ಪುತ್ತೂರು ಶಾಸಕರ ವಿರುದ್ಧ ಫೇಸ್‌ಬುಕ್ ನಲ್ಲಿ ಆಕ್ಷೇಪಾರ್ಹ ಬರಹ-ಡಿಲೀಟ್‌ ಮಾಡಲು ಒತ್ತಾಯಿಸಿದ ಅಭಿಮಾನಿ ಬಳಗ-ಪ್ರಕರಣ ರಾಜಿಯಲ್ಲಿ ಇತ್ಯರ್ಥ

0

ಪುತ್ತೂರು: ಸುಳ್ಯದ ಜಯನಗರ ನಿವಾಸಿ ಪ್ರಮೀತ್ ಎಂಬ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕುರಿತು ಕೀಳು ಮಟ್ಟದ ಮತ್ತು‌ ನಿಂದನಾತ್ಮಕ ಬರಹವನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ನಿನ್ನೆ ರಾತ್ರಿ ಪುತ್ತೂರಿನಿಂದ ಶಾಸಕರ ಅಭಿಮಾನಿ ಬಳಗದ ಸುಮಾರು 15ಕ್ಕೂ ಹೆಚ್ಚು ಯುವಕರ ತಂಡ ಜಯನಗರದ ಪ್ರಮೀತ್ ರವರ ಮನೆಗೆ ಬಂದು ಫೇಸ್ಬುಕ್ಕಿನಲ್ಲಿ ಬರೆದ ಪೋಸ್ಟನ್ನು ಡಿಲೀಟ್ ಮಾಡುವಂತೆ ಮತ್ತು ಶಾಸಕರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ.

ವಿಷಯ ತಿಳಿದ ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಎರಡು ತಂಡದವರನ್ನು ಸುಳ್ಯ ಠಾಣೆಗೆ ಕರೆದೊಯ್ದು, ಬಳಿಕ ಪುತ್ತೂರು ಡಿ ವೈ ಎಸ್ ಪಿ ಯವರ ಆಗಮಿಸಿ ಇತ್ತಂಡಗಳ ವಿಚಾರಣೆ ನಡೆಸಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ.

ಪ್ರಮೀತ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶಾಸಕರ ವಿರುದ್ಧ ಬರೆದ ನೋಡಿದ ಶಾಸಕರ ಅಭಿಮಾನಿ ಬಳಗದ ಯುವಕರು, ಪ್ರಮಿತ್ ಅವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಅದನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದರೆನ್ನಲಾಗಿದೆ.


ಈ ಸಂದರ್ಭದಲ್ಲಿ ಪ್ರಮೀತ್ ನಾನು ಅದನ್ನು ಡಿಲೀಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಪರಸ್ಪರ ವಾಗ್ವಾದ ನಡೆದು ಪ್ರಮಿತ್ ಆ ಯುವಕರನ್ನು ಧೈರ್ಯವಿದ್ದರೆ ಸುಳ್ಯದ ಜಯನಗರಕ್ಕೆ ಬರಲು ಹೇಳಿದ್ದಾರೆ,ಆ ಬಳಿಕ ಪುತ್ತೂರಿನ ಸುಮಾರು 15ಕ್ಕೂ ಹೆಚ್ಚು ಮಂದಿ ಇದ್ದ ತಂಡವೊಂದು ಜಯನಗರದ ಪ್ರಮೀತ್ ರವರ ಮನೆಯನ್ನು ಹುಡುಕಿ ಜಯನಗರಕ್ಕೆ ಬಂದರೆ. ನಮ್ಮ ನಾಯಕರಾದ ಅಶೋಕ್ ರೈ ಬಳಿ ಕ್ಷಮೆ ಯಾಚಿಸಬೇಕು ಮತ್ತು ಫೇಸ್ಬುಕ್ಕಿನಲ್ಲಿ ಹಾಕಿರುವಂತಹ ಪೋಸ್ಟರ್ ಡಿಲೀಟ್ ಮಾಡಬೇಕು ಎಂದು ಯುವಕರು ಹೇಳಿದಾಗ, ಪ್ರಮೀತ್ ಅದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಈ ಸಂದರ್ಭ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ ಸ್ಥಳೀಯ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸತೊಡಗಿದರು.


ಮಾಹಿತಿ ತಿಳಿದ ಸುಳ್ಯ ಪೊಲೀಸ್ ಠಾಣಾ ಅಪರಾಧ ವಿಭಾಗದ ಉಪನಿರೀಕ್ಷಕ ಶಾಹಿದ್ ಅಫ್ರಿದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಜನರ ಗುಂಪನ್ನು ಚದುರಿಸಿ ಪುತ್ತೂರಿನಿಂದ ಬಂದಿದ್ದ ಯುವಕರನ್ನು ಮತ್ತು ಪ್ರಮೀತ್ ಅವರನ್ನು ಸುಳ್ಯ ಠಾಣೆಗೆ ಕರೆದೊಯ್ದಿದ್ದಾರೆ.


ಘಟನೆಯ ವಿವರ ಪಡೆದ ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ಗಾನಾ ಪಿ ಕುಮಾರ್ ಕೂಡಲೇ ಸುಳ್ಯ ಠಾಣೆಗೆ ಬಂದು ಎರಡು ತಂಡದ ವಿಚಾರಣೆ ನಡೆಸಿ ಮಾತುಕತೆ ಮಾಡಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಿದ್ದಾರೆ.ಇದಾದ ಬಳಿಕ ಪ್ರಮಿತ್ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿರುವುದಾಗಿ ತಿಳಿದುಬಂದಿದೆ. ಮಾತುಕತೆಯ ವೇಳೆ ಸುಳ್ಯದ ಕೆಲವು ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here