ಸ್ಕಾರ್ಪಿಯೋ ಕಾರಿನಲ್ಲೇ 75 ರಾಷ್ಟ್ರ ಸುತ್ತಲು ಹೊರಟ ಪುತ್ತೂರಿನ ಯುವಕ!

0

ಸಮೃದ್ಧ ಕರ್ನಾಟಕವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶ
ಸರಿಸುಮಾರು 1 ಲಕ್ಷ ಕಿಲೋಮೀಟರ್‌ಗಳ ಪ್ರಯಾಣ, ಎರಡು ವರ್ಷಗಳ ಯೋಜನೆ

ಪುತ್ತೂರು: ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವುದು ಪ್ರಪಂಚವನ್ನು ತಿಳಿಯುವ ಬಗೆಗೆ ಹಿರಿಯರು ಹೇಳಿರುವ ನಾಣ್ಣುಡಿ. ಈ ಮಾತಿನಂತೆ ಪ್ರಪಂಚವನ್ನು ಸುತ್ತುವ ಜೊತೆಗೆ ಅಲ್ಲಿನ ವೈವಿಧ್ಯಮಯ ಸಂಸ್ಕೃತಿ, ಪರಂಪರೆ, ಭಾಷೆ, ಐತಿಹಾಸಿಕ ಪ್ರದೇಶಗಳು, ಪ್ರೇಕ್ಷಣೀಯ ಸ್ಥಳಗಳನ್ನು ತಿಳಿದುಕೊಳ್ಳಲು ಪ್ರವಾಸ ಮಾಡಿರುವ ಅದೆಷ್ಟೋ ಮಂದಿ ಇದ್ದಾರೆ. ಇದೀಗ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಆಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು, ಕರ್ನಾಟಕದ ಹಿರಿಮೆಯನ್ನು ಜಗತ್ತಿನ ಇತರ ದೇಶಗಳಿಗೆ ಸಾರಬೇಕೆನ್ನುವ ಉದ್ದೇಶವನ್ನು ಇಟ್ಟುಕೊಂಡು ಪುತ್ತೂರಿನ ಯುವಕನೊಬ್ಬ ಪ್ರಪಂಚ ಸುತ್ತಲು ಹೊರಟಿದ್ದಾರೆ. ಇದಕ್ಕಾಗಿಯೇ ವಿಶೇಷವಾಗಿ ಕಾರೊಂದನ್ನು ಸಿದ್ಧಪಡಿಸಿಕೊಂಡು ಏಕಾಂಗಿಯಾಗಿಯೇ ಪ್ರಪಂಚ ಪರ್ಯಟನೆ ಮಾಡಲು ಸಜ್ಜಾಗಿ ನಿಂತಿದ್ದಾರೆ.

ಅಂದಹಾಗೆ ಈ ಸಾಹಸಕ್ಕೆ ಮುಂದಾಗಿರುವ ಸಾಹಸಿ ಪುತ್ತೂರಿನ ದರ್ಬೆ ಬಳಿಯ ನಿವಾಸಿ ಸಿನಾನ್ ಎನ್ನುವ ಯುವಕ. ಇಲ್ಲಿನ ದಂಪತಿಯ ಪುತ್ರರಾಗಿರುವ ಇವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದು, ಯು.ಕೆ.ಯಲ್ಲಿ ಒಂದಷ್ಟು ಸಮಯ ಕೆಲಸ ಮಾಡಿ ಇದೀಗ ಅಲ್ಲೇ ಉದ್ಯಮಿಯಾಗಿ ಉದ್ಯಮ ನಡೆಸುತ್ತಿದ್ದಾರೆ. ಉದ್ಯಮಿಯಾಗಿರುವ ನಡುವೆಯೂ ಪ್ರಪಂಚ ಸುತ್ತಬೇಕೆಂಬ ಬಯಕೆಯಿಂದ ಇದೀಗ `ಕರ್ನಾಟಕ ಟು ಲಂಡನ್’ ಎನ್ನುವ ಟ್ಯಾಗ್‌ಲೈನ್‌ನಡಿ ಪ್ರವಾಸ ಆರಂಭಿಸಿದ್ದಾರೆ. ಎ.29ಕ್ಕೆ ಚಾಲನೆ ದೊರೆತಿದೆ. ಕರ್ನಾಟಕದ ಕೆಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದು ಸರಿಸುಮಾರು 4 ಸಾವಿರ ಕಿಲೋಮೀಟರ್‌ಗಳ ಪ್ರಯಾಣ ಸಾಗಿದೆ. ಇನ್ನು ಮುಂದಕ್ಕೆ ಮುಂಬೈ ಮೂಲಕ ದುಬೈಗೆ ತೆರಳಿ ಅಲ್ಲಿಂದ ಕಾರಿನ ಮೂಲಕ ಏಕಾಂಗಿ ಪ್ರಯಾಣ ಸಾಗಲಿದೆ. ಮುಂಬೈನಿಂದಲೇ ಕಾರಿನ ಮೂಲಕ ಸಾಗಬೇಕಿತ್ತಾದರೂ ಪಾಕಿಸ್ತಾನಕ್ಕೆ ಕಾರಿನ ಮೂಲಕ ಸಾಗಲು ಅನುಮತಿ ಸಿಗದ ಕಾರಣ ಫ್ಲೈಟ್‌ನಲ್ಲಿ ದುಬೈಗೆ ತೆರಳಿ ಅಲ್ಲಿಂದ ಮುಂದಕ್ಕೆ ಕಾರಿನ ಮೂಲಕ ಪ್ರಯಾಣ ಮುಂದುವರೆಸಲಿದ್ದಾರೆ ಸಿನಾನ್.

ಇನ್ನು ಇವರು ತನ್ನ ಪ್ರಯಾಣಕ್ಕೆ ಆಯ್ಕೆ ಮಾಡಿಕೊಂಡಿರುವುದು ಇಂಡಿಯನ್ ಮೇಡ್ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು. ಭಾರತದ ಆಟೋಮೊಬೈಲ್ ಕ್ಷೇತ್ರದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವುದು ಕೂಡ ಇವರ ಉದ್ದೇಶ. ಕರ್ನಾಟಕದ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರಿನ ಎರಡೂ ಬದಿಗಳಲ್ಲಿ ಸ್ಟಿಕ್ಕರಿಂಗ್ ಮಾಡಿಸಿದ್ದಾರೆ. ಬಾನೆಟ್ ಭಾಗದಲ್ಲಿ ಪ್ರಯಾಣದ ಪರಿಚಯ-ಉದ್ದೇಶವಿದ್ದರೆ, ಬಲಬದಿಯಲ್ಲಿ ಕರ್ನಾಟಕ ಧ್ವಜದ ಹಳದಿ-ಕೆಂಪು ಬಣ್ಣ, ಕಾಫಿ-ಟೀ ತೋಟ, ಗೋಲ್‌ಗುಂಬಝ್, ಹಂಪಿಯ ಕಲ್ಲಿನ ರಥ, ಜೋಗ ಜಲಪಾತದ ಚಿತ್ರಣವಿದೆ. ಹಿಂಭಾಗದಲ್ಲಿ ಅವರ ಯೂಟ್ಯೂಬ್ ಚಾನೆಲ್, ಇನ್‌ಸ್ಟಾಗ್ರಾಮ್ ಲೋಗೋ, ಐಡಿ ಜೊತೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಅಂಟಿಸಿರುವ ಅಪ್ಪು ಪುನೀತ್ ರಾಜ್‌ಕುಮಾರ್ ಅವರ ಸ್ಟಿಕರ್ ಇದೆ. ಕಾರಿನ ಬಲಭಾಗದಲ್ಲಿ ತಾಜ್ ಮಹಲ್, ಭಾರತದ ತ್ರಿವರ್ಣ, ಅಶೋಕ ಚಕ್ರ, ಸಾಂಬಾರ ಪದಾರ್ಥಗಳ ಚಿತ್ರಣವಿದೆ. ಮೇಲ್ಭಾಗದಲ್ಲಿ ಲಗೇಜ್ ಕ್ಯಾರಿಯರ್ ವ್ಯವಸ್ಥೆಯಿದೆ. ಒಳಭಾಗದಲ್ಲಿ ಮುಂಭಾಗದಲ್ಲಿ ಮಾತ್ರ ಸೀಟ್ ಇರಲಿದ್ದು, ಹಿಂಭಾಗದಲ್ಲಿ ಕಿಚನ್, ಟಾಯ್ಲೆಟ್ ಸೆಟಪ್, ಬೆಡ್ ವ್ಯವಸ್ಥೆಗಳನ್ನು ದುಬೈನಿಂದ ಮಾಡಿಸಿಕೊಳ್ಳಲಿದ್ದಾರೆ.

ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಹೀಗೆ ಒಟ್ಟು ಮೂರು ಖಂಡಗಳನ್ನು ದಾಟಿ ಪ್ರವಾಸ ಸಾಗಲಿದ್ದು, ಒಟ್ಟು 1 ಲಕ್ಷ ಕಿಲೋಮೀಟರ್‌ಗಳ ಪ್ರಯಾಣ ಇವರದ್ದು. ಇದಕ್ಕೆ ಸರಿಸುಮಾರು 2 ವರ್ಷಗಳ ಸಮಯವನ್ನು ಅಂದಾಜು ಮಾಡಿದ್ದಾರೆ. ಒಟ್ಟು 1 ಕೋಟಿ ರೂ ವೆಚ್ಚ ತಗಲುವ ಅಂದಾಜಿದೆ. 75 ರಾಷ್ಟ್ರಗಳಲ್ಲಿರುವ ಪ್ರವಾಸೀ ತಾಣಗಳು, ಪ್ರಮುಖ ಜಾಗಗಳಿಗೆ ಭೇಟಿ ನೀಡಲಿದ್ದಾರೆ. ಇವರ ಈ ಯೋಜನೆಗೆ ಮನೆಯವರು ಕೂಡ ತುಂಬು ಮನಸ್ಸಿನ ಸಹಕಾರ ನೀಡುತ್ತಿದ್ದಾರೆ. ಇದೀಗ ಎಲ್ಲೆಡೆ ಇವರ ವಿಚಾರ ತಲುಪಿದ್ದು ಜನತೆಯಿಂದ ಕೂಡ ಉತ್ತಮ ಸ್ಪಂದನೆ, ಪ್ರೋತ್ಸಾಹ ಸಿಗುತ್ತಿದೆ. ಇವರ ಪಯಣ ಯಶಸ್ವಿಯಾಗಿ ಸಾಗಲಿ, ಕರ್ನಾಟಕದ ಹೆಸರು ಜಗತ್ತಿನುದ್ದಕ್ಕೂ ಪಸರಿಸಲಿ ಎನ್ನುವುದು ಸುದ್ದಿಯ ಆಶಯ.

ಇವರ ಬಳಿ ಅಮೆರಿಕನ್ ವೀಸಾ ಇದ್ದು ಈ ಮೂಲಕ 50 ದೇಶಗಳನ್ನು ಸುಲಭವಾಗಿ ಸಂದರ್ಶಿಸಬಹುದು. ಯು.ಕೆ.ಯಲ್ಲಿ ಕೆಲಸ ಮಾಡ್ತಿರೋದ್ರಿಂದ ಯುಕೆ ವೀಸಾ ಇದ್ದು ಯುರೋಪ್ ಖಂಡಕ್ಕೆ ಇದು ಸಾಕಾಗುತ್ತದೆ. ಇಂಟರ್‌ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಇರೋದ್ರಿಂದ ವಾಹನ ಚಾಲನೆಗೂ ಯಾವುದೇ ಅಡ್ಡಿಯಿಲ್ಲ. ಆರೋಗ್ಯ ಮತ್ತು ವಾಹನದ ನಿರ್ವಹಣೆ ಇವೆರಡೇ ವಿಷಯಗಳು ನನ್ನ ಮುಂದಿರುವ ಸವಾಲು ಎನ್ನುವುದು ಸಿನಾನ್ ಅವರ ಮಾತು.

ಮೂಲತಃ ಆರ್ಕಿಟೆಕ್ಟ್ ಆಗಿರುವ ಸಿನಾನ್ ಅವರು ತನ್ನ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಪುತ್ತೂರಿನಲ್ಲೇ ಪಡೆದು ಬಳಿಕ ಬೆಂಗಳೂರಿನಲ್ಲಿ ಕೂಡ ಕಾಲೇಜು ವಿದ್ಯಾಭ್ಯಾಸ ಮುಂದುವರೆಸಿದ್ದರು. 2011ರಲ್ಲಿ ದುಬೈಗೆ ತೆರಳಿದ್ದರು. ಅಲ್ಲಿಂದ 2020 ರಲ್ಲಿ ಯು.ಕೆ.ಗೆ ತೆರಳಿದ್ದು, ಅಲ್ಲಿ ಕೆಲಸ ಮಾಡುತ್ತಾ ಇದೀಗ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಉದ್ಯಮದ ನಡುವೆ ತಮ್ಮ ಕನಸು ಈಡೇರಿಸಿಕೊಳ್ಳಲು ಈ ಸಾಹಸಕ್ಕೆ ಕೈಹಾಕಿದ್ದಾರೆ.

2018 ರಿಂದಲೇ ಪ್ರಪಂಚವನ್ನು ಸುತ್ತಬೇಕು ಎನ್ನುವ ಕನಸು ಕಾಡುತ್ತಿತ್ತು. ಕುಟುಂಬದವರೊಂದಿಗೆ ಸಾಗಬೇಕೆನ್ನುವ ಇಚ್ಛೆಯಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ವಿಮಾನದಲ್ಲಿ ಹೋದರೂ ದೇಶಗಳೊಳಗೆ ಸುತ್ತುವುದಿದ್ದರೆ ಕಾರು ಬೇಕೇ ಬೇಕು. ಹೀಗಾಗಿ ಕಾರಲ್ಲೇ ಯಾಕೆ ಯಾತ್ರೆ ಮಾಡಬಾರದು ಎಂದು ಯೋಚಿಸಿ ಈ ನಿರ್ಧಾರಕ್ಕೆ ಬಂದೆ. ಇದರ ಇನ್ನೊಂದು ಉದ್ದೇಶ ನೆರೆ ರಾಜ್ಯ ಕೇರಳದಲ್ಲಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರವಾಸೀ ತಾಣಗಳು ಕರ್ನಾಟಕದಲ್ಲಿವೆ, ಆದರೆ ಇವುಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ಕರ್ನಾಟಕದ ಪ್ರವಾಸೀ ಸ್ಥಳಗಳ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಭಾರತದಲ್ಲೇ ತಯಾರಾದ, ಕರ್ನಾಟಕ, ಪುತ್ತೂರು ರಿಜಿಸ್ಟ್ರೇಷನ್ ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಪ್ರಪಂಚದ 75 ರಾಷ್ಟ್ರಗಳನ್ನು ಸುತ್ತಲು ಮುಂದಾಗಿದ್ದೇನೆ. ಕರ್ನಾಟಕದ ಹೆಸರನ್ನು ಜಗತ್ತಿಗೆ ಪರಿಚಯಿಸುವಲ್ಲಿ ನನ್ನದೂ ಸಣ್ಣ ಕೊಡುಗೆ ಇರಲಿ ಎನ್ನುವುದು ನನ್ನ ಆಶಯ. ಸ್ಪಾನ್ಸರ್‍ಸ್ ಸಿಕ್ಕಿದರೆ ನನಗೆ ಬಹಳ ಅನುಕೂಲವಾಗುತ್ತದೆ ಎನ್ನುವುದು ಸಿನಾನ್‌ ಆಶಯ.

LEAVE A REPLY

Please enter your comment!
Please enter your name here