ಪುತ್ತೂರು: ಬೊಳುವಾರು ಸ.ಮಾ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯಗುರು ನಿವೇದಿತಾ ಕೆ ಅವರು ಮೇ 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಸುಮಾರು 27 ವರ್ಷ ಸರಕಾರಿ ಕರ್ತವ್ಯ ನಿರ್ವಹಿಸಿದ ಅವರು ಬೊಳುವಾರು ಶಾಲೆಯಲ್ಲಿ ಆರಂಭದಲ್ಲಿ ಗೌರವ ಶಿಕ್ಷಕಿಯಾಗಿ ಸೇರ್ಪಡೆಗೊಂಡು ಅದೇ ಶಾಲೆಯಲ್ಲಿ ಈಗ ಪ್ರಭಾರ ಮುಖ್ಯಗುರು ಆಗಿ ನಿವೃತ್ತಿ ಹೊಂದುತ್ತಿರುವುದು ವಿಶೇಷವಾಗಿದೆ.
ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಡೆಕಾನದ ಸರ್ವೋತ್ತಮ ಪ್ರಭು ಮತ್ತು ಇಂದಿರಾ ಪ್ರಭು ಅವರ ಪುತ್ರಿಯಾಗಿರುವ ನಿವೇದಿತಾ ಕೆ., ಅವರು ಹಾರಾಡಿ ಶಾಲೆಯಲ್ಲಿ ಪ್ರಾಥಮಿಕ, ಕೊಂಬೆಟ್ಟು ಸರಕಾರಿ ಪ.ಪೂ.ಕಾಲೇಜಿನಲ್ಲಿ ಪ್ರೌಢಶಿಕ್ಷಣ ಹಾಗೂ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಮಂಗಳೂರಿನಲ್ಲಿ ಟಿ.ಸಿ.ಎಚ್ ವ್ಯಾಸಂಗ ಮಾಡಿದ್ದರು. ಬಳಿಕ 1987ರಿಂದ 6 ವರ್ಷಗಳ ಕಾಲ ಬೊಳುವಾರು ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ, 2 ವರ್ಷ ಮಂಗಳೂರಿನ ಗಾರ್ಡಿಯನ್ ಏಂಜಲ್ ಕಾನ್ವೆಂಟ್‌ನಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ 1996ರಲ್ಲಿ ಕೊಳ್ತಿಗೆ ಗ್ರಾಮದ ಸಬ್ಬಡ್ಕ ಸರಕಾರಿ ಶಾಲೆಯಲ್ಲಿ ಸರಕಾರಿ ಕರ್ತವ್ಯಕ್ಕೆ ಸೇರ್ಪಡೆಯಾದರು. ಬಳಿಕ ಅವರು ಕುಂಬ್ರ ಶಾಲೆಯಲ್ಲಿ 6 ವರ್ಷ ಸೇವೆ ಸಲ್ಲಿಸಿ 2010ರಲ್ಲಿ ಬೊಳುವಾರು ಶಾಲೆಗೆ ವರ್ಗಾವಣೆಗೊಂಡು ಬಂದಿದ್ದರು. ಇಲ್ಲಿ ಸುಮಾರು 13 ವರ್ಷದಿಂದ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು 2015ರಿಂದ ಪ್ರಭಾರ ಮುಖ್ಯಗುರುಗಳಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಮೇ 31ಕ್ಕೆ ಸೇವಾ ನಿವೃತ್ತಿ ಹೊಂದಲಿದ್ದಾರೆ. ಇವರ ಪತಿ ಮಂಗಳೂರಿನ ಮುರಳೀಧರ ನಾಯಕ್, ಪುತ್ರಿ ನವ್ಯಶ್ರಿ ನಾಯಕ್ ಅವರು ಎಂ.ಎಸ್ಸಿ ಪದವೀಧರೆಯಾಗಿದ್ದು ಕಂಪೆನಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಪುತ್ರ ರಮಣ್ ನಾಯಕ್ ಅವರು ಬೆಂಗಳೂರಿನ ಕೆಪಿಸಿಎಲ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.