ ಕಟ್ಟಡ ದಕ್ಷಿಣ ಭಾಗ),ಹಾರಾಡಿ ಉ ಹಿ.ಪ್ರಾ. ಶಾಲೆ(ಕೆಳಗಿನ ಕಟ್ಟಡ ದಕ್ಷಿಣ ಭಾಗ ಕೊಠಡಿ ಸಂಖ್ಯೆ-3), ಹಾರಾಡಿ ಉ ಹಿ.ಪ್ರಾ. ಶಾಲೆ(ಮೇಲಿನ ಕಟ್ಟಡ ಪೂರ್ವ ಭಾಗ), ಹಾರಾಡಿ ಉ ಹಿ.ಪ್ರಾ. ಶಾಲೆ(ಮೇಲಿನ ಕಟ್ಟಡ ಪೂರ್ವಭಾಗ ಎಡಬದಿ ಕೊಠಡಿ ಸಂಖ್ಯೆ-5), ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ(ಕಾಲೇಜು ವಿಭಾಗ ಹೊಸ ಕಟ್ಟಡ ಕೊಠಡಿ ಸಂಖ್ಯೆ-1), ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ(ಕಾಲೇಜು ವಿಭಾಗ ಹೊಸ ಕಟ್ಟಡ ಕೊಠಡಿ ಸಂಖ್ಯೆ-1), ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ(ಹಿ.ಪ್ರಾ ಶಾಲಾ ಪಶ್ಚಿಮ ಭಾಗ ಕೊಠಡಿ ಸಂಖ್ಯೆ 1) ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ(ಪ್ರಾಥಮಿಕ ಶಾಲಾ ವಿಭಾಗ ಪಶ್ಚಿಮ ಭಾಗ ಕೊಠಡಿ ಸಂಖ್ಯೆ-2)ಸೂಕ್ಷ್ಮ ಮತಗಟ್ಟೆಗಳಾಗಿ ವಿಂಗಡಿಸಲಾಗಿತ್ತು. 220 ಮತಗಟ್ಟೆಗಳ ಪೈಕಿ 115 ಮತಗಟ್ಟೆಗಳಿಂದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು.

12 ಮಾದರಿ ಮತಗಟ್ಟೆಗಳು: ಚುನಾವಣೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರೇರೇಪಿಸಲು ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾದರಿ ಮತಗಟ್ಟೆಗಳನ್ನು ನಿರ್ಮಿಸುವಂತೆ ಚುನಾವಣಾ ಆಯೋಗವು ಸೂಚಿಸಿದ್ದು ಪುತ್ತೂರಿನಲ್ಲಿ 12 ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿತ್ತು. ವೀರಮಂಗಲ ಹಿ.ಪ್ರಾ ಶಾಲೆ, ಸಂಜಯನಗರ ಹಿ.ಪ್ರಾ ಶಾಲೆ-ಯಕ್ಷಗಾನ, ಕೋಡಿಂಬಾಡಿ ಹಿ.ಪ್ರಾ ಶಾಲೆ-ಕಂಬಳ, ಹಾರಾಡಿ ಹಿ.ಪ್ರಾ ಶಾಲೆ-ನೀಲತರಂಗ, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ-ಪರಂಪರೆ, ಕೆಮ್ಮಿಂಜೆ ಹಿ.ಪ್ರಾ ಶಾಲೆ-ಗೋ ಗ್ರೀನ್, ಕೆಪಿಎಸ್ ಕುಂಬ್ರ, ಕುಡಿಪ್ಪಾಡಿ ಹಿ.ಪ್ರಾ ಶಾಲೆ, ಆನಡ್ಕ ಹಿ.ಪ್ರಾ ಶಾಲೆ, ಮುಕ್ವೆ ಹಿ.ಪ್ರಾ ಶಾಲೆ, ಪರ್ಲಡ್ಕ ಹಿ.ಪ್ರಾ ಶಾಲೆ ಹಾಗೂ ನೆಲ್ಲಿಕಟ್ಟೆ ಹಿ.ಪ್ರಾ ಶಾಲೆಗಳಲ್ಲಿರುವ ಮತಗಟ್ಟೆಗಳು `ಸಖಿ’ ಮಾದರಿ ಮತಗಟ್ಟೆಗಳಾಗಿ ಕಾರ್ಯನಿರ್ವಹಿಸಿವೆ.

2,12,753 ಮತದಾರರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 1,04,918 ಮಂದಿ ಪುರುಷರು ಹಾಗೂ 1,07,832 ಮಂದಿ ಮಹಿಳಾ ಮತದಾರರು ಸೇರಿದಂತೆ ಒಟ್ಟು 2,12,753 ಮತದಾರರಿದ್ದಾರೆ. ಈ ಪೈಕಿ ಈ ಬಾರಿ 10,869 ಮಂದಿ ಹೊಸ ಮತದಾರರಾಗಿದ್ದಾರೆ. ಒಟ್ಟು ಮತದಾರರ ಪೈಕಿ 1597 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನ(ಪಿಡಬ್ಲ್ಯೂಡಿ) ಮತದಾರರು ಮನೆ ಮನೆ ಮತದಾನದಲ್ಲಿ ಮತ ಚಲಾಯಿಸಿದ್ದರು. ಮತದಾನದ ದಿನ ಅಗತ್ಯ ತುರ್ತು ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸಲಿರುವ ಮೆಸ್ಕಾಂ, ಕೆಎಸ್‌ಆರ್‌ಟಿಸಿ, ಸಂಚಾರಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ 30 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳೂ ಅಂಚೆ ಮತ ಚಲಾಯಿಸಿದ್ದರು.

ಬಿಗಿ ಬಂದೋಬಸ್ತ್: ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದೆ ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯುವಂತಾಗಲು ಮತಗಟ್ಟೆಗಳಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. 66 ಮತಗಟ್ಟೆಗಳಿಗೆ ಮೈಕ್ರೋ ಒಬ್ಸರ್ವರ್, ಸಿಆರ್‌ಪಿಎಫ್ 2, ಸಿ.ಐ.ಎಸ್.ಎಫ್.2, ಹರಿಯಾಣ ಪೊಲೀಸ್ ಸಿಬ್ಬಂದಿಗಳನ್ನು 1 ಮತ ಕೇಂದ್ರದಲ್ಲಿ ನಿಯೋಜಿಸಲಾಗಿತ್ತು.‌

1391 ಸಿಬ್ಬಂದಿಗಳು: ವಿಧಾನಸಭಾ ಕ್ಷೇತ್ರದ 220 ಮತಗಟ್ಟೆಗಳಲ್ಲಿ ಒಟ್ಟು 1390 ಸಿಬ್ಬಂದಿಗಳು ಮತದಾನ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.ಪ್ರತಿ ಬೂತ್‌ಗಳಲ್ಲಿ ಅಧ್ಯಕ್ಷಾಧಿಕಾರಿ-1, ಪ್ರಥಮ ಮತಗಟ್ಟೆ ಅಧಿಕಾರಿ-1, ಮತಗಟ್ಟೆ ಅಧಿಕಾರಿ-2, ಡಿ ಗ್ರೂಪ್-1, ಬಿಎಲ್‌ಓ-1 ಹಾಗೂ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದರು. ಇದಲ್ಲದೆ ಹೆಚ್ಚುವರಿಯಾಗಿ ಶೇ.20ರಷ್ಟು ಸಿಬ್ಬಂದಿಗಳನ್ನು ಮೀಸಲಿರಿಸಿಕೊಳ್ಳಲಾಗಿತ್ತು.

88 ವಾಹನಗಳು: ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗಳು ಹಾಗೂ ಮತ ಯಂತ್ರಗಳನ್ನು ಸಾಗಿಸಲು 33 ಬಸ್ಸು, 22 ಮ್ಯಾಕ್ಸಿಕ್ಯಾಬ್, 25 ಜೀಪುಗಳನ್ನು ಬಳಕೆ ಮಾಡಲಾಗಿತ್ತು. ಅಲ್ಲದೆ ಸೆಕ್ಟರ್ ಆಫೀಸರ್‌ಗಳ ಓಡಾಟಕ್ಕಾಗಿ 8 ಜೀಪುಗಳನ್ನು ಬಳಸಿಕೊಳ್ಳಲಾಗಿತ್ತು.

ಗಸ್ತು ಅರಣ್ಯ ಪಾಲಕರಿಗಿಲ್ಲ ಮತದಾನಕ್ಕೆ ಅವಕಾಶ?: ವಿವಿಧ ವಲಯಗಳಿಂದ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲ್ಪಟ್ಟ ಗಸ್ತು ಅರಣ್ಯ ಪಾಲಕರು ಮತದಾನದಿಂದ ಅವಕಾಶ ವಂಚಿತರಾಗಿರುವುದಾಗಿ ಮಾಹಿತಿ ಲಭಿಸಿದೆ. ಮೂರ‍್ನಾಲ್ಕು ದಿನಗಳ ಹಿಂದೆಯಷ್ಟೆ ಗಸ್ತು ಅರಣ್ಯ ಪಾಲಕರನ್ನೂ ಚುನಾವಣಾ ಕರ್ತವ್ಯಕ್ಕಾಗಿ ಬೇರೆ ತಾಲೂಕುಗಳಿಗೆ ನಿಯೋಜಿಸಲಾಗಿತ್ತು. ಆದರೆ ಆವೇಳೆಗಾಗಲೇ ಅಂಚೆ ಮತದಾನದ ಅವಧಿ ಮುಗಿದು ಹೋಗಿತ್ತು. ಇದರಿಂದಾಗಿ ಅವರು ಮತದಾನದ ಅವಕಾಶ ವಂಚಿತರಾಗಿದ್ದಾಗಿ ತಿಳಿದು ಬಂದಿದೆ.

ಮೇ13ರಂದು ಸುರತ್ಕಲ್ ಎನ್‌ಐಟಿಕೆಯಲ್ಲಿ ಮತ ಎಣಿಕೆ: ಪುತ್ತೂರು ವಿಧಾನ ಸಭಾ ಕ್ಷೇತ್ರ ಸೇರಿದಂತೆ ದ.ಕ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಗಳು ಮೇ13ರಂದು ಮಂಗಳೂರಿನ ಸುರತ್ಕಲ್ ಎನ್‌ಐಟಿಕೆಯಲ್ಲಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯಗಳು ಪ್ರಾರಂಭಗೊಳ್ಳಲಿದೆ. ಪ್ರಾರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆದ ಬಳಿಕ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಫಲಿತಾಂಶ ಪ್ರಕಟವಾಗಲಿದೆ.

ಐವರು ಅಭ್ಯರ್ಥಿಗಳಿಗೆ ಸ್ವ ಕ್ಷೇತ್ರದಲ್ಲಿಲ್ಲ ಮತದಾನ

ಪುತ್ತೂರು ವಿಧಾನಸಭಾ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರ ಆರು ಮಂದಿ ಅಭ್ಯರ್ಥಿಗಳಿಗೆ ಸ್ವ ಕ್ಷೇತ್ರದಲ್ಲಿ ಮತದಾನಕ್ಕೆ ಅವಕಾಶವಿರಲಿಲ್ಲ.ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಸುಳ್ಯ ಕ್ಷೇತ್ರದ ಕುಂತೂರುಪದವು ಶಾಲೆಯಲ್ಲಿ, ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಅವರು ಸುಳ್ಯ ಕ್ಷೇತ್ರದ ಗುತ್ತಿಗಾರಲ್ಲಿ,ಆಮ್ ಆದ್ಮಿಯ ಡಾ|ವಿಶು ಕುಮಾರ್ ಮೈಸೂರಲ್ಲಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಐವನ್ ಫೆರಾವೋ ಬೆಳ್ಳಾರೆಯಲ್ಲಿ, ಪಕ್ಷೇತರ ಅಭ್ಯರ್ಥಿ ಸುಂದರ ಕೊಯಿಲ ಅವರು ಮಂಗಳೂರಲ್ಲಿ ಮತಚಲಾಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮತ್ತು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಮಾತ್ರ ಸ್ವಕ್ಷೇತ್ರದಲ್ಲೇ ಮತಚಲಾಯಿಸಿದವರು. ಅಶೋಕ್ ಕುಮಾರ್ ರೈಯವರು ಕೋಡಿಂಬಾಡಿ ಶಾಲೆಯಲ್ಲಿ ಮತ್ತು ಅರುಣ್ ಕುಮಾರ್ ಪುತ್ತಿಲ ಅವರು ಮುಂಡೂರು ಶಾಲೆಯಲ್ಲಿ ಮತಚಲಾಯಿಸಿದರು. ಎಸ್‌ಡಿಪಿಐ ಅಭ್ಯರ್ಥಿ ಇಸ್ಮಾಯಿಲ್ ಶಾಫಿ ಬೆಳ್ಳಾರೆ ಅವರು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವುದರಿಂದ ಅವರು ಮತದಾನ ಮಾಡಿಲ್ಲ.

LEAVE A REPLY

Please enter your comment!
Please enter your name here