ಉಪ್ಪಿನಂಗಡಿ : ಇಲ್ಲಿನ ಕುಮಾರಧಾರಾ ಹಳೇ ಸೇತುವೆ ಮೂಲಕ ಹಾದು ಹೋಗಿರುವ ಬಿಎಸ್‌ಎನ್‌ಎಲ್ ಸಂಸ್ಥೆಯ ಕೇಬಲ್ ನ್ನು ಕದಿಯಲೆತ್ನಿಸಿದ ಖದೀಮರ ಕೃತ್ಯದಿಂದಾಗಿ ಬಿಎಸ್ ಎನ್ ಎಲ್ ಬ್ರಾಡ್‌ಬ್ಯಾಂಡ್ ಇಂಟರ್ ನೆಟ್ ಸಂಪರ್ಕ ಅಸ್ತವ್ಯಸ್ತವಾದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಹಳೇಯ ವ್ಯವಸ್ಥೆಯಲ್ಲಿ ಬಿಎಸ್ ಎನ್ ಎಲ್ ಸಂಸ್ಥೆಯು ತಾಮ್ರದ ತಂತಿಗಳನ್ನು ಒಳಗೊಂಡ ಕೇಬಲ್ ಗಳನ್ನು ಅಳವಡಿಸುತ್ತಿದ್ದು, ಸದ್ರಿ ಕೇಬಲ್ ಗಳಲ್ಲಿನ ತಾಮ್ರದ ತಂತಿಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವುದರಿಂದ ಕೇಬಲ ಕಳವು ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿದ್ದವು. ಅಂತೆಯೇ ಉಪ್ಪಿನಂಗಡಿಯ ಕುಮಾರಧಾರಾ ಹಳೇ ಸೇತುವೆಯಲ್ಲಿ ಅಳವಡಿಸಲಾದ ಕೇಬಲ್ ನಲ್ಲಿಯೂ ತಾಮ್ರದ ತಂತಿಗಳಿರಬಹುದೆಂದು ಅಂದಾಜಿಸಿ ಗುರುವಾರ ತಡ ರಾತ್ರಿ ಕಾರ್ಯಾಚರಣೆಗಿಳಿದಿದ್ದ ಕಳ್ಳರು ಮೂರು ಕಡೆಗಳಲ್ಲಿ ಕೇಬಲ್ ನ್ನು ಕತ್ತರಿಸಿದ್ದು, ಅದರಲ್ಲಿ ತಾಮ್ರದ ಕೇಬಲ್ ಬದಲಾಗಿ ಫೈಬರ್ ಕೇಬಲ್ ಇರುವುದನ್ನು ಕಂಡು ಹತಾಶರಾಗಿ ನಿರ್ಗಮಿಸಿದ್ದಾರೆ.
ಕಳ್ಳರ ಕೃತ್ಯದಿಂದಾಗಿ ಬಿಎಸ್ ಎನ್ ಎಲ್ ಇಂಟರ್ ನೆಟ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಬಿಎಸ್ ಎನ್ ಎಲ್ ಸಿಬ್ಬಂದಿಗಳ ಸಕಾಲಿಕ ಪ್ರಯತ್ನದಿಂದಾಗಿ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಪುನರ್ ಸಂಪರ್ಕ ಕಲ್ಪಿಸಲು ಸಾಧ್ಯವಾಯಿತು.