ತಾಲೂಕಿನಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಹಾರಾಡಿ ಸರಕಾರಿ ಶಾಲೆಯಲ್ಲಿ ತಾ| ಮಟ್ಟದ ಶಾಲಾ ಪ್ರಾರಂಭೋತ್ಸವ

0

ಐಎಎಸ್, ಐಪಿಎಸ್ ಆಗುವಂತೆಯೂ ಪ್ರೇರಣೆ ನೀಡಿ-ಅಶೋಕ್ ಕುಮಾರ್ ರೈ

ಹಾರಾಡಿ, ವಿಟ್ಲ ಶಾಲೆ ರೋಲ್ ಮೋಡೆಲ್ – ಸಂಜೀವ ಮಠಂದೂರು

ಪುತ್ತೂರು:ಸರಕಾರಿ ಶಾಲೆಗಳ ಪೈಕಿ ತಾಲೂಕಿನಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಹೆಗ್ಗಳಿಕೆ ಪಡೆದಿರುವ ಹಾರಾಡಿ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಮೇ 31ರಂದು ನಡೆಯಿತು. ನೂತನ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿದರು.

ಬೆಳಗ್ಗೆ, ಶಾಲೆಗೆ ನೂತನವಾಗಿ ದಾಖಲಾತಿ ಹೊಂದಿದ ಮಕ್ಕಳನ್ನು ಶಾಲಾ ದ್ವಾರದ ಬಳಿ ನೂತನ ಶಾಸಕರೊಂದಿಗೆ ಬ್ಯಾಂಡ್ ಸದ್ದಿನೊಂದಿಗೆ ಸ್ವಾಗತಿಸಿ, ಶಾಲಾ ಆವರಣದಲ್ಲಿ ಮಕ್ಕಳಿಗೆ ಆರತಿ ಬೆಳಗಿ, ತಿಲಕ ಹಚ್ಚಿ ಶಾಲಾ ತರಗತಿ ಕೊಠಡಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ಸಾಂಕೇತಿಕವಾಗಿ ಶಾಸಕರು ನೀಡಿದರು. ಇದೇ ಸಂದರ್ಭದಲ್ಲಿ ಮಲೆನಾಡು ಯೋಜನೆಯಲ್ಲಿ ರೂ.10 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ನೂತನ ಕೊಠಡಿಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಅನುದಾನ ಒದಗಿಸಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಈ ಸಂದರ್ಭ ಉಪಸ್ಥಿತರಿದ್ದರು. ಶಾಲೆಯಲ್ಲಿ ಪ್ರಥಮ ದಿನವೇ ಸಂಭ್ರಮದ ವಾತಾವರಣ ಉಂಟಾಗಿತ್ತು.

ಇಂಜಿನಿಯರ್, ಡಾಕ್ಟರ್ ಆದರೆ ಸಾಲದು-ಐಎಎಸ್, ಐಪಿಎಸ್ ಆಗುವಂತೆಯೂ ಪ್ರೇರಣೆ ನೀಡಿ: ಶಾಲಾ ಪ್ರಾರಂಭೋತ್ಸವದ ಉದ್ಘಾಟನೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಮಾತನಾಡಿ, ಹೋದಲ್ಲೆಲ್ಲಾ ಶಾಲೆಯಲ್ಲಿ ಬೇಡಿಕೆ ಇರುವುದು ಕಟ್ಟಡ, ಟೀಚರ್‌ಗಳದ್ದು ಮಾತ್ರ.ಹಿಂದೆಲ್ಲಾ ಪಠ್ಯಪುಸ್ತಕ, ಸಮವಸ್ತ್ರದ ಸಮಸ್ಯೆ ಕುರಿತು ಮಾಧ್ಯಮದ ಮೂಲಕ ತಿಳಿಯುತ್ತಿದ್ದೆ. ಆದರೆ ಇವತ್ತು ಆ ಸಮಸ್ಯೆ ಇಲ್ಲ. ಶಾಲಾರಂಭದ ಮುಂಚೆಯೇ ಎಲ್ಲಾ ಶಾಲೆಗಳಿಗೂ ಪಠ್ಯ ಪುಸ್ತಕ, ಸಮವಸ್ತ್ರ ತಲುಪಿದೆ. ಶಿಕ್ಷಕರ ಬೇಡಿಕೆಯೂ ಈ ಬಾರಿ ಪೂರ್ಣಗೊಂಡಿದೆ. ಯಾವುದೇ ಸಮಸ್ಯೆ ಇಲ್ಲ. ಇನ್ನು ಉಳಿದಿರುವುದು ಕಟ್ಟಡಗಳ ಸಮಸ್ಯೆ ಅದನ್ನು ಕೂಡಾ ಆದ್ಯತೆ ಮೇರೆಗೆ ಸರಕಾರಕ್ಕೆ ಒತ್ತಡ ತಂದು ಸಮಸ್ಯೆ ನಿವಾರಿಸಲು ಪೂರ್ಣ ಸಹಕಾರ ನೀಡುತ್ತೇನೆ ಎಂದರು. ಶಿಕ್ಷಣದಲ್ಲಿ ಬದಲಾವಣೆ ತಂದರೆ ಸಮಾಜದಲ್ಲೂ ಬದಲಾವಣೆ ತರಬಹುದು ಎಂಬುದು ನನ್ನ ಅನಿಸಿಕೆ. ಯಾಕೆಂದರೆ ನಮ್ಮ ಮಕ್ಕಳು ಕೇವಲ ಇಂಜಿನಿಯರ್, ಡಾಕ್ಟರ್ ಆಗುವ ಪ್ರಯತ್ನ ಮಾಡಬೇಡಿ. ಐ.ಎ.ಎಸ್, ಐಪಿಎಸ್ ಆಗುವಲ್ಲೂ ಶಿಕ್ಷಕರು ಮತ್ತು ಪೋಷಕರು ಪ್ರೋತ್ಸಾಹ, ಪ್ರೇರಣೆ ನೀಡಬೇಕು. ನಾನು ಕೋಡಿಂಬಾಡಿ ಸರಕಾರಿ ಶಾಲೆಯಲ್ಲಿ ಓದಿದವ. ನನ್ನಂತೆ ಬಹುತೇಕ ಮಂದಿ ಸರಕಾರಿ ಶಾಲೆಯಲ್ಲೇ ಓದಿದವರು. ಬಡವರ ಮಕ್ಕಳು ಸರಕಾರಿ ಶಾಲೆಯಲ್ಲಿ ಓದುವುದು ಎಂದು ಹೇಳುತ್ತಾರೆ. ಆದರೆ ಈಗ ಬದಲಾಗಿದೆ. ಸರಕಾರಿ ಶಾಲೆಯಲ್ಲಿ ಕನ್ನಡದ ಜೊತೆಗೆ ಇಂಗ್ಲೀಷ್ ಕೂಡಾ ಕಲಿಸಬೇಕು. ಈ ಕುರಿತು ಸರಕಾರಕ್ಕೆ ಒತ್ತಡ ತರುವ ಪ್ರಯತ್ನ ಮಾಡುತ್ತೇನೆ. ಸರಕಾರಿ ಶಾಲೆಯಲ್ಲೂ ಖಾಸಗಿ ಶಾಲೆಯನ್ನು ಹಿಂದಕ್ಕೆ ತರುವಂಥ ಶಕ್ತಿ ಇದೆ. ಸರಕಾರಿ ಶಾಲೆಯಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆ ಮತ್ತು ಸರಕಾರ ಹೊಂದಾಣಿಕೆ ಮಾಡಿಕೊಂಡು ಮುಂದೆ ಹೋಗಬೇಕು. ಈ ಬಾರಿ ಶಿಕ್ಷಕರಿಗೂ ಕೊರತೆ ಇಲ್ಲ. ಆಯಾ ಪಠ್ಯ ಕ್ರಮಕ್ಕೆ ಅನುಗುಣವಾಗಿ ಶಿಕ್ಷಕರ ನಿಯೋಜನೆ ಅಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಮನಸ್ಸನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವುದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ರೈ ಹೇಳಿದರು.

ಯುವಜನತೆಪತ್ರಿಕೆ ಓದಬೇಕು: ಇವತ್ತು ಯುವ ಜನತೆಗೆ ಹಲವು ಅವಕಾಶವಿದೆ. ಅದರೆ ಅದನ್ನು ಸದುಪಯೋಗ ಪಡಿಸುವಲ್ಲಿ ಅವರು ಎಡವಿದ್ದಾರೆ. ಎಷ್ಟೋ ಹುದ್ದೆಗಳ ಕುರಿತು ಪತ್ರಿಕೆಯಲ್ಲಿ ಮಾಹಿತಿ ಬರುತ್ತಿದೆ. ಆದರೆ ಈ ಹುದ್ದೆಗಳಿಗೆ ಉತ್ತರ ಕನ್ನಡ ಜಿಲ್ಲೆಯವರೇ ಜಾಸ್ತಿ ಅರ್ಜಿ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದೆರಡು ಮಾತ್ರ ಅರ್ಜಿ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ಉದ್ಯೋಗದ ಮಾಹಿತಿ ನೀಡುವ ಯೋಜನೆ ಮುಂದಿನ ದಿನ ಮಾಡುವ ಚಿಂತನೆ ಇದೆ.ಆದಷ್ಟು ಪತ್ರಿಕೆಯನ್ನು ಓದುವಲ್ಲಿ ಯುವ ಜನತೆ ಆಸಕ್ತಿ ವಹಿಸಬೇಕೆಂದು ಶಾಸಕರು ಸಲಹೆ ನೀಡಿದರು.

ಹಾರಾಡಿ, ವಿಟ್ಲ ಶಾಲೆ ರೋಲ್ ಮೋಡೆಲ್: ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಸಣ್ಣ ಅಂತರದಲ್ಲಿ ಈ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ತಪ್ಪಿದೆ. ಆದರೂ ಮಾದರಿಯಾಗುವ ಕೆಲಸ ಮಾಡಿದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮೌಲ್ಯಗಳನ್ನು ರೂಪಿಸಿದ ವಿದ್ಯಾರ್ಜನೆ ಭವಿಷ್ಯದಲ್ಲಿ ನಮಗೆ ಪ್ರಯೋಜನ ಆಗುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಮೌಲ್ಯಯುತ ಶಿಕ್ಷಣದ ಮೂಲಕ ಪುತ್ತೂರಿನ ಹಾರಾಡಿ ಮತ್ತು ವಿಟ್ಲ ಶಾಲೆ ಇತರರಿಗೆ ರೋಲ್ ಮೋಡೆಲ್ ಆಗಿದೆ. ಎಪಿಜೆ ಅಬ್ದುಲ್ ಕಲಾಂ ಹೇಳಿದಂತೆ ಮಕ್ಕಳನ್ನೇ ಆಸ್ತಿ ಮಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಮಾದರಿ ಶಾಲೆಯನ್ನಾಗಿ ರೂಪಿಸಲು ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್, ಕುಡಿಯುವ ನೀರಿನ ಘಟಕದ ತಾಲೂಕು ಮಟ್ಟದ ಉದ್ಘಾಟನೆಯನ್ನೂ ಸಚಿವರ ಮೂಲಕ ಹಾರಾಡಿ ಶಾಲೆಯಲ್ಲೇ ಕಳೆದ ವರ್ಷ ಮಾಡಿಸಿದ್ದೆ. ಜಿಲ್ಲೆಗೆ ಮಾದರಿ ಕಾರ್ಯವಾಗಿ ಇದನ್ನು ತೋರಿಸುವ ಕೆಲಸ ಆಗಿದೆ ಎಂದು ಮಠಂದೂರು ಹೇಳಿದರು.

ಎಲ್ಲವೂ ಇದೆ ಕೊಠಡಿ, ಶೌಚಾಲಯ, ಆವರಣದ ಕೊರತೆಯಿದೆ: ಶಾಲಾ ಮುಖ್ಯಗುರು ಕೆ.ಕೆ.ಮಾಸ್ಟರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಶಾಲೆ ತಾಲೂಕಿನಲ್ಲೇ ಅತೀ ಹೆಚ್ಚು ಮಕ್ಕಳಿರುವ ಶಾಲೆ.2021-22ರಲ್ಲಿ 620, 2022-23ಕ್ಕೆ 720, 2023-24ರ ಶೈಕ್ಷಣಿಕ ವರ್ಷದಲ್ಲಿ ಈಗಾಲೇ 768 ವಿದ್ಯಾರ್ಥಿಗಳಿದ್ದು ಇನ್ನೂ ಸೇರ್ಪಡೆಗೊಳ್ಳುತ್ತಿದ್ದು ವರ್ಷದಿಂದ ವರ್ಷಕ್ಕೆ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ 800ರ ಸಂಖ್ಯೆ ದಾಟುವ ನಿರೀಕ್ಷೆ ಇದೆ. ಆದರೂ ಗುಣಮಟ್ಟದ ಶಿಕ್ಷಣ ನೀಡುತ್ತೇವೆ. ನಮ್ಮ ಶಾಲೆಯಲ್ಲಿ ಎಲ್ಲವೂ ಇದೆ. ಆದರೆ ಕೊಠಡಿ, ಶೌಚಾಲಯ ಮತ್ತು ಆವರಣದ ಕೊರತೆಯಿದೆ ಎಂದು ಶಾಲಾ ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು. ಹಳೆಯ ಕಾಲದ ಹಂಚಿನ ಛಾವಣಿಯ ಕೊಠಡಿಗಳಿವೆ. ಶಾಲೆ ಡಿಜಿಟಲೈಸ್ ಆಗಬೇಕು. ಸ್ಮಾರ್ಟ್ ಕ್ಲಾಸ್ ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಹಿಂದಿನ ಶಾಸಕರು ನೀಡಿದ್ದಾರೆ ಎಂದ ಅವರು, ಮುಂದಿನ ದಿನ ಕೊಠಡಿಗಳ ವ್ಯವಸ್ಥೆಗೆ ನೂತನ ಶಾಸಕರಲ್ಲಿ ಮನವಿ ಮಾಡಿದರು. ಇದೇ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಶಾಲೆಯ ಪರವಾಗಿ ಶಾಸಕರಿಗೆ ವಿವಿಧ ಬೇಡಿಕೆಗಳ ಮನವಿ ಮಾಡಿದರು. ನೂತನ ಶಾಸಕ ಅಶೋಕ್ ಕುಮಾರ್ ರೈಯವರನ್ನು ಶಾಲೆಯ ಮತ್ತು ಎಸ್‌ಡಿಎಂಸಿ ಪರವಾಗಿ ಸನ್ಮಾನಿಸಲಾಯಿತು.

ಗುಣಮಟ್ಟದ ಶಿಕ್ಷಣ ನಮ್ಮ ಗುರಿ: ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಅವರು ಸ್ವಾಗತಿಸಿ ಮಾತನಾಡಿ ಗುಣಮಟ್ಟದ ಶಿಕ್ಷಣ ನಮ್ಮ ಗುರಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಳ ಕುರಿತು ತರಬೇತಿ ನೀಡುತ್ತೇವೆ. ಈ ಬಾರಿ 80 ವಿದ್ಯಾರ್ಥಿಗಳು ಎನ್‌ಎಮ್‌ಎಸ್‌ಗೆ ಆಯ್ಕೆ ಆಗಿದ್ದಾರೆ. ಅದೇ ರೀತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಮುಂದೆ ಶೇ.95 ದಾಟುವ ನಿರೀಕ್ಷೆ ಗುರಿ ಇದೆ ಎಂದರು.

ನಗರಸಭಾ ಸ್ಥಳೀಯ ಸದಸ್ಯೆ ಪ್ರೇಮಲತಾ ನಂದಿಲ, ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ನಾಯ್ಕ್, ಕಟ್ಟಡದ ಇಂಜಿನಿಯರ್ ಸಂದೀಪ್, ಕ್ಲಸ್ಟರ್‌ನ ವಿಜಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಇಸಿಒ ನವೀನ್ ವೇಗಸ್, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹಶಿಕ್ಷಕಿ ಗಂಗಾವತಿ ವಂದಿಸಿದರು. ಸಹ ಶಿಕ್ಷಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಪಝೀಲಾ, ಸದಸ್ಯರಾದ ಸುಲೋಚನಿ, ಜ್ಯೋತಿ, ಶಾಂತಿ, ಉಮೈಮಾ ಬಾನು, ಚಂದ್ರಿಕಾ, ಮಂಜು, ಶೋಭಾ, ವಿಜಯಶ್ರೀ, ಇಸ್ಮಾಯಿಲ್, ರಾಧಾಕೃಷ್ಣ ರೈ, ಗುರುಪ್ರಸಾದ್, ರಿಯಾಝ್, ಪೂವಪ್ಪ ನಾಯ್ಕ್, ಉದಯ ಕುಮಾರ್, ಹರಿಪ್ರಸಾದ್, ನಾರಾಯಣ ಪ್ರಭು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ವರ್ಗಾವಣೆಗೆ ಅದ್ಯತೆಯಿಲ್ಲ ರಾಜಕೀಯ ಬೇಡ

ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಉತ್ತಮ ಶಿಕ್ಷಣ ಸಿಗಬೇಕು.ಈ ನಿಟ್ಟಿನಲ್ಲಿ ಸರಕಾರಿ ಶಾಲೆಯಲ್ಲಿ ಶಿಕ್ಷಕರ ವರ್ಗಾವಣೆಗೆ ಆದ್ಯತೆ ಕೊಡಲಾಗುವುದಿಲ್ಲ.ಅದೇ ರೀತಿ ಶಾಲೆಗಳಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ವಿದ್ಯಾರ್ಥಿಗಳೊಂದಿಗೆ ಸ್ವಲ್ಪಹೊತ್ತು ಕಾಲ ಕಳೆದ ಶಾಸಕರು

ಸಭಾ ಕಾರ್ಯಕ್ರಮ ಮುಗಿದ ಬಳಿಕ ಒತ್ತಡದ ಕಾರ್ಯಕ್ರಮಗಳಿದ್ದರೂ ಶಾಸಕರು ವಿದ್ಯಾರ್ಥಿಗಳ ಜೊತೆ ಸ್ವಲ್ಪ ಹೊತ್ತು ಕಾಲ ಕಳೆದು ಸಣ್ಣ ಸಣ್ಣ ಮಕ್ಕಳೊಂದಿಗೆ ಬೆರೆತು ಅವರ ಪರಿಚಯ ಮಾಡಿಕೊಂಡರು. ತರಗತಿ, ಮನೆ, ಎಷ್ಟು ದೂರ ಎಂದು ವಿಚಾರಿಸಿದರು. ಮುಂದೆ ಕುಳಿತ ವಿದ್ಯಾರ್ಥಿಗಳನ್ನಷ್ಟೆ ಅಲ್ಲದೆ ಹಿಂದೆ ಕೂತ ವಿದ್ಯಾರ್ಥಿಗಳ ಬಳಿಗೂ ಹೋಗಿ ಅವರೊಂದಿಗೆ ಮಾತನಾಡಿ ಶಾಸಕರು ಗಮನ ಸೆಳೆದರು. ಕಾರ್ಯಕ್ರಮ ಮುಗಿಸಿ ತನ್ನ ಕಾರು ಏರಿ ಇನ್ನೊಂದು ಕಾರ್ಯಕ್ರಮಕ್ಕೆ ತೆರಳಲು ಮುಂದಾದ ಶಾಸಕರು ಎಸ್‌ಡಿಎಂಸಿಯವರ ಮನವಿ ಮೇರೆಗೆ ಕಾರಿನಿಂದ ಇಳಿದು ಬಂದು ಎಸ್‌ಡಿಎಂಸಿ ಮತ್ತು ಶಿಕ್ಷಕರೊಂದಿಗೆ ಫೋಟೋ ತೆಗೆಸಿಕೊಂಡು ಬಳಿಕ ತೆರಳಿದರು.

LEAVE A REPLY

Please enter your comment!
Please enter your name here