ಅಶೋಕ ಜನ- ಮನ ಕಾರ್ಯಕ್ರಮ :ಕಜೆಕ್ಕಾರಿನಲ್ಲಿ ಆಮಂತ್ರಣ ಪತ್ರ ವಿತರಣೆ

0

ಉಪ್ಪಿನಂಗಡಿ: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ದೀಪಾವಳಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವ ವಸ್ತ್ರ ವಿತರಣೆ ಕಾರ್ಯಕ್ರಮ ‘ಅಶೋಕ ಜನ- ಮನ’ ಕಾರ್ಯಕ್ರಮವು ಈ ಬಾರಿ ಅ.20ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯಕ್ರಮ ಕಜೆಕ್ಕಾರ್‌ನಲ್ಲಿ ನಡೆಯಿತು.


ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರ ವಿತರಿಸಿ ಮಾತನಾಡಿದ ಟ್ರಸ್ಟ್‌ನ ಕೃಷ್ಣಪ್ರಸಾದ್ ಬೊಳ್ಳಾವು, ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದ್ದು, ಈ ಬಾರಿ ಅ.20ರಂದು ಪುತ್ತೂರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಒಂದು ಲಕ್ಷ ಜನರನ್ನು ಸೇರಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದು ಧರ್ಮಾತೀತ, ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಸಾಮೂಹಿಕ ಸಹಭೋಜನದೊಂದಿಗೆ ಮಕ್ಕಳಿಗೆ, ಮಾತೆಯರಿಗೆ, ಪುರುಷರಿಗೆ ದೀಪಾವಳಿಯ ಉಡುಗೊರೆಯಾಗಿ ಈ ಬಾರಿ ಒಬ್ಬರಿಗೆ ಸ್ಟೀಲ್ ತಟ್ಟೆ, ಲೋಟ ಹಾಗೂ ಪಿಂಗಾಣಿ, ಚಮಚ ಹಾಗೂ ಬಾತ್ ಟವೆಲ್ ಅನ್ನು ಹಂಚಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸೇರಿದಂತೆ ರಾಜಕೀಯ ನಾಯಕರು ಭಾಗವಹಿಸಲಿದ್ದು, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಗೂಡು ದೀಪ ಸ್ಪರ್ಧೆಯೂ ನಡೆಯಲಿದೆ. ಆದ್ದರಿಂದ ಎಲ್ಲರೂ ನಮ್ಮ ಮನೆಯ ಕಾರ್ಯಕ್ರಮವೆಂದೇ ತಿಳಿದು ಇದರಲ್ಲಿ ಭಾಗವಹಿಸಬೇಕು. ನಿಮ್ಮ ಹತ್ತಿರದವರನ್ನೂ ಕರೆದುಕೊಂಡು ಬರಬೇಕು. ಬಡವರ ಸೇವೆಗಾಗಿಯೇ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಈ ಟ್ರಸ್ಟ್ ನಿರ್ಮಾಣವಾಗಿದ್ದು, ಟ್ರಸ್ಟ್ ವತಿಯಿಂದ ಈಗಾಗಲೇ ಹಲವು ಜನಪರ ಕೆಲಸಗಳನ್ನು ಮಾಡಲಾಗಿದೆ ಎಂದರು.


ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ ಮಾತನಾಡಿ, ಇದು ಪಕ್ಷ, ರಾಜಕೀಯ, ಧರ್ಮ ರಹಿತವಾಗಿ ನಡೆಯುವ ಜನಸೇವೆಯ ಕಾರ್ಯಕ್ರಮ. ದೀಪಾವಳಿಯ ಉಡುಗೊರೆಯೊಂದಿಗೆ ಸಹಭೋಜನವೂ ನಡೆಯಲಿದೆ. ಎಲ್ಲರೂ ಇದರಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಸೋಮನಾಥ ಮಾತನಾಡಿ, ಅಶೋಕ್ ಕುಮಾರ್ ರೈಯವರು ಬಡವರ ಬಂಧುವಾಗಿದ್ದು, ಶಾಸಕರಾಗುವ ಮೊದಲೇ ಟ್ರಸ್ಟ್ ವತಿಯಿಂದ ತನ್ನ ಸ್ವಂತ ಖರ್ಚಿನಲ್ಲಿ ಸಮಾಜ ಸೇವೆ ಮಾಡಿದವರು. ಅವರ ಪ್ರೀತಿಯ ಅಹ್ವಾನಕ್ಕೆ ಓಗೊಟ್ಟು ನಾವೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದರು.
ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷ ರವಿ ಮಾತನಾಡಿ, ಕಜೆಕ್ಕಾರ್‌ನ 18 ಮನೆಗಳಿಗೆ ಹಕ್ಕು ಪತ್ರವಿರಲಿಲ್ಲ. ಇದರಿಂದ ಯಾವುದೇ ಸರಕಾರಿ ಸೌಲಭ್ಯಗಳು ನಮಗೆ ಸಿಗುತ್ತಿರಲಿಲ್ಲ. ಇದನ್ನು ಮನಗಂಡ ಅಶೋಕ್ ಕುಮಾರ್ ರೈಯವರು ಶಾಸಕರಾಗುವ ಮೊದಲೇ ಅವರ ಸ್ವಂತ ಖರ್ಚಿನಲ್ಲಿ ಇಲ್ಲಿನ 18 ಮನೆಗಳಿಗೆ ಹಕ್ಕು ಪತ್ರವನ್ನು ಒದಗಿಸಿಕೊಟ್ಟಿದ್ದಾರೆ. ಅವರ ಉಪಕಾರ ಋಣವನ್ನು ನಾವ್ಯಾರು ಮರೆಯಲು ಸಾಧ್ಯವಿಲ್ಲ ಎಂದರು.


ರಾಜೇಶ, ಸತೀಶ, ಸಂದೇಶ್, ಮಹೇಶ್, ಶೀನಪ್ಪ, ಅಪ್ಪಿ, ತಿಲಕ, ರವಿಕುಮಾರ್, ಮೀನಾಕ್ಷಿ, ಕಮಲ, ನಾಗಮ್ಮ, ಸೇಸಮ್ಮ, ಲೊಕೇಶ, ಚೆನ್ನಪ್ಪ, ಸಂತೋಷ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯ ಮಹಾಲಿಂಗ ಕಜೆಕ್ಕಾರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here