ಈಶ್ವರಮಂಗಲ: ಮೇನಾಲ ಜಲಧರ ಕಾಲನಿ ಸೃಷ್ಟಿಕರ್ತ ಏಳ್ನಾಡುಗುತ್ತು ಜಲಧರ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ದೀನ ದಲಿತರ ಕಾಳಜಿ ವಹಿಸುವ ಮೂಲಕ ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲದಲ್ಲಿ ಜಲಧರ ಕಾಲನಿಯನ್ನು ಸೃಷ್ಟಿಸುವ ಮೂಲಕ ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಏಳ್ನಾಡುಗುತ್ತು ಜಲಧರ ಶೆಟ್ಟಿಯವರಿಗೆ ಮೇನಾಲ ಜಲಧರ ಕಾಲನಿ ನಿವಾಸಿಗಳು ಹಾಗೂ ಶ್ರೀ ಮಾರಿಯಮ್ಮ ಸಹಪರಿವಾರ ದೈವಸ್ಥಾನದ ಭಕ್ತಾಧಿಗಳಿಂದ ಶ್ರದ್ಧಾಂಜಲಿ ಸಭೆಯು ಮೇ.15 ರಂದು ಮೇನಾಲ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಶ್ರೀ ಮಾರಿಯಮ್ಮ ಸಹಪರಿವಾರ ದೈವಸ್ಥಾನದ ಮೊಕ್ತೇಸರ ಕುಶಾಲಪ್ಪ ಕಲ್ಲಡ್ಕರವರು ಜಲಧರ ಶೆಟ್ಟಿಯವರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು.

ಪ್ರವೀಣ್ ರೈ ಮೇನಾಲರವರು ಮಾತನಾಡಿ, ನನ್ನ ಚಿಕ್ಕಪ್ಪರಾಗಿದ್ದ ಜಲಧರ ಶೆಟ್ಟಿಯವರು ತನ್ನ ಎಳೆಯ ಪ್ರಾಯದಲ್ಲೇ ಜಾತ್ಯಾತೀಯ ಮನೋಭಾವವನ್ನು ಬೆಳೆಸಿಕೊಂಡವರು, ತನ್ನ ಶಾಲಾ ಜೀವನದ ಹಂತದಲ್ಲೇ ಯುವಕ ಮಂಡಲ ಇತ್ಯಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು. ಧಾರ್ಮಿಕ ಭಾವನೆಯನ್ನು ಇಟ್ಟುಕೊಂಡ ಇವರು ಸಮಾಜದ ಉನ್ನತಿಗೆ ಜೀವನದ ಅವಧಿಯಲ್ಲಿ ಶ್ರಮ ವಹಿಸಿದವರು. ಸಮಾಜದ ಜನರ ಕಷ್ಟ ಕಾರ್ಪಣ್ಯಗಳಿಗೆ ಸದಾ ತುಡಿಯುವ ಮನಸ್ಸು ಇವರದ್ದಾಗಿತ್ತು ಆ ಮೂಲಕ ನಿಶ್ವಾರ್ಥ ಸೇವೆಯ ಮೂಲಕ ಎಲ್ಲರೂ ತನ್ನವರೇ ಎಂದುಕೊಂಡು ತನ್ನಿಂದ ಸಾಧ್ಯವಾಗುವ ರೀತಿಯಲ್ಲಿ ಸಹಾಯ ಮಾಡುತ್ತಾ ಜೀವನ ಮಾಡಿದವರು ಆಗಿದ್ದಾರೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ನೆಟ್ಟಣಿಗೆ ಮುಡ್ನೂರು ಗ್ರಾಪಂನ ಸದಸ್ಯ ರಾಮ ಮೇನಾಲರವರು ಮಾತನಾಡಿ, ಜಲಧರ ಶೆಟ್ಟಿಯವರು ಒಂದು ಆಲದ ಮರವಾಗಿ ಎಲ್ಲರಿಗೂ ಆಸರೆಯಾಗಿದ್ದವರು. ಜನನ ಅನಿರೀಕ್ಷಿತ ಮರಣ ಎಂಬುದು ನಿಶ್ವಿತ ಈ ನಡುವೆ ನಾವು ಮಾಡುವ ಒಳ್ಳೆಯ ಕೆಲಸಗಳೇ ಮುಂದೆ ಶಾಶ್ವತವಾಗಿರುತ್ತದೆ. ಈ ನಿಟ್ಟಿನಲ್ಲಿ ಜಲಧರ ಶೆಟ್ಟಿಯವರ ನಮ್ಮನ್ನಗಲಿದರೂ ಮುಂದಿನ ನೂರಾರು ಜನ್ಮಕ್ಕೂ ಅವರ ನೆನಪು, ಅವರ ಹೆಸರು ಶಾಶ್ವತವಾಗಿರುತ್ತದೆ. ಜಾತಿ, ಮತ, ಧರ್ಮದ ಬೇಧಭಾವ ಇಲ್ಲದೆ ಎಲ್ಲರೊಂದಿಗೆ ಆತ್ಮೀಯತೆಯಲ್ಲಿದ್ದವರು. ಕಾಲನಿಗಾಗಿ ಅವರು ಮಾಡಿದ ಸಹಾಯವನ್ನು ಎಂದಿಗೂ ಮರೆಯಬಾರದು. ಕಾಲನಿಯ ಸಂಪೂರ್ಣ ಅಭಿವೃದ್ಧಿಗೆ ಕಾರಣೀಕರ್ತರು ಜಲಧರ ಶೆಟ್ಟಿಯವರಾಗಿದ್ದಾರೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಜಲಧರ ಶೆಟ್ಟಿಯವರ ಪುತ್ರ ಕಿಶನ್ ಜೆ.ಶೆಟ್ಟಿ ಮಾತನಾಡಿ, ತನ್ನ ತಂದೆಯವರು ಮಾಡಿರುವ ಸಮಾಜ ಸೇವೆ, ದೀನದಲಿತರಿಗೆ ಅವರು ಮಾಡಿರುವ ಸಹಾಯವನ್ನು ನೋಡಿದಾಗ ನನಗೆ ಹೆಮ್ಮೆಯಾಗುತ್ತದೆ. ಇಂತಹ ತಂದೆಯನ್ನು ಪಡೆದ ನಾನು ಭಾಗ್ಯವಂತ. ತಂದೆಯವರ ಮೇಲೆ ಕಾಲನಿ ಇಟ್ಟಿರುವ ಅಭಿಮಾನಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರದೀಪ್ ರೈ ಮೇನಾಲ, ರಘುನಾಥ ಆಳ್ವ ಮೇನಾಲ, ಶ್ರೀ ಮಾರಿಯಮ್ಮ ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಘುನಾಥ ಮೇನಾಲ ಸೇರಿದಂತೆ ಕಾಲನಿಯ ಹಲವು ಮಂದಿ ಉಪಸ್ಥಿತರಿದ್ದರು. ಸುಂದರ ಮೇನಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ನುಡಿನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here