ಉಟ್ಟ ಸೀರೆ ಬಿಚ್ಚಿಕೊಟ್ಟು ಪ್ರಾಣ ರಕ್ಷಣೆಗೆ ನೆರವಾದ ಮಹಿಳೆ

0

ಪುತ್ತೂರು: ನಗರದ ಕೆ ಆರ್‌ ಸರ್ಕಲ್‌ ಅಂಡರ್‌ ಪಾಸ್‌ ನಲ್ಲಿ ಮಳೆ ನೀರಿನಿಂದಾಗಿ ಕಾರಿನಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಮಹಿಳೆಯೊಬ್ಬರು ಉಟ್ಟ ಸೀರೆಯನ್ನೇ ಬಿಚ್ಚಿ ಕೊಟ್ಟು ಹಲವರ ಪ್ರಾಣ ರಕ್ಷಣೆಗೆ ಕಾರಣರಾದ ಘಟನೆ ನಡೆದಿದ್ದು, ತಡವಾಗಿ ಬೆಳಿಕಿಗೆ ಬಂದಿದೆ.

ಮೂರು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಬೆಂಗಳೂರಿನ ಕೆ ಆರ್‌ ವೃತ್ತದ ಅಂಡರ್‌ ಪಾಸ್ ನಲ್ಲಿ ಮಳೆ ನೀರು ತುಂಬಿ ಕಾರೊಂದು ಸಿಕ್ಕಿ ಹಾಕಿಕೊಂಡಿತ್ತು. ಸಮೀಪದ ಲೋಕಾಯುಕ್ತ ಕಛೇರಿ ಬಳಿ ಇದ್ದ ಟಿ ವಿ ಚಾನೆಲೊಂದರ ವರದಿಗಾರ ಮತ್ತು ಕ್ಯಾಬ್‌ ಚಾಲಕ ಕಾರಿನಲ್ಲಿದ್ದವರ ಆರ್ತನಾದ ಕೇಳಿ ಸಹಾಯಕ್ಕೆ ಧಾವಿಸಿದ್ದಾರೆ. ಕ್ಯಾಬ್‌ ಚಾಲಕನಿಗೆ ಈಜು ಬರುತ್ತಿದ್ದ ಕಾರಣ ಯೋಚನೆ ಮಾಡದೆ ನೀರಿಗೆ ಜಿಗಿದು ಕಾರಿನಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದರೆ ವರದಿಗಾರ ದಾರಿಯಲ್ಲಿ ಹೋಗುವವರಲ್ಲಿ ಸಹಾಯ ಯಾಚಿಸುತ್ತಿದ್ದರು. ಕಾರಿನಲ್ಲಿದ್ದವರನ್ನು ಮೇಲೆಕ್ಕೆತ್ತಲು ಯಾವುದೇ ಸಲಕರಣೆ ಇಲ್ಲದೆ ಪರದಾಡುತ್ತಿರುವ ವೇಳೆ ಅದೇ ದಾರಿಯಲ್ಲಿ ದೇವರಂತೆ ಬಂದ ಮಹಿಳೆಯೊಬ್ಬರು ಪರಿಸ್ಥಿತಿಯ ಗಂಭೀರತೆ ಅರಿತು ತಾನು ಉಟ್ಟಿದ್ದ ಸೀರೆಯನ್ನೇ ಬಿಚ್ಚಿಕೊಟ್ಟು ಅದರ ಸಹಾಯದಿಂದ ಅವರನ್ನು ಮೇಲೆಕ್ಕೆತ್ತಿ ಎಂದಿದ್ದಾರೆ. ಮಹಿಳೆ ಉಟ್ಟ ಸೀರೆ ಬಿಚ್ಚಿ ಕೊಟ್ಟಿದ್ದನ್ನು ಕಂಡು ಮತ್ತಿಬ್ಬರು ಮಹಿಳೆಯರು ರಕ್ಷಣೆಗಾಗಿ ತಮ್ಮ ದುಪ್ಪಟ್ಟವನ್ನು ನೀಡಿದ್ದಾರೆ. ಸೀರೆ ಬಿಚ್ಚಿ ಕೊಟ್ಟ ಮಹಿಳೆಯ ಔದಾರ್ಯಕ್ಕೆ ತಲೆ ಭಾಗಿದ ವ್ಯಕ್ತಿಯೊಬ್ಬರು ತನ್ನ ಶರ್ಟನ್ನು ಆಕೆಗೆ ತೊಡಿಸಿ ಆಟೋವೊಂದರಲ್ಲಿ ಆಕೆಯ ಮನೆಗೆ ಕಳಿಸಿ ಕೊಟ್ಟಿದ್ದಾರೆ. ಇತ್ತ ಕ್ಯಾಬ್‌ ಚಾಲಕ ಕಾರಿನಲ್ಲಿದ್ದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಾರಿನಲ್ಲಿದ್ದವರ ಪೈಕಿ ಮಹಿಳೆಯೊಬ್ಬರು ಸೀಟಿನ ಮಧ್ಯ ಭಾಗದಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಆಕೆಯನ್ನು ಮೇಲಕ್ಕೆತ್ತಲು ತಡವಾಗಿದೆ. ಅದು ಹೇಗೋ ರಕ್ಷಣಾ ತಂಡದ ಸಹಾಯದೊಂದಿಗೆ ಆಕೆಯನ್ನು ಮೇಲೆಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಜವರಾಯ ಆಕೆಯ ಉಸಿರು ಕಸಿದು ಕೊಂಡಿದ್ದಾನೆ. ಹಲವರ ಪ್ರಾಣ ರಕ್ಷಿಸಿದ ಸಂಭ್ರಮಕ್ಕಿಂತ ಆ ಮಹಿಳೆಯ ಪ್ರಾಣ ರಕ್ಷಣೆ ಸಾಧ್ಯವಾಗಿಲ್ಲ ಎನ್ನುವ ನೋವು ಕ್ಯಾಬ್‌ ಚಾಲಕ ವಿಜಯ್‌ ಮತ್ತು ವರದಿಗಾರ ನಾಗೇಶ್‌ ಅವರನ್ನು ಕಾಡುತ್ತಿದೆ. ಇವರ ಬೆಲೆ ಕಟ್ಟಲಾಗದ ಮಾನವೀಯತೆಯ ನಡುವೆ ಹೆಣ್ಣೊಬ್ಬಳು ಬಿಚ್ಚಿ ಕೊಟ್ಟ ಕೇಸರಿ ಬಣ್ಣದ ಸೀರೆ ಮೂರು ದಿನಗಳ ಬಳಿಕವೂ ಅಂಡರ್‌ ಪಾಸ್‌ ಬಳಿ ನಡೆದ ಘಟನೆಗೆ ಸಾಕ್ಷಿಯಾಗಿ ಉಳಿದಿದೆ.

LEAVE A REPLY

Please enter your comment!
Please enter your name here