ಮುತ್ತೂಟ್ ಫೈನಾನ್ಸ್, ಕಸ್ವಿ ಹಸಿರು ದಿಬ್ಬಣ, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ
ಪುತ್ತೂರು: ಮುತ್ತೂಟ್ ಫೈನಾನ್ಸ್, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ಕಸ್ವಿ ಹಸಿರು ದಿಬ್ಬಣ ಹಾಗೂ ಪುತ್ತೂರು ತಾಲೂಕು ಆರೋಗ್ಯ ಕೇಂದ್ರದ ಆಶ್ರಯದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಲೇರಿಯಾ – ಡೆಂಗ್ಯು ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ ಮತ್ತು ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಎಸ್.ಆರ್.ಕೆ. ಲ್ಯಾಡರ್ಸಿನ ಕೇಶವ್ ಅಮೈ ಮಾತನಾಡಿ, ಮುತ್ತೂಟ್ ಫೈನಾನ್ಸ್ ಹಲವಾರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಆಶಾ ಕಾರ್ಯಕರ್ತೆಯರ ಸೇವಾ ಕಾರ್ಯವನ್ನು ಗಮನಿಸಿ ಅವರಿಗೆ ಗೌರವಪೂರ್ವಕವಾಗಿ ಟಾರ್ಚ್ ಲೈಟ್ ನೀಡಲಾಗಿದೆ. ಇಂತಹ ಕಾರ್ಯಕ್ರಮ ಅನುಕರಣೀಯ ಎಂದರು.
ರೋಟರ್ಯಾಕ್ಟ್ ಜಿಲ್ಲಾ ಘಟಕದ ಸಭಾಪತಿ (ಡಿ.ಆರ್.ಸಿ.ಸಿ.) ರತ್ನಾಕರ್ ರೈ ಮಾತನಾಡಿ, ಆಶಾ ಕಾರ್ಯಕರ್ತೆಯರು ಗ್ರಾಮ ಮಟ್ಟದಲ್ಲಿ ಜನಸಾಮಾನ್ಯರ ಜೊತೆ ಕೆಲಸ ಮಾಡುವವರು. ಅವರಿಗೆ ಟಾರ್ಚ್ ಲೈಟ್ ನೀಡುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶುಭಹಾರೈಸಿದರು.
ಕಸ್ವಿ ಹಸಿರು ದಿಬ್ಬಣದ ಮುಖ್ಯಸ್ಥ ಕೇಶವ ರಾಮಕುಂಜ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದಿಸುವ ಕೆಲಸ ಮುತ್ತೂಟ್ ಫೈನಾನ್ಸ್ ಮಾಡುತ್ತಿದೆ. ಆಶಾ ಕಾರ್ಯಕರ್ತೆಯರು ಕೊರೋನಾ ವಾರಿಯರ್ಸ್ ಆಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಕಸ್ವಿ ಹಸಿರು ದಿಬ್ಬಣದ ಸಹಯೋಗದಲ್ಲಿ ರಾಮಕುಂಜದ ನೆಕ್ಕರೆ ಪರಿಸರದಲ್ಲಿ 50 ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ದಿನೇಶ್ ಕೋಡಿಯಾಲ್ಬೈಲ್ ಹಾಗೂ ಮಾಧವ ಉಳ್ಳಾಲ್ ಅವರ ನೇತೃತ್ವದಲ್ಲಿ “ಹುಟ್ಟುಹಬ್ಬ ಹೊಸ ಪೀಳಿಗೆಯ ಉಸಿರಾಗಲಿ” ಎಂಬ ಧ್ಯೇಯವಾಕ್ಯದೊಂದಿಗೆ ಹುಟ್ಟಿದ ಕಸ್ವಿ ಹಸಿರು ದಿಬ್ಬಣ ಕಳೆದ ವರ್ಷ 19ಜನರ ಹುಟ್ಟುಹಬ್ಬವನ್ನು ಗಿಡ ನೆಡುವುದರ ಮೂಲಕ ಆಚರಿಸಿ ಇನ್ನಷ್ಟು ಜನರನ್ನು ಪ್ರೆರೇಪಿಸಲಾಗಿದೆ. ಅಭಿವೃದ್ಧಿಗೆ ಮರ ತೆರವುಗೊಂಡಲ್ಲಿ ಅಲ್ಲಿ ಮತ್ತೆ ಗಿಡ ನೆಡುವ ಕೆಲಸ ಆಗಬೇಕೆಂದು ಹೇಳಿದರು.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ. ಮಾತನಾಡಿ, ಕೊರೋನಾ ವಾರಿಯರ್ಸ್ ಸಂದರ್ಭ ಆರೋಗ್ಯ ಇಲಾಖೆಯ ಅದರಲ್ಲೂ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ. ಅವರನ್ನು, ಅವರ ಸೇವೆಯನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಟಾರ್ಚ್ ಲೈಟ್ ನೀಡಲಾಗುತ್ತಿದೆ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಮಾತನಾಡಿ, 1 ವರ್ಷ ಡೆಂಗ್ಯೂ ಬಂದಿಲ್ಲ ಎಂದರೆ ಮುಂದಿನ 2 ವರ್ಷ ಡೆಂಗ್ಯೂ ಹಾವಳಿ ಇರುತ್ತದೆ ಎಂದೇ ಅರ್ಥ. ನಿಮಗೆ ತಿಳಿದಿರುವಂತೆ ಡೆಂಗ್ಯೂ ರೋಗಕ್ಕೆ ಮದ್ದಿಲ್ಲ. ಆದರೆ ರೋಗ ಬಾರದಂತೆ ತಡೆಯುವ ಕ್ರಮವನ್ನು ಅನುಸರಿಸಬಹುದು. ಪುತ್ತೂರಿನಲ್ಲಿ ಡಾ. ದೀಪಕ್ ರೈ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.
ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ನೀಡುವ ಮೂಲಕ ಉತ್ತಮ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಲಾಗಿದೆ. ಇದು ಅಭಿನಂದನೀಯ ಎಂದರು.
ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಮುತ್ತೂಟ್ ಫೈನಾನ್ಸಿನ ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೆಣೈ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ಹರಿಣಾಕ್ಷಿ ಪ್ರಾರ್ಥಿಸಿ. ಬ್ರಾಂಚ್ ಮ್ಯಾನೇಜರ್ ಪ್ರಸಾದ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ವಂದಿಸಿದರು. ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಲೇರಿಯಾ ಹಾಗೂ ಡೆಂಗ್ಯೂ ರೋಗಗಳ ನಿಯಂತ್ರಣದ ಬಗ್ಗೆ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಮಾಹಿತಿ ನೀಡಿದರು. ಮುತ್ತೂಟ್ ಫೈನಾನ್ಸ್ನ ಮಂಗಳೂರು ವಿಭಾಗದ ಮೇನೇಜರ್ (ಸಿಎಸ್ಆರ್) ಪ್ರಸಾದ್ ಕುಮಾರ್ ಅವರು ಫೈನಾನ್ಸ್ ಕುರಿತು ಮಾಹಿತಿ ನೀಡಿದರು.