ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ಚಾಲನೆ

0

ವಿಜ್ಞಾನದ ದುರುಪಯೋಗ ಸಲ್ಲದು-ಮಕ್ಕಳಲ್ಲಿ ಜಾಗೃತಿ ಹುಟ್ಟಿಸುವ ಕೆಲಸವಾಗಬೇಕು: ಕೇಮಾರು ಶ್ರೀ

ನಮ್ಮ ತಪ್ಪನ್ನು ತಿದ್ದಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು: ಕಶೆಕೋಡಿ ಸೂರ್ಯನಾರಾಯಣ ಭಟ್
ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೇಂದ್ರವಾಗಿದೆ: ರುಕ್ಮಯ ಪೂಜಾರಿ
ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಬದುಕಿನ ಕೈ ಕನ್ನಡಿಯಾಗಬೇಕು: ಲತೇಶ್ ಕುಂಬ್ಳೆ

ವಿಟ್ಲ: ಮುಗ್ದತೆಗೆ ದೇವರೊಲಿಯಲು ಸಾಧ್ಯ. ನಮ್ಮೊಳಗಿರುವ ಮುಗ್ದತೆಯನ್ನು ಉಳಿಸುವ ಕೆಲಸವಾಗಬೇಕು. ಆಧ್ಯಾತ್ಮಿಕಕ್ಕೆ ಗುಂಪು ಮುಖ್ಯವಲ್ಲ ಉತ್ತಮ ಜನರು ಮುಖ್ಯ. ಗುಂಪು ರಾಜಕೀಯಕ್ಕೆ ಮುಖ್ಯ. ವಿಜ್ಞಾನ ನಮಗೆ ದೇವರಿಗೆ ಸಮಾನಾದ ಶಕ್ತಿ ನೀಡಿದೆ. ಅದನ್ನು ನಾವಿಂದು ದುರುಪಯೊಗ ಪಡಿಸುತ್ತಿದ್ದೇವೆ. ವಿಜ್ಞಾನದ ದುರುಪಯೋಗ ಸಲ್ಲದು. ಮಕ್ಕಳಲ್ಲಿ ಜಾಗೃತಿ ಹುಟ್ಟಿಸುವ ಕೆಲಸವಾಗಬೇಕು. ಮಕ್ಕಳಿಗೆ ಬದುಕಿನ ಪಾಠ ಹೇಳುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಶ್ರೀ ಕ್ಷೇತ್ರ ಕೇಮಾರಿನ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿರವರು ಹೇಳಿದರು.

ಅವರು ಮೇ.23ರಂದು ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಲ್ಲೆಟ್ಟಿ ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನಿಧ್ಯ, ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಕಲಶೋತ್ಸವದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡುವ ಮನಸ್ಸು ನಮ್ಮಲ್ಲಿರಬೇಕು. ಮೊಬೈಲ್‌ನಿಂದ ಆಗುವ ತೊಂದರೆ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಕೆಲಸವಾಗಬೇಕು. ನಮಗೆ ಧಾರ್ಮಿಕ ಶಿಕ್ಷಣದ ಕೊರತೆಯಿದೆ. ನಮ್ಮ ಶ್ರದ್ಧಾ ಕೇಂದ್ರಗಳು ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರವಾಗಬೇಕು. ನಮ್ಮ ಹಿರಿಯರನ್ನು ಗೌರವಿಸುವ ಮನಸ್ಸು ನಮ್ಮದಾಗಬೇಕು. ತಂದೆ ತಾಯಿಯ ಋಣವನ್ನು ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಸನಾತನ ಸಂಸ್ಕೃತಿ ಒಪ್ಪುವ ಕೆಲಸಮಾಡಬೇಕು. ಸ್ವದೇಶಿ, ಸ್ವಧರ್ಮವನ್ನು ಬೆಳೆಸುವ ಕೆಲಸವಾಗಬೇಕು. ನಾವು ಬಡವರಿಗೆ ಸೇವೆ ಮಾಡಬೇಕು. ಬಡವರಿಗೆ ನೀಡುವ ಸೇವೆಯಿಂದ ದೇವನೊಲಿಯಲು ಸಾಧ್ಯ. ಕ್ಷೇತ್ರ ಇನ್ನಷ್ಟು ಬೆಳಗಲಿ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ರವರು ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ಗುರುತರ ಜವಾಬ್ದಾರಿಯನ್ನು ನಿಭಾಯಿಸುವ ಕೆಲಸವಾಗಬೇಕು. ನಮ್ಮ ಬದ್ದತೆ ಮತ್ತು ಜವಾಬ್ದಾರಿಯ ಬಗ್ಗೆ ನಮಗೆ ಅರಿವಿರಬೇಕು. ನಮ್ಮ ತನ, ಸಂಸ್ಕೃತಿ, ಸಂಸ್ಕಾರವನ್ನು ತಿಳಿಯುವ ಕೆಲಸವಾಗಬೇಕು. ನಮ್ಮತಪ್ಪನ್ನು ತಿದ್ದಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ನಮ್ಮನ್ನು ಬದುಕಿಸುವಂತದ್ದು ಧರ್ಮ. ಕೃತಜ್ಞತಾ ಭಾವ ನಮ್ಮಲ್ಲಿರಬೇಕು ಎಂದರು.

ಮಾಜಿ ಶಾಸಕರಾದ ರುಕ್ಮಯ ಪೂಜಾರಿರವರು ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಮಗಿರುವ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತಿದೆ. ಬ್ರಹ್ಮಕಲಶಕ್ಕಿರುವಷ್ಟೆ ಪ್ರಾಮುಖ್ಯತೆ ಧಾರ್ಮಿಕ ಕಾರ್ಯಕ್ರಮಗಳಿಗೂ ಇದೆ. ಹಿರಿಯರು ನಡೆದ ಹಾದಿಯಲ್ಲಿ ಮುಂದುವರಿಯುವುದು ಒಳಿತು. ದೈವದೇವರಿಗೆ ತುಳುನಾಡಿನಲ್ಲಿ ಬಹಳಷ್ಟು ಪ್ರಾಮುಖ್ಯತೆ ಇದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೇಂದ್ರವಾಗಿದೆ ಎಂದರು.

ಹಿಂದೂ ಸಮಾಜ ಒಡೆದು ಹೋದಲ್ಲಿ ನಮಗೆ ಭವಿಷ್ಯವಿಲ್ಲ. ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕು. ರಾಜಕೀಯ ಪಕ್ಷ ಯಾವುದೇ ಆಗಿದ್ದರೂ ನಮ್ಮ ಸಂಬಂಧ ಗಟ್ಟಿಯಾಗಿರಬೇಕು. ವಿಶ್ವಾಸದಿಂದ ಎಲ್ಲರೂ ಒಂದಾಗಿ ಮುಂದುವರೆಯಿರಿ ಆಗ ಯಶಸ್ಸು ಸಾಧ್ಯ ಎಂದವರು ಹೇಳಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಲತೇಶ್ ಕುಂಬ್ಳೆ ದೆಹಲಿರವರು ಮಾತನಾಡಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು.
ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಬದುಕಿನ ಕೈಗನ್ನಡಿಯಾಗಬೇಕು. ಮೇಲು ಕೀಳೆಂಬ ಭಾವ ತೊರೆದು ಎಲ್ಲರನ್ನೂ ಗೌರವಿಸುವ ಮನಸ್ಸು ನಮ್ಮದಾಗಬೇಕು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಮೋಹನ್ ಗೌಡ ಇಡ್ಯಡ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೂ ಧಾರ್ಮಿಕ ಮುಖಂಡ ಕೈಯೂರು ನಾರಾಯಣ ಭಟ್, ಬಿಸಿರೋಡ್ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಂ ಪೂಜಾರಿ, ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಉಮೇಶ್ ಕುಮಾರ್ ವೈ, ವಕೀಲರಾದ ಶೈಲಜಾ ರಾಜೇಶ್, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ, ಬರಿಮಾರು ಗ್ರಾಮ ಪಂಚಾಯತ್ ಸದಸ್ಯರಾದ ಹರಿಕೃಷ್ಣ ಬಿ.ಎಸ್., ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಗದೀಶ್ ಎಸ್. ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೀತಮ್ ಮೆಡಗಿನ ಬಲ್ಯ ಪ್ರಾರ್ಥಿಸಿದರು. ಶಾರದಾ ರತ್ನಾಕರ ಕಲ್ಲೆಟ್ಟಿರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಜ್ಞಾ ಎಂ.ಮುಳಿಬೈಲು ವಂದಿಸಿದರು. ವಿಶ್ಮಿತಾಮಧುಕರ ಕುರಮಜಲುಗುತ್ತು, ಸೌಮ್ಯ ಸದಾನಂದ ಕಾರ್ಯಕ್ರಮ ನಿರೂಪಿಸಿದರು.

ವೈದಿಕ ಕಾರ್ಯಕ್ರಮ : ದೈವಸ್ಥಾನದಲ್ಲಿ ಮೇ.23ರಂದು ಬೆಳಗ್ಗೆ ಶ್ರೀ ಗಣಪತಿ ಹೋಮ, ಬಿಂಬಶುದ್ಧಿ, ಅನುಜ್ಞಾಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ಜೀವೋದ್ವಾಸನೆ, ಜೀವ ಕಲಶ, ಶಯ್ಯಾಗಮನ, ಶಯನ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.

ಸಾಯಂಕಾಲ 6ರಿಂದ ಅಧಿವಾಸ ಹೋಮ, ಧ್ಯಾನಾಧಿವಾಸ, ಕಲಶ ಪೂಜೆ, ಕಲಶಾಧಿವಾಸದ ಬಳಿಕ ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಮಧ್ಯಾಹ್ನ ಗಂಟೆ 1.30ರಿಂದ ಕವಿರತ್ನ ಕಾಳಿದಾಸ ತುಳು ಯಕ್ಷಗಾನ ತಾಳಮದ್ದಳೆ ನಡೆಯಿತು. ರಾತ್ರಿ ಗಂಟೆ 7.30ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಅಭಿನಯಿಸುವ ಮಲ್ಲ ಸಂಗತಿಯೇ ಅತ್ತ್ ತುಳು ಹಾಸ್ಯಮಯ ನಾಟಕ ನಡೆಯಿತು.

ಇಂದು ದೈವಸ್ಥಾನದಲ್ಲಿ ಕಲಶೋತ್ಸವ-ನೇಮೋತ್ಸವ

ಮೇ.24ರಂದು ಬೆಳಗ್ಗೆ ಗಂಟೆ 7ರಿಂದ ಶ್ರೀ ಗಣಪತಿ ಹೋಮ, ಪ್ರತಿಷ್ಠಾ ಹೋಮ ಬೆಳಗ್ಗೆ ಗಂಟೆ 9.31ರ ಮಿಥುನ ಲಗ್ನದಲ್ಲಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮಹಾಪೂಜೆ, ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನ್ನಿಧ್ಯದಲ್ಲಿ ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ ಮಧ್ಯಾಹ್ನ ಮಹಾಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 6.30ರಿಂದ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ಪಲ್ಲಕಿ ಉತ್ಸವ ನಡೆದು ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನ್ನಿಧ್ಯಕ್ಕೆ ಭೇಟಿ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ನೇಮೋತ್ಸವ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ ಕನ್ನಡ ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ ಪುರಸ್ಕೃತ’ ಎಲ್.ಕೆ. ಧರಣ್ ಮಾಣಿ ಸಾರಥ್ಯದಲ್ಲಿ ಕುಹೂಕುಹೂ-೨೦೨೩ ಭಕ್ತಿ ಭಾವ ಲಹರಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಧರ್ಮಸಭೆ:
ಸಾಯಂಕಾಲ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿರವರು ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಚಾಲಕರದ ಡಾ| ಪ್ರಭಾಕರ ಭಟ್ ಕಲ್ಲಡ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ದೈವಸ್ಥಾನದಲ್ಲಿ ಸೇವೆ ಮಾಡುತ್ತಿರುವ ಎಲ್ಲ ವರ್ಗದವರಿಗೂ ಗೌರವ ಸಮರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here