ನಾನು ಲಂಚ ಮುಟ್ಟುವುದಿಲ್ಲ, ಅಧಿಕಾರಿಗಳೂ ಲಂಚ ಪಡೆಯದೇ ಕೆಲಸ ಮಾಡಬೇಕು; ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ವಾರ್ನಿಂಗ್

0

ಪುತ್ತೂರು:ನಾನು ಲಂಚ ಮುಟ್ಟುವುದಿಲ್ಲ. ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲರೂ ಲಂಚ ಪಡೆಯದೇ ಕೆಲಸ ಮಾಡಬೇಕು. ಹಣ ಪಡೆದಿದ್ದಾರೆಂಬ ದೂರು ನನಗೆ ಯಾವತ್ತೂ ಬರಬಾರದು ಎಂದು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸುಳ್ಯ ಕ್ಷೇತ್ರದ ಶಾಸಕರಾಗಿ ಚುನಾಯಿತರಾದ ಬಳಿಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಅವರು ಪ್ರಥಮ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ. ಸಭೆಯು ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ನಾನು ಬಡ ಕುಟುಂಬದಿಂದ ಬಂದವಳು. ಜನರ ಕಷ್ಟ ನನಗೆ ಗೊತ್ತಿದೆ. ಸರಕಾರಿ ಇಲಾಖೆಗೆ ಕೆಲಸಕ್ಕೆಂದು ಜನರು ಬಂದಾಗ ಅಧಿಕಾರಿಗಳು ಅವರನ್ನು ಸತಾಯಿಸಬಾರದು. ನಾಳೆ ಬನ್ನಿ, ನಾಡಿದ್ದು ಬನ್ನಿ, ಒಂದುವಾರ ಬಿಟ್ಟು ಬನ್ನಿ ಎಂದು ಹೇಳಬಾರದು. ಅರ್ಜಿಯನ್ನು ಕೊಡುವಾಗಲೇ ಪರಿಶೀಲನೆ ನಡೆಸಬೇಕು. ಯಾವ ದಾಖಲೆ ಇಟ್ಟಿಲ್ಲ ಎಂದು ನೋಡಿಕೊಂಡು ಅದನ್ನು ಅರ್ಜಿ ಕೊಡುವಾಗಲೇ ಅವರಿಗೆ ಮಾಹಿತಿ ನೀಡಬೇಕು. ಮತ್ತು ಆ ಕೆಲಸ ಎಷ್ಟು ದಿನದಲ್ಲಿ ಆಗುತ್ತದೆ ಎಂದೂ ಅವರಿಗೆ ಸರಿಯಾಗಿ ತಿಳಿಸಬೇಕು ಮತ್ತು ಆ ದಿನಕ್ಕೆ ಕೆಲಸ ಆಗಲೇಬೇಕು ಎಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೆಲವರು ಪಂಜ, ಕೊಲ್ಲಮೊಗ್ರ, ಬಾಳುಗೋಡು, ಮುರುಳ್ಯ ಹೀಗೆ ದೂರ ದೂರದಿಂದ ಇಲಾಖೆಗಳ ಕೆಲಸಕ್ಕಾಗಿ ಸುಳ್ಯಕ್ಕೆ ಬರುತ್ತಾರೆ. ಅವರನ್ನು ನಾಳೆ ಬನ್ನಿ ಎಂದು ಹೇಳಿದರೆ ಬಡವರು ಕೂಲಿ ಕೆಲಸಕ್ಕೆ ಹೋಗುವವರ ಜೀವನ ಮತ್ತಷ್ಟು ಕಷ್ಟ ಆಗಬಹುದು. ಅದಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಹೇಳಿದ ಶಾಸಕರು, ಸರಕಾರಿ ಇಲಾಖೆಗಳಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ ಅದನ್ನು ನೋಡಿಲ್ಲ. ಅಂಥ ಮಾತುಗಳು ಮುಂದೆ ಕೇಳಿ ಬರಬಾರದು ಎಂದು ಹೇಳಿದರಲ್ಲದೆ, ಅಧಿಕಾರಿಗಳಿಗೆ ಸರಕಾರದಿಂದ ಸಂಬಳ ಸಿಗುತ್ತದೆ. ಅದರಲ್ಲಿ ಸಂತೃಪ್ತ ಜೀವನ ನಡೆಸಬೇಕು. ಲಂಚಕ್ಕಾಗಿ ಕುಣಿಸುತ್ತಾರೆಂಬ ಮಾತು ಎಲ್ಲಿಯೂ ಕೇಳಿ ಬರಬಾರದು. ನಾನು ಲಂಚ ಮುಟ್ಟುವುದಿಲ್ಲ ಅಧಿಕಾರಿಗಳು ಕೂಡಾ ಹಾಗೇ ಇರಬೇಕು ಎಂದು ಎಚ್ಚರಿಕೆ ನೀಡಿದರು.

ಕಂದಾಯ ಇಲಾಖೆಯದ್ದೇ ಕಂಪ್ಲೈಂಟ್: ನಾನು ಕ್ಷೇತ್ರ ಸುತ್ತಿದ್ದೇನೆ.ಈಗಾಗಲೇ ನನಗೆ ಕಂಪ್ಲೈಂಟ್‌ಗಳು ಬರುತ್ತಿವೆ. ಅದರಲ್ಲಿ ಹೆಚ್ಚಿರುವುದೇ ಕಂದಾಯ ಇಲಾಖೆಯದ್ದು. ಅಕ್ರಮ-ಸಕ್ರಮ ಕಡತ ಆಗಿಲ್ಲ. 94ಸಿ ಆಗಿಲ್ಲ, 94 ಸಿಸಿ ಆಗಿಲ್ಲ ಹೀಗೆ ಹಲವು ದೂರುಗಳು ಇದೆ. ಯಾಕೆ ಈ ರೀತಿಯ ದೂರುಗಳು ಬರುತ್ತದೆ ಎಂದು ಶಾಸಕಿ ಭಾಗೀರಥಿಯವರು ಪ್ರಶ್ನಿಸಿದರು. ನಾನು ಈಗ ಹೇಳಿದ ಎಲ್ಲ ಕೆಲಸಗಳು ಆದಷ್ಟು ಬೇಗ ಆಗಬೇಕು.ಎಷ್ಟು ಅರ್ಜಿಗಳು ಬಾಕಿ ಇದೆ, ಯಾಕೆ ಬಾಕಿ ಎಂಬ ವರದಿ ಕೊಡಿ. ಆ ಎಲ್ಲ ಕೆಲಸವನ್ನು ಮಾಡಿ ಸದ್ಯದಲ್ಲೇ ಹಕ್ಕುಪತ್ರ ವಿತರಣೆ ನಡೆಯಬೇಕು ಎಂದು ತಹಶೀಲ್ದಾರರಿಗೆ ಶಾಸಕರು ಸೂಚನೆ ನೀಡಿದರು.

ರೆಕಾರ್ಡ್ ಮಾಡಿ ಕೊಡಿ: ಕೆಲವು ಗ್ರಾಮಗಳಲ್ಲಿ ಜನರು ಹಲವು ವರ್ಷಗಳಿಂದ ಮನೆ ಕಟ್ಟಿ ವಾಸವಿದ್ದಾರೆ. ಅವರಿಗೆ ಇನ್ನೂ ಮನೆಯ ಅಡಿಸ್ಥಳ ರೆಕಾರ್ಡ್ ಆಗಿಲ್ಲ. ಅದು ಏನೆಂದು ನೋಡಿಕೊಂಡು ಆ ಸಮಸ್ಯೆ ಪರಿಹರಿಸುವ ಕೆಲಸ ಆಗಬೇಕು. ಹೇಗೆ ಪರಿಹರಿಸಬಹುದೆಂದು ಅಧಿಕಾರಿಗಳೇ ತಿಳಿಸಬೇಕು. ನಾವು ರಾಜಕೀಯದವರು ನನಗೆ ನಮ್ಮ ಫೀಲ್ಡ್‌ನಲ್ಲಿ ಅನುಭವ ಇದೆ. ಆದರೆ ನೀವು ಅದೇ ಫೀಲ್ಡ್‌ನಲ್ಲಿ ಇರುವುದರಿಂದ ನಿಮಗೆ ಹೆಚ್ಚು ಗೊತ್ತಿದೆ. ಆದ್ದರಿಂದ ಈ ರೀತಿ ಸಮಸ್ಯೆ ಇರುವುದನ್ನು ಪಟ್ಟಿ ಮಾಡಿ ಹಕ್ಕುಪತ್ರ ಕೊಡಿಸುವ ಕೆಲಸ ಆಗಬೇಕೆಂದು ಭಾಗೀರಥಿಯವರು ಸೂಚನೆ ನೀಡಿದರು.

ಸಹಕಾರ ನೀಡಿ ಮಾದರಿ ಕ್ಷೇತ್ರವನ್ನಾಗಿಸುವೆ: ಮುಂದಿನ 5 ವರ್ಷದಲ್ಲಿ ಸುಳ್ಯ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ನನಗಿದೆ. ಅದಕ್ಕೆ ಅಧಿಕಾರಿಗಳಾದ ನೀವು ಸಹಕಾರ, ಸಲಹೆ ನೀಡಬೇಕು. ನಿಮ್ಮ ನಿಮ್ಮ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ನನ್ನೊಡನೆ ಸಹಕಾರ ನೀಡಿ. ನನ್ನನ್ನು ದೊಡ್ಡ ಅಂತರದಲ್ಲಿ ಶಾಸಕಿಯಾಗಿ ಆಯ್ಕೆ ಮಾಡುವಲ್ಲಿ ನೀವೂ ಮತ ಹಾಕಿರಬಹುದು. ಎಲ್ಲರಿಗೂ ಕೃತಜ್ಞತೆ. ಮುಂದೆಯೂ ಸಹಕಾರ ಬೇಕು ಎಂದು ಹೇಳಿದ ಅವರು ಶಾಸಕರು, ನಾನು ಇಂದು ಸಾಫ್ಟ್ ಆಗಿ ಮಾತನಾಡಿದ್ದೇನೆ.‌ ನಿಷ್ಟುರವಾಗಿ ಮಾತನಾಡುವಂತೆ ನೀವು ಮಾಡಬಾರದು ಎಂದು ಕಿವಿ ಮಾತು ಹೇಳಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಸಹಕಾರದ ಭರವಸೆ ನೀಡಿದರು. ತಹಶೀಲ್ದಾರ್ ಜಿ.ಮಂಜುನಾಥ್ ಕಂದಾಯ ಇಲಾಖೆಯ ಕೆಲಸ ಕಾರ್ಯದ ಕುರಿತು ವಿವರ ನೀಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ಜನರು ಸರಕಾರಿ ಇಲಾಖೆಗೆ ಕೆಲಸಕ್ಕೆಂದು ಬಂದಾಗ ನಾಳೆ ಬನ್ನಿ, ನಾಡಿದ್ದು ಬನ್ನಿ, ಒಂದು ವಾರ ಬಿಟ್ಟು ಬನ್ನಿ ಎಂದು ಹೇಳಬಾರದು. ಅರ್ಜಿಯನ್ನು ತೆಗೆದುಕೊಳ್ಳುವಾಗಲೇ ಪರಿಶೀಲನೆ ಮಾಡಿಕೊಳ್ಳಬೇಕು. ಯಾವ ದಾಖಲೆ ಇಟ್ಟಿಲ್ಲ ಎಂದು ನೋಡಿಕೊಂಡು ಅದನ್ನು ಅರ್ಜಿ ಕೊಡುವಾಗಲೇ ಅವರಿಗೆ ಮಾಹಿತಿ ನೀಡಬೇಕು. ಆ ಕೆಲಸ ಎಷ್ಟು ದಿನದಲ್ಲಿ ಆಗುತ್ತದೆ ಎಂದೂ ಅವರಿಗೆ ಸರಿಯಾಗಿ ತಿಳಿಸಬೇಕು ಮತ್ತು ಆ ದಿನಕ್ಕೆ ಕೆಲಸ ಆಗಲೇಬೇಕು ಎಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

LEAVE A REPLY

Please enter your comment!
Please enter your name here