ನೆಲ್ಯಾಡಿ: ಭಾರೀ ಗಾಳಿ ಹಾಗೂ ಮಳೆಗೆ ಬೃಹತ್ ಮರವೊಂದು ಮನೆ ಮೇಲೆ ಬಿದ್ದು ಮನೆ ಸಂಪೂರ್ಣ ಹಾನಿಗೊಂಡ ಘಟನೆ ಮೇ 11ರಂದು ರಾತ್ರಿ ಗೋಳಿತ್ತೊಟ್ಟು ಗ್ರಾಮದ ಪಟೇರಿ ಎಂಬಲ್ಲಿ ನಡೆದಿದೆ.
ಪಟೇರಿ ನಿವಾಸಿ ಅಣ್ಣು ಮುಗೇರ ಎಂಬವರ ಮನೆ ಮೇಲೆ ಬೃಹತ್ ಮರಬಿದ್ದ ಪರಿಣಾಮ ಹಂಚಿನ ಮಾಡು, ಗೋಡೆ ಜಖಂಗೊಂಡಿದೆ. ಘಟನೆ ವೇಳೆ ಅಣ್ಣುಮುಗೇರ ಹಾಗೂ ಅವರ ಮನೆಯವರು ಮನೆಯೊಳಗಿದ್ದು ಮರ ಮನೆ ಮೇಲೆ ಬೀಳುತ್ತಿದ್ದಂತೆ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ರಾತ್ರಿ ವೇಳೆ ಮರ ತೆರವುಗೊಳಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಅಣ್ಣು ಮುಗೇರ ಹಾಗೂ ಅವರ ಮನೆಯವರು ಪಕ್ಕದಲ್ಲೇ ಇರುವ ಸಂಬಂಧಿಕರ ಮನೆಗೆ ಶಿಫ್ಟ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ಸದಸ್ಯೆ ಜೀವಿತಾಚಂದ್ರಶೇಖರ ಶೆಟ್ಟಿ ಪೆರಣ, ದಲಿತ ಮುಖಂಡ ಬಾಬು ಮುಗೇರ ಅಂಜರ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇ 11ರಂದು ರಾತ್ರಿ ಗೋಳಿತ್ತೊಟ್ಟು ಪರಿಸರದಲ್ಲಿ ಭಾರೀ ಗಾಳಿ, ಗುಡುಗು ಸಹಿತ ಮಳೆಯಾಗಿದೆ.