ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳನ್ನು ಜೋಡಿಸುವ ಹಲವು ವರ್ಷಗಳ ಬೇಡಿಕೆಯಾಗಿರುವ ಚೆನ್ನಾವರ-ಕುಂಡಡ್ಕ ಸೇತುವೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕುಂಡಡ್ಕದಲ್ಲಿ ಗೌರಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಏಕೈಕ ಸೇತುವೆಯೊಂದು ತೀರಾ ಶಿಥಿಲಾವಸ್ಥೆಗೆ ತಲುಪಿ, ಕುಸಿಯುವ ಹಂತದಲ್ಲಿತ್ತು. ಇದರಿಂದಾಗಿ ಈ ಭಾಗದ ಜನರು ಸಂಪರ್ಕ ಕಡಿತದ ಭೀತಿಯಲ್ಲಿಯೇ ದಿನಕಳೆಯುತ್ತಿದ್ದರು. ಈ ಸೇತುವೆಯ ಪಿಲ್ಲರ್ ಶಿಥಿಲವಾಗಿದ್ದಲ್ಲದೇ, ಅಗಲ ಕಿರಿದಾದ ಈ ಸೇತುವೆಯಲ್ಲಿ ಲಘು ವಾಹನಗಳು ಮಾತ್ರ ಹೋಗುವ ಹಾಗೆ ಇತ್ತು. ಈ ಸೇತುವೆಯು ಸುಳ್ಯ ವಿಧಾನಸಭೆ ಕ್ಷೇತ್ರಕ್ಕೊಳಪಟ್ಟಿದೆ. ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಹೋಗಲು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ತೆರಳಬೇಕಾದ ಸಂದಿಗ್ಧತೆಯಿತ್ತು. ಅಲ್ಲದೇ ಮಳೆಗಾಲದಲ್ಲಿ ಸಂಪರ್ಕ ಕಡಿತವಾಗುತ್ತಿತ್ತು. ಇಲ್ಲಿ ನೂತನ ಸೇತುವೆ ನಿರ್ಮಿಸುವಂತೆ ಈ ಭಾಗದ ಜನತೆ ಹಾಗೂ ಸಂಘ ಸಂಸ್ಥೆಗಳು ಕಳೆದ 15 ವರ್ಷಗಳಿಂದ ಜನಪ್ರತಿನಿಧಿಗಳಿಗೆ ,ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದರೂ, ಸೇತುವೆ ನಿರ್ಮಾಣದ ಭರವಸೆ ಈಡೇರುವ ಹಂತಕ್ಕೆ ಬಂದದ್ದು ಮಾತ್ರ 2022ರಲ್ಲಿ. 2023 ಫೆಬ್ರವರಿಯಲ್ಲಿ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಚೆನ್ನಾವರ-ಕುಂಡಡ್ಕ ಸೇತುವೆ ನಿರ್ಮಾಣಕ್ಕೆ ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಹಿಂದಿನ ಬಿಜೆಪಿ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಸಿ.ಪಾಟೀಲ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಸಚಿವ ಅಂಗಾರ ಅವರೂ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಇವರ ಕೋರಿಕೆಯಂತೆ ರಸ್ತೆ ಹಾಗೂ ಸೇತುವೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ಮೂಲಕ 4.5 ಕೋಟಿ ಅನುದಾನ ಬಿಡುಗಡೆಗೊಂಡಿತ್ತು. ತಾರಿಪಡ್ಪುವಿನಿಂದ ಚೆನ್ನಾವರವರೆಗೆ ರಸ್ತೆ ಅಭಿವೃದ್ಧಿಯಾಗಿದೆ. ಚೆನ್ನಾವರ-ಕುಂಡಡ್ಕ ಸಂಪರ್ಕ ಸೇತುವೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಯಾರಿಗೆ ಪ್ರಯೋಜನ
ಈ ಸೇತುವೆ ನಿರ್ಮಾಣದಿಂದ ಚೆನ್ನಾವರ ಕಿ.ಪ್ರಾ. ಶಾಲೆ, ಮುಕ್ಕೂರು ಹಿ.ಪ್ರಾ. ಶಾಲೆ, ಸವಣೂರು, ಪೆರುವಾಜೆ, ಬೆಳಂದೂರು ಕಾಲೇಜುಗಳಿಗೆ ಹೋಗುವವರಿಗೆ ಅನುಕೂಲವಾಗಿದೆ.ಅಲ್ಲದೆ ಪಾಲ್ತಾಡಿನಿಂದ ಸವಣೂರು ,ಪೆರುವಾಜೆ ಹೋಗುವವರಿಗೂ ಅನುಕೂಲವಾಗಿದೆ.
ತಾರಿಪಡ್ಪು-ಚೆನ್ನಾವರ ರಸ್ತೆ ಅಭಿವೃದ್ದಿ ಹಾಗೂ ಚೆನ್ನಾವರ-ಕುಂಡಡ್ಕ ಸೇತುವೆ ನಿರ್ಮಾಣ ಕುರಿತ 15 ವರ್ಷಗಳ ಬೇಡಿಕೆ ಈಡೇರಿದೆ. ಅನುದಾನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಂಸದ ನಳಿನ್‌ಕುಮಾರ್‌ಕಟೀಲ್‌ಅವರಿಗೆ ಕೃತಜ್ಞತೆಗಳು
-ಪುಟ್ಟಣ್ಣ ನಾಯ್ಕ ,ಅಧ್ಯಕ್ಷರು, ಅಭ್ಯುದಯ ಯುವಕ ಮಂಡಲ ಚೆನ್ನಾವರ