ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಚೆಂಡೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಮೇ. 19 ರಂದು ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಸಂಚಾಲಕ ರವಿನಾರಾಯಣ ಎಂ ಮಾತನಾಡಿ, ‘ಸನಾತನ ಸಂಸ್ಕೃತಿಯ ಭಾಗವಾಗಿರುವ ಚೆಂಡೆ ವಾದ್ಯದ ಅಭ್ಯಾಸ ದೈಹಿಕ ವ್ಯಾಯಾಮದ ಜೊತೆಗೆ ಏಕಾಗ್ರತೆಯನ್ನೂ ಮೂಡಿಸುತ್ತದೆ’ ಎಂದರು.
ತರಬೇತುದಾರರಾಗಿ ಆಗಮಿಸಿದ ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ವಿಜೇತ, ಪ್ರಖ್ಯಾತ ಯಕ್ಷಗಾನ ಹಾಗೂ ದೈವ ನರ್ತನ ಕಲಾವಿದ ಮನು ಪಣಿಕ್ಕರ್ ಮಾತನಾಡಿ ‘ದೇವರ ಅತೀ ಸಮೀಪದಲ್ಲಿ ನಿಂತು ನುಡಿಸುವ ವಾದ್ಯ ಎಂದರೆ ಅದು ಚೆಂಡೆ ವಾದ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತರೆ ಸುಲಭವಾಗಿ ಕರಗತಗೊಳ್ಳುವ ವಿದ್ಯೆ’ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಇವರು ‘ವಿವೇಕಾನಂದ ಶಾಲೆಯು ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾಗಿದ್ದು ಈ ಬಾರಿ ಪಠ್ಯೇತರ ಚಟುವಟಿಕೆಯ ಭಾಗವಾಗಿ ಶಾಸ್ತ್ರೀಯ ಚೆಂಡೆ ತರಬೇತಿಯನ್ನು ಹಮ್ಮಿಕೊಂಡಿದ್ದು ಹೊಸ ಚೆಂಡೆವಾದ್ಯ ಗುಂಪುಗಳು ರಚನೆಯಾಗಲಿವೆ’ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೃಷ್ಣ ಪ್ರಸನ್ನ ಉಪಸ್ಥಿತರಿದ್ದರು.
ಶಿಕ್ಷಕಿ ಜ್ಯೋತಿಲಕ್ಷ್ಮಿ ಪ್ರಾರ್ಥಿಸಿದರು. ಪದ್ಮಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಚೆಂಡೆ ತರಬೇತಿ ಶಿಬಿರದ ನೋಂದಾವಣೆಗಾಗಿ 8722638828 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮುಖ್ಯೋಪಾಧ್ಯಾಯರು ಇದೇ ವೇಳೆ ತಿಳಿಸಿದರು.