ಸುಳ್ಯ ವಿಧಾನಸಭಾ ಕ್ಷೇತ್ರ:ನೆಲ್ಯಾಡಿ ಭಾಗದಲ್ಲಿ ಬಿರುಸಿನ ಮತದಾನ ಬೂತ್‌ಗಳಿಗೆ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಭೇಟಿ

0

ನೆಲ್ಯಾಡಿ: ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಡಬ ತಾಲೂಕಿನ ನೆಲ್ಯಾಡಿ, ಗೋಳಿತ್ತೊಟ್ಟು, ರಾಮಕುಂಜ ವ್ಯಾಪ್ತಿಯಲ್ಲಿ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ಆಗಮಿಸಿ ಮತಚಲಾವಣೆ ಮಾಡಿರುವುದು ಕಂಡುಬಂದಿದೆ.


ನೆಲ್ಯಾಡಿ, ಕೌಕ್ರಾಡಿ, ಶಿರಾಡಿ, ಕೊಯಿಲ, ರಾಮಕುಂಜ, ಗೋಳಿತ್ತೊಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮತದಾನಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಬೆಳಿಗ್ಗೆ 7 ಗಂಟೆಗೇ ಮತದಾರರೂ ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ತೆರಳಿ ಮತಚಲಾವಣೆ ಮಾಡುತ್ತಿರುವುದು ಕಂಡಬಂದಿದೆ. ಮಧ್ಯಾಹ್ನದ ತನಕ ಮತಗಟ್ಟೆಗಳಲ್ಲಿ ಬಿರುಸಿನ ಮತಚಲಾವಣೆ ನಡೆದಿದ್ದು ಮತದಾರರ ಸರತಿ ಸಾಲು ಕಂಡುಬರುತಿತ್ತು. ಮಧ್ಯಾಹ್ನದ ಬಳಿಕ ಸರತಿ ಸಾಲು ಕಂಡುಬಂದಿಲ್ಲ. ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ವಿಕಲಚೇತನರು, ವಯಸ್ಸಾದವರೂ ತಮ್ಮ ಸಹಾಯಕರೊಂದಿಗೆ ವ್ಹೀಲ್ ಚಯರ್‌ಗಳಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಿದರು.


ಕೈಕೊಟ್ಟ ಮತಯಂತ್ರ:
ನೆಲ್ಯಾಡಿ ಶಾಲೆಯಲ್ಲಿನ ಮತದಾನ ಕೇಂದ್ರದಲ್ಲಿ ಸುಮಾರು 172 ಮಂದಿ ಮತ ಚಲಾವಣೆ ಮಾಡಿದ ಬಳಿಕ ಮತಯಂತ್ರ ಕೈಕೊಟ್ಟಿತ್ತು. ಇದರಿಂದಾಗಿ ಮತದಾನ ಪ್ರಕ್ರಿಯೆ ಸ್ವಲ್ಪ ಸಮಯ ಸ್ಥಗಿತಗೊಂಡಿತು. ಬಳಿಕ ಅಧಿಕಾರಿಗಳಲ್ಲಿದ್ದ ಹೆಚ್ಚುವರಿ ಮತಯಂತ್ರ ಬಳಸಿ ಮತದಾನ ಪ್ರಕ್ರಿಯೆ ಮುಂದುವರಿಸಲಾಯಿತು. ಗೋಳಿತ್ತೊಟ್ಟು ಶಾಲೆಯಲ್ಲಿನ ಮತದಾನ ಕೇಂದ್ರದಲ್ಲೂ ಬೆಳಿಗ್ಗೆ ಮತಯಂತ್ರ ಕೈಕೊಟ್ಟಿದ್ದರಿಂದ ಸುಮಾರು ಅರ್ಧತಾಸು ಮತದಾನ ಪ್ರಕ್ರಿಯೆ ವಿಳಂಬವಾಗಿ ಆರಂಭಗೊಂಡಿತು. ಅಧಿಕಾರಿಗಳು ಆಗಮಿಸಿ ಮತಯಂತ್ರ ದುರಸ್ತಿಗೊಳಿಸಿದ ಬಳಿಕ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು. ಕೊಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಬಳೂರು ಶಾಲೆಯಲ್ಲಿನ ಮತದಾನ ಕೇಂದ್ರದಲ್ಲೂ ಇವಿಎಂ ಕೈಕೊಟ್ಟಿದ್ದರಿಂದ ಅರ್ಧತಾಸು ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸರಿಪಡಿಸಿದ ಬಳಿಕ ಮತದಾನ ಪ್ರಕ್ರಿಯೆ ಮುಂದುವರಿಯಿತು.


ನಿಧಾನ ಪ್ರಕ್ರಿಯೆ:
ಹೊಸಮಜಲು ಶಾಲೆಯಲ್ಲಿನ ಮತದಾನ ಕೇಂದ್ರದಲ್ಲಿ ಬೆಳಗ್ಗಿನಿಂದಲೇ ಮತದಾನ ಪ್ರಕ್ರಿಯೆ ನಿಧಾನವಾಗಿ ಸಾಗಿತು. ಇದರಿಂದಾಗಿ ಸಂಜೆ ತನಕವೂ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನಕ್ಕೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಅಡ್ಡಹೊಳೆ, ಗೋಳಿತ್ತೊಟ್ಟು ಸೇರಿದಂತೆ ಸೂಕ್ಷ್ಮ ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಸೇನಾ ಪಡೆ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮಕ್ಕಳ ಕೊರತೆ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಿರಾಡಿ ಸರಕಾರಿ ಹಿ.ಪ್ರಾ.ಶಾಲೆಯನ್ನು ಮತದಾನಕ್ಕಾಗಿ ಸಿದ್ಧಗೊಳಿಸಲಾದ್ದು ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು.


ಅಭ್ಯರ್ಥಿಗಳ ಭೇಟಿ:
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿ ಮತದಾನದ ಪ್ರಕ್ರಿಯೆ ಕುರಿತು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಜಿ.ಕೃಷ್ಣಪ್ಪ ಅವರ ಪುತ್ರಿ ಆಶಿಕಾ ಅವರು ಗೋಳಿತ್ತೊಟ್ಟು ಹಾಗೂ ಇತರೇ ಬೂತ್‌ಗಳಿಗೆ ಭೇಟಿ ನೀಡಿ ತಂದೆಯ ಪರವಾಗಿ ಮತಯಾಚಿಸಿದರು. ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಚಲಾಯಿಸುವಂತೆ ಮತಗಟ್ಟೆಯ ಹೊರಗೆ ಕೊನೆ ಹಂತದಲ್ಲಿ ಮತದಾರರ ಮನವೊಲಿಕೆ ಕಸರತ್ತು ನಡೆಸುತ್ತಿರುವುದು ಕಂಡುಬಂದಿದೆ.

ಹೆಸರು ಡಿಲಿಟ್, ಮತದಾನಕ್ಕೆ ಅವಕಾಶ ನಿರಾಕರಣೆ:
ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯಲ್ಲಿನ ಬೂತ್ ಸಂಖ್ಯೆ 9ರಲ್ಲಿ 10ಕ್ಕೂ ಹೆಚ್ಚು ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಡಿಲಿಟ್ ಆಗಿದ್ದರಿಂದ ಮತದಾನಕ್ಕೆ ಅವಕಾಶ ನಿರಾಕರಣೆ ಮಾಡಲಾಯಿತು. ಮತದಾರರು ಮತಗಟ್ಟೆಗೆ ಬಂದರೂ ಮತದಾನಕ್ಕೆ ಅವಕಾಶ ಸಿಗದೇ ಇರುವುದರಿಂದ ನಿರಾಸೆಯಿಂದ ಹಿಂತಿರುಗಿದರು. ಹೆಸರು ಡಿಲಿಟ್ ಆಗಿರುವುದನ್ನು ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿ ಮನವರಿಕೆ ಮಾಡಿದರೂ ಮತದಾನಕ್ಕೆ ಅವಕಾಶ ಸಿಗಲಿಲ್ಲ. ಜೀವಂತವಿದ್ದರೂ ಯಾವುದೇ ಮುನ್ಸೂಚನೆ ನೀಡದೇ ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್ ಆಗಿರುವುದು ಮತದಾರರ ಆಕ್ರೋಶಕ್ಕೂ ಕಾರಣವಾಯಿತು.

LEAVE A REPLY

Please enter your comment!
Please enter your name here