ಪುತ್ತೂರು: ರಾ. ಹೆದ್ದಾರಿ 75 ಉಪ್ಪಿನಂಗಡಿಯಲ್ಲಿ ಹೈವೇ ಕಾಮಗಾರಿ ನಡೆಯುತ್ತಿದ್ದು ರಸ್ತೆ ಅಗಲೀಕರಣಕ್ಕೆ ರಸ್ತೆಯ ಬದಿಗಳಲ್ಲಿ ಮಣ್ಣು ಹಾಕುವ ಅಥವಾ ಮಣ್ಣು ತೆಗೆಯುವ ಕಾಮಗಾರಿ ನಡೆದಿದ್ದು ತಡೆಗೋಡೆ ನಿರ್ಮಾಣವಾಗದ ಕಾರಣ ಮಳೆ ನೀರು ರಸ್ತೆ ಬದಿಯ ಮನೆಯೊಳಗೆ ಬರುತ್ತಿದೆ ತಕ್ಷಣವೇ ವ್ಯವಸ್ಥೆ ಮಾಡಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೈವೇ ಪ್ರಾಧಿಕಾರಕ್ಕೆ ಶಾಸಕರು ದೂರವಾಣಿ ಮೂಲಕ ಸೂಚನೆಯನ್ನು ನೀಡಿದ್ದಾರೆ.
ಹೈವೇ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಮಳೆ ಬಂದಾಗ ನೀರು ಹರಿದು ಹೋಗಲು ಸೂಕ್ತಚರಂಡಿಯ ವ್ಯವಸ್ಥೆಯನ್ನು ಮಾಡದ ಕಾರಣ ಮಳೆಯ ನೀರು ರಸ್ತೆ ಹಾಗೂ ಮನೆಗಳಿಗೆ, ಹೈವೇ ಬದಿಯ ಅಂಗಡಿಗಳಿಗೆ ನುಗ್ಗುತ್ತಿದೆ. ಕಾಮಗಾರಿ ಮಾಡುವಾಗ ಜನರಿಗೆ ತೊಂದರೆ ಕೊಡಬೇಡಿ. ಮನೆ , ಅಂಗಡಿ , ಕಟ್ಟಡಗಳು ಅಥವಾ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಮಳೆ ನೀರು ನಿಲ್ಲದ ಸೂಕ್ತ ವ್ಯವಸ್ಥೆ ಮಾಡಬೇಕು. ವಾರದೊಳಗೆ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಶಾಸಕರು ಸೂಚನೆಯನ್ನು ನೀಡಿದ್ದಾರೆ.