ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಕಲಶೋತ್ಸವ ಸಂಭ್ರಮ

0

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೂಲಕ ಧರ್ಮವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು: ಡಾ|ಪ್ರಭಾಕರ ಭಟ್ ಕಲ್ಲಡ್ಕ
ನಮ್ಮದೆನ್ನುವ ಭಾವ ನಮ್ಮಲ್ಲಿ ಬಂದಾಗ ಮಾಡಿದ ಕೆಲಸದಲ್ಲಿ ಯಶಸ್ಸು ಹೆಚ್ಚು: ಜಯಂತ ನಡುಬೈಲು
ನಾವು ಶಾಂತಿಯ ತೋಟವನ್ನು ನಿರ್ಮಾಣ ಮಾಡಬೇಕಾಗಿದೆ: ಮೋಹನ ಗೌಡ ಇಡ್ಯಡ್ಕ

ವಿಟ್ಲ: ಇದೊಂದು ಪವಿತ್ರ ವೇದಿಕೆಯಾಗಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಸುಖ ಶಾಂತಿ ನೆಮ್ಮದಿಗಾಗಿ ಇಂತಹ ಶ್ರದ್ಧಾ ಕೇಂದ್ರಗಳಲ್ಲಿ ಶ್ರದ್ದೆಯನ್ನು ವಿಜ್ರಂಭಿಸುವ ಕೆಲಸ ಉಭಯಜಿಲ್ಲೆಗಳಲ್ಲಿ ನಡೆಯುತ್ತಿದೆ. ಇದೊಂದು ಬಹಳ ಸಂತಸದ ವಿಚಾರವಾಗಿದೆ. ನಮ್ಮಲ್ಲಿ ಯಾವುದೇ ವಿಚಾರದ ಬಗ್ಗೆ ಶ್ರದ್ದೆ ಬಂದಾಗ ಅದರ ಸಾಕ್ಷಾತ್ಕಾರವಾಗುತ್ತದೆ. ಮಾನವೀಯ ಮೌಲ್ಯವನ್ನು ವೃದ್ಧಿಸುವ ಶಿಕ್ಷಣದ ಅಗತ್ಯವಿದೆ. ಶಿಕ್ಷಣದ ನೀತಿ ಬದಲಾಗಬೇಕು. ತ್ಯಾಗ ಭಾವ ನಮ್ಮಲ್ಲಿದ್ದಾಗ ಪುಣ್ಯ ಪ್ರಾಪ್ತಿ ಸಾದ್ಯ ಎಂದು ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಮೇ.24ರಂದು ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಲ್ಲೆಟ್ಟಿ ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನಿಧ್ಯ, ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಕಲಶೋತ್ಸವದ ಮೂರನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಭಯದಿಂದ ಭಕ್ತಿ ಬಂದರೆ ಉತ್ತಮ ಬೆಳವಣಿಗೆ. ಮನುಷ್ಯನಿಗೆ ಶಿಕ್ಷೆ ಅಗಲೇ ಬೇಕು ಅಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ನಮ್ಮ ಈಗೀನ ಕಾಲಘಟ್ಟದಲ್ಲಿ ಜ್ಞಾನದಾಸೋಹ ಬೇಕಾಗಿದೆ. ಭಕ್ತಿಯ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು. ರಾಷ್ಟ್ರಕ್ಕಾಗಿ, ಒಂದು ತತ್ವಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು ನಮಗೆ ಆದರ್ಶವಾಗಬೇಕು. ಶಿಕ್ಷಣದ ನೀತಿಯಲ್ಲಿ ನಮಗೆ ಬೇಡದಿರುವ ಅಂಶವನ್ನು ತೆಗದುಹಾಕಬೇಕು. ಬದುಕು ಮತ್ತು ಬೋಧನೆಯಿಂದ ಜಗತ್ತನ್ನು ಯಾರು ತಿದ್ದಲು ಸಮರ್ಥನಾಗುತ್ತನೋ ಆತನೇ ದಾರ್ಶನಿಕ. ಪರೋಪಕಾರಕ್ಕಿಂತ ಮಿಗಿಲಾದ ಪುಣ್ಯ ಬೇರೊಂದಿಲ್ಲ. ಪರಮಾತ್ಮನ ಸಮೀಪ್ಯವಾಗಲು ಧ್ಯಾನ ಮುಖ್ಯ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕರವರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ನಮ್ಮಲ್ಲಿ ಧರ್ಮ ಜಾಗೃತಿಯಾಗಬೇಕಿದೆ. ಹಿಂದೂ ಧರ್ಮದ ಶಕ್ತಿಯ ಕೇಂದ್ರ ದೇವಸ್ಥಾನ, ದೈವಸ್ಥಾನ. ಅದರಲ್ಲಿ ಎರಡು ಮಾತಿಲ್ಲ.ಅದರ ಮುಖಾಂತರ ಧರ್ಮವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ನಮ್ಮ ನಂಬಿಕೆಯನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕು. ದೇವರ ಶಕ್ತಿಕೇಂದ್ರಗಳು ಬೆಳಗುವುದರೊಂದಿಗೆ ಉಳಿಯಬೇಕು. ನಮ್ಮ ಮನೆಗಳಲ್ಲಿ ಧರ್ಮ ಜಗೃತಿ ಆಗಬೇಕಿದೆ. ನಮ್ಮ ಮನೆಗಳಲ್ಲಿ ಧರ್ಮದ ಸಂಸ್ಕೃತಿಯ ಜೀವನ ಮೌಲ್ಯದ ಕಾರ್ಯಗಳು ನಡೆಯಬೇಕು. ಯುವಕ ಯುವತಿಯರು ಧಾರ್ಮಿಕತೆಯತ್ತ ಒಲವು ತೋರಬೇಕಿದೆ. ನಮ್ಮ ಮೂಲ ಚಿಂತನೆಯನ್ನು ತಿಳಿಸುವ ಕೆಲಸವಾಗಬೇಕು. ಹಿಂದುಗಳು ಉಳಿದರೆ ದೇಶ ಉಳಿಯುವುದು. ಹಿಂದೂ ಧರ್ಮ ಉಳಿದರೆ ಜಗತ್ತು ಉಳಿಯುತ್ತದೆ ಎಂದರು.

ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕರಾದ ಜಯಂತ ನಡುಬೈಲುರವರು ಮಾತನಾಡಿ ನಮ್ಮ ನಂಬಿಕೆ ನಮ್ಮನ್ನು ಕಾಪಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅಜೀರ್ಣಾವಸ್ಥೆಯಲ್ಲಿರುವ ದೈವ ದೇವರ ಆಲಯಗಳು ತಲೆ ಎತ್ತುತ್ತಿದೆ. ನಮ್ಮದೆನ್ನುವ ಭಾವ ನಮ್ಮಲ್ಲಿ ಬಂದಾಗ ಮಾಡಿದ ಕೆಲಸದಲ್ಲಿ ಯಶಸ್ಸು ಹೆಚ್ಚು. ಧಾರ್ಮಿಕ ಶೃದ್ಧಾ ಕೇಂದ್ರಗಳಲ್ಲಿ ಜಾತಿ ರಾಜಕೀಯ ತೊರೆದು ಒಗ್ಗಟ್ಟು ಮೂಡಬೇಕು. ನಮ್ಮ ಗ್ರಾಮದ ಶ್ರದ್ಧಾ ಕೇಂದ್ರಗಳು ಬೆಳೆದಾಗ ನಮಗೆ ಶ್ರೇಯಸ್ಸು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಮೋಹನ್ ಗೌಡ ಇಡ್ಯಡ್ಕರವರು ಮಾತನಾಡಿ ಎಲ್ಲರನ್ನು ಒಟ್ಟಾಗಿ ಸೇರಿಸಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ನಮ್ಮಿಂದ ಇನ್ನಷ್ಟು ಉತ್ತಮ ಕಾರ್ಯ ಮಾಡುವ ಶಕ್ತಿ ದೇವರು ಕೊಡಲಿ. ಇದೊಂದು ನಮಗೆ ಸಿಕ್ಕಿದ ಉತ್ತಮ ವೇದಿಕೆಯಾಗಿದೆ. ನಾವು ಶಾಂತಿಯ ತೋಟವನ್ನು ನಿರ್ಮಾಣ ಮಾಡಬೇಕಾಗಿದೆ. ಉತ್ತಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮಮೇಲಿದೆ ಎಂದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ವೇ|ಮೂ| ಗಿರಿಪ್ರಕಾಶ್ ತಂತ್ರಿ ಪೊಳಲಿ, ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಶ್ರೀಕ್ಷೇತ್ರ ಗೆಜ್ಜೆಗಿರಿಯ ಉಪಾಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ಪುರೋಹಿತರಾದ ಕೇಶವ ಶಾಂತಿ, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕುಮಾರ್ ಮರಿಕೆ, ಮೆಲ್ಕಾರ್ ಬಿರ್ವ ಸೆಂಟರ್ ನ ಮಾಲಕ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಬರಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಲೇಖಕಿ ಲಕ್ಷ್ಮೀ ಜಿ. ಭಟ್, ಪಿ.ಎಸ್.ಮೋಹನ್ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಲತೇಶ್ ಕುಂಬ್ಳೆ ದೆಹಲಿ, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಗದೀಶ್ ಎಸ್. ಪೂಜಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೈವಸ್ಥಾನದಲ್ಲಿ ಸೇವೆ ಮಾಡುತ್ತಿರುವ ಎಲ್ಲ ವರ್ಗದವರಿಗೂ ಗೌರವ ಸಮರ್ಪಣೆ ನಡೆಯಿತು. ಪ್ರೀತಮ್ ಮೇಗಿನ ಬಲ್ಯ ಪ್ರಾರ್ಥಿಸಿದರು. ಮೋಹನ್ ದಾಸ್ ಕುರಮಜಲುಗುತ್ತುರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶ್ಮಿತಾಮಧುಕರ ಕುರಮಜಲುಗುತ್ತುರವರು ವಂದಿಸಿದರು. ದೀಪಕ್ ಸುವರ್ಣ ಪೆರಾಜೆ, ರಾಜೇಶ್ ಪೂಜಾರಿ ಬಲ್ಯ ಕಾರ್ಯಕ್ರಮ ನಿರೂಪಿಸಿದರು.

ದೈವಸ್ಥಾನದಲ್ಲಿ ಕಲಶೋತ್ಸವ – ನೇಮೋತ್ಸವ

ಮೇ.24ರಂದು ಬೆಳಗ್ಗೆ ಗಂಟೆ 7ರಿಂದ ಶ್ರೀ ಗಣಪತಿ ಹೋಮ, ಪ್ರತಿಷ್ಠಾ ಹೋಮ ನಡೆಯಿತು.
ಬಳಿಕ 9.31ರ ಮಿಥುನ ಲಗ್ನದಲ್ಲಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮಹಾಪೂಜೆ, ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನ್ನಿಧ್ಯದಲ್ಲಿ ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು.
ಸಂಜೆ ಗಂಟೆ 6.30ರಿಂದ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ಪಲ್ಲಕಿ ಉತ್ಸವ ನಡೆದು ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನ್ನಿಧ್ಯಕ್ಕೆ ಭೇಟಿ ನಡೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ನೇಮೋತ್ಸವ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಮಧ್ಯಾಹ್ನ ಕನ್ನಡ ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ ಪುರಸ್ಕೃತ’ ಶ್ರೀ ಎಲ್.ಕೆ. ಧರಣ್ ಮಾಣಿ ಸಾರಥ್ಯದಲ್ಲಿ ಕುಹೂಕುಹೂ-2023 ಭಕ್ತಿ ಭಾವ ಲಹರಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ಇಂದು ದೈವಸ್ಥಾನದಲ್ಲಿ ಶುದ್ಧ ಕಲಶ ಹೋಮ

ಮೇ.25ರಂದು ಸಾಯಂಕಾಲ 5 ರಿಂದ ಶುದ್ಧ ಕಲಶ ಹೋಮ, ತಂಬಿಲ ಸೇವೆ ಪತ್ತನಾಜೆ ಪರ್ವ ಸೇವೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಯಂಕಾಲ ಕಲ್ಲಡ್ಕ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ವಿನೂತನ ಶೈಲಿಯ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

ಧರ್ಮಸಭೆ :
ಸಾಯಂಕಾಲ ನಡೆಯುವ ಧರ್ಮಸಭೆಯನ್ನು ವಕೀಲರಾದ ಸತೀಶ್ ಭಟ್ ಶಿವಗಿರಿ, ಬಿ.ಸಿ.ರೋಡುರವರು ದೀಪಬೆಳಗಿಸಿ ಉದ್ಘಾಟಿಸಲಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಮನೋಹರ್ ಎಂ. ಕುರಮಜಲುಗುತ್ತುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here