ಪುತ್ತೂರು: ರಾಜ್ಯದ ವಿಧಾನಸಭಾ ಚುನಾವಣೆಯ ಸಂಭ್ರಮಕ್ಕೆ ತೆರೆ ಬಿದ್ದಿದೆ. ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಗೊಂಡಿದೆ. ಈ ಮಧ್ಯೆ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲಿದೆ. ಆ ವೇಳೆಗಾಗಲೇ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಕಾರಾವಧಿ ಮುಕ್ತಾಯಗೊಳ್ಳಲಿದೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟವಾಗಬೇಕಿದೆ.
ಅವಧಿ ಮುಕ್ತಾಯ: ಗ್ರಾಮ ಪಂಚಾಯಿತಿಗಳಲ್ಲಿ ಈಗಿರುವ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿ ಇದೇ ಆಗಸ್ಟ್ಗೆ ಪೂರ್ಣಗೊಳ್ಳಲಿದೆ. ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಮತ್ತೆ ನಡೆಯಬೇಕಿದೆ. ಜುಲೈನಲ್ಲಿ ಸರ್ಕಾರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆ ಮುಗಿದಿದ್ದು, ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಆಗಸ್ಟ್ಗೆ ಪೂರ್ಣವಾಗುತ್ತಿರುವ ಕಾರಣ ಅಧಿಕಾರ ಬದಲಾಗಲು ದಿನಗಣನೆ ಆರಂಭವಾಗಿದೆ. ಬದಲಾಗುತ್ತಿರುವ ಮೀಸಲಾತಿ ಕದನ ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಕಾಂಗ್ರೆಸ್ ಸರಕಾರ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಅಽಕಾರ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸಿತ್ತು. ಬಳಿಕ ಬಿ.ಯಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಸರಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು ಎರಡೂವರೆ ವರ್ಷಗಳಿಗೆ ಇಳಿಸಿತ್ತು. ಈಗ ಮತ್ತೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯನ್ನು 5 ವರ್ಷಕ್ಕೆ ನಿಗದಿಪಡಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾದಲ್ಲಿ ಈಗ ಇರುವ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರೇ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ತಿದ್ದುಪಡಿ ಮಾಡದೇ ಇದ್ದಲ್ಲಿ ಗ್ರಾಮ ಪಂಚಾಯತಿಗಳಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಅದಕ್ಕಾಗಿ ಮೀಸಲಾತಿ ಪ್ರಕಟ ಆಗಬೇಕಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ, ಬಂಟ್ವಾಳ ಸಹಿತ ರಾಜ್ಯದ 6,028 ಗ್ರಾಮ ಪಂಚಾಯಿತಿಗಳಿಗೆ 2019ರ ಡಿಸೆಂಬರ್ನಲ್ಲಿ ಚುನಾವಣೆ ನಡೆಸಲಾಗಿತ್ತು. 2020ರ ಮಾರ್ಚ್ನಲ್ಲಿ ಮೀಸಲಾತಿ ನಿಗದಿಯಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು.