ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್‌ನ 2023-24 ನೇ ಸಾಲಿನ ವಿನೂತನ ಯೋಜನೆಯಾಗಿ ನೆಲ್ಲಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಲಾದ `ವಿದ್ಯಾ ಜ್ಯೋತಿ’ ಎಲ್‌ಕೆಜಿ, ಯುಕೆಜಿ ತರಗತಿಗಳ ಆರಂಭೋತ್ಸವವು ಜೂ.1ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರೋಟರಿ ಕ್ಲಬ್ ಪುತ್ತೂರು ಸಿಟಿ ಮಾಜಿ ಅಧ್ಯಕ್ಷರು, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿರುವ ಜಾನ್ ಕುಟಿನ್ಹಾರವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವು ಆವಶ್ಯಕವಾಗಿದೆ. ಮಕ್ಕಳು ಕ್ರಿಯಾಶೀಲತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯ. ರೋಟರಿ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಮೂಲಕ ಪ್ರಾರಂಭವಾದ ಆಂಗ್ಲ ಮಾಧ್ಯಮ ಶಾಲೆಯ ಭವಿಷ್ಯದ ಉತ್ತಮ ನಾಗರಿಕರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಇಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ನಾಗರಿಕರಾಗಿ ನಿರ್ಮಾಣಗೊಳ್ಳಲು ಪೂರಕವಾಗಲಿದೆ ಎಂದರು.
ವೇ.ಮೂ ವೆಂಕಟೇಶ್ ಭಟ್ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಲು ರೋಟರಿ ಮೂಲಕ ಪ್ರಾರಂಭಗೊಂಡು ಶಾಲೆಯು ಸಹಕಾರಿಯಾಗಲಿದೆ. ನಾವು ಕಲಿತ ಶಾಲೆಯಲ್ಲಿಯೇ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಗೊಳ್ಳುತ್ತಿದ್ದು ಬಹಳಷ್ಟು ಸಂತೋಷ ತಂದಿದೆ. ನಮ್ಮ ಹಲವು ವರ್ಷಗಳ ಬೇಡಿಕೆಯನ್ನು ರೋಟರಿ ಕ್ಲಬ್ ಚಾರಿಟೇಬಲ್ ಟ್ರಸ್ಟ್‌ನವರು ಈಡೇರಿಸಿಕೊಟ್ಟಿದ್ದಾರೆ. ಇಲ್ಲಿ ಕಡಿಮೆ ವೆಚ್ಚದ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶದ ಜೊತೆಗೆ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಲು ಆಂಗ್ಲ ಮಾಧ್ಯಮ ಶಿಕ್ಷಣವು ಸಹಕಾರಿಯಾಗಲಿದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸುರೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಗೊಳ್ಳುವ ಮೂಲಕ ನಮ್ಮ ಬಹುಕಾಲದ ಕನಸು ನನಸಾಗಿದೆ. ಕ್ಲಬ್‌ನ ಹೊಸ ಪ್ರಯೋಗಕ್ಕೆ ಕ್ಲಬ್‌ನ ಎಲ್ಲಾ ಸದಸ್ಯರು ಸೇವೆಯೆಂಬ ಯಜ್ಞದಲ್ಲಿ ಉರಿಯುವ ಸವಿದೆಯಂತೆ ಸಹಕರಿಸಿದ್ದಾರೆ. ಆಧುನಿಕ ಕಾಲ ಘಟಕ್ಕೆ ಪೂರಕವಾಗಿ ಇಂಗ್ಲಿಷ್ ಅನಿವಾರ್ಯವಾಗಿದೆ ಎಂಬುದನ್ನು ಅರಿತು ಕನ್ನಡವನ್ನು ಕಡೆಗಣಿಸದೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುವುದು. ಶಾಲಾ ಮುಖ್ಯ ಗುರು, ಎಸ್‌ಡಿಎಂಸಿ ಸದಸ್ಯರ ಬೇಡಿಕೆ ಈಡೇರಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ ಇದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಸಿಟಿಯ ವಲಯ ಸೇನಾನಿ ಪ್ರಮೋದ್ ಮಲ್ಲಾರ, ವಲಯದ ನಿಯೋಜಿತ ಗವರ್ನರ್ ಲಾರೆನ್ಸ್ ಗೊನ್ಸಾಲ್ವೀಸ್, ರೋಟರಿ ಕ್ಲಬ್ ಪುತ್ತೂರು ಸಿಟಿಯ ನಿಯೋಜಿತ ಅಧ್ಯಕ್ಷೆ ಗ್ರೆಸ್ಸಿ ಗೊನ್ಸಾಲ್ವೀಸ್, ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್‌ನ ಕೋಶಾಧಿಕಾರಿ ಮನೋಹರ್ ಕೊಳಕ್ಕೆಮಾರ್, ಶಾಲಾ ಸಂಚಾಲಕ ಉಲ್ಲಾಸ್ ಪೈ, ಶಾಲಾ ಮುಖ್ಯಶಿಕ್ಷಕಿ ಯಶೋಧ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪುಟಾಣಿ ವಿದ್ಯಾರ್ಥಿಗಳನ್ನು ಆರತಿ ಬೆಳಗಿ, ತಿಲಕವಿಟ್ಟು ತರಗತಿಗೆ ಬರಮಾಡಿಕೊಳ್ಳಲಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಕಿಟ್‌ನ್ನು ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿತರಿಸಲಾಯಿತು.
ಶಿಕ್ಷಕರಾದ ವೇದಾವತಿ ಹಾಗೂ ವಿನಯ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ ಸ್ವಾಗತಿಸಿದರು. ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಸುಧಾಕರ ಶೆಟ್ಟಿ ವಂದಿಸಿದರು.