ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಭಾಗ್ಯಗಳ ಬಗ್ಗೆ ಘೋಷಣೆ ಹೊರಡಿಸಲು ಜೂ.1ರಂದು ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ಜೂ.2ರಂದು ಬೆಳಗ್ಗೆ 11 ಗಂಟೆಗೆ ಮುಂದೂಡಿಕೆಯಾಗಿದೆ. ಆದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು ಅಂದು ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ಸ್ಪಷ್ಟ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.
ಮೇ 31ರಂದು ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ಹಲವು ಸಚಿವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ಸಭೆ ಏರ್ಪಟ್ಟಿತ್ತು. ಚುನಾವಣಾ ಗ್ಯಾರಂಟಿ ಯೋಜನೆಗಳ ಜಾರಿಯ ವಿಧಾನಗಳ ಬಗ್ಗೆ ಚರ್ಚೆಯಾಗಿದ್ದು ಜೂ.1ರಂದು ಮತ್ತೊಂದು ಸುತ್ತಿನ ಚರ್ಚೆಯಾಗಲಿದೆ. ಸಚಿವರುಗಳು ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಗ್ಯಾರಂಟಿ ಯೋಜನೆ ಜಾರಿಗೆ ಹಣಕಾಸು ಕ್ರೋಢೀಕರಣ ಹಾಗೂ ಪೂರಕ ದಾಖಲಾತಿ ಎಲ್ಲವೂ ಒಳಗೊಂಡು ಕಾಲಾವಕಾಶದ ಅಗತ್ಯ ಇದೆ. ಈ ನಿಟ್ಟಿನಲ್ಲಿ ತರಾತುರಿಯಲ್ಲಿ ಜಾರಿ ಮಾಡುವ ಯೋಚನೆ ಸರ್ಕಾರದ ಮುಂದೆ ಇಲ್ಲ ಎನ್ನಲಾಗಿದ್ದು ಈ ಹಿನ್ನಲೆಯಲ್ಲಿ ಸಚಿವರ ಜೊತೆಗೆ ಚರ್ಚೆ ನಡೆಸಿದ ಬಳಿಕ ಮತ್ತೊಂದು ಸುತ್ತು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ ಬಳಿಕ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.