





ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾ.ಪಂ. ಪಿಡಿಒ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ, ಸರಕಾರಿ ಸೊತ್ತು ನಾಶ, ನಗದು ದರೋಡೆ ಹಾಗೂ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಪಿಡಿಒ ನೀಡಿದ ದೂರಿನಂತೆ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.


ಗ್ರಾ.ಪಂ. ಸದಸ್ಯೆ ಯಮುನಾ, ಅವರ ಪುತ್ರ ನವೀನ್ ನಾಯ್ಕ್ ಹಾಗೂ ತಾ.ಪಂ. ಮಾಜಿ ಸದಸ್ಯ ಮಂಜುನಾಥ ಸಾಲಿಯಾನ್ ಎಂಬವರು ಈ ಪ್ರಕರಣದ ಆರೋಪಿಗಳು. ತೆಕ್ಕಾರು ಗ್ರಾ.ಪಂ. ಸ್ವಚ್ಛತಾಗಾರ್ತಿ ಪ್ರಮೀಳಾ ಮತ್ತು ಪಿಡಿಒ ಸುಮಯ್ಯಾ ಅವರು ಈ ಸಂಬಂಧ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ಗ್ರಾ.ಪಂ. ವಿವಾದಿತ ಕಟ್ಟಡವನ್ನು ಯಮುನಾ ಅವರು ಅತಿಕ್ರಮಿಸಿಕೊಂಡಿದ್ದು, ಇದರ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಇದೆ. ಅದೇ ವಿವಾದಿತ ಕಟ್ಟಡದಲ್ಲಿ ಶಾಸಕ ಹರೀಶ್ ಪೂಂಜಾ ಅವರು ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿರುವ ಬಗ್ಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಅಳವಡಿಸಲಾಗಿತ್ತು. ಅದನ್ನು ತೆರವುಗೊಳಿಸುವಂತೆ ಗ್ರಾ.ಪಂ. ವತಿಯಿಂದ ಸಿಬ್ಬಂದಿ ಪ್ರಮೀಳಾ ಅವರು ಯಮುನಾ ಅವರಿಗೆ ನೊಟೀಸ್ ನೀಡಿ ಅದರ ಸ್ವೀಕೃತಿ ಪಡೆದು, ಗ್ರಾ.ಪಂ.ಗೆ ಹಿಂದುರಿಗಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಯಮುನಾ ಹಾಗೂ ಅವರ ಪುತ್ರ ನವೀನ್ ನಾಯ್ಕ್ ಅವರು ಮಂಜುನಾಥ್ ಸಾಲಿಯಾನ್ ಎಂಬವರ ಕುಮ್ಮಕ್ಕಿನಿಂದ ಗ್ರಾ.ಪಂ.ಗೆ ಬಂದು ಸ್ವೀಕೃತಿ ಪತ್ರ ಮರಳಿ ನೀಡುವಂತೆ ಒತ್ತಾಯಿಸಿ ಜಗಳ ಮಾಡಿದ್ದಾರೆ. ಈ ಸಂದರ್ಭ ಅವರು ಸಿಬ್ಬಂದಿ ಮೇಲೆ ಕೈ ಮಾಡಿ, ಪಿಡಿಒ ಹಾಗೂ ಅವರಿಬ್ಬರ ಮೇಲೆ ಹಲ್ಲೆ ನಡೆಸಿ, ಮಾನಭಂಗ ನಡೆಸಿದ್ದಾರೆ. ಅಲ್ಲದೆ, ಗ್ರಾ.ಪಂ.ನ ಸೊತ್ತಾದ ಮೊಬೈಲ್ ಫೋನ್ ಅನ್ನು ಪಿಡಿಒ ಅವರ ಕೈಯಿಂದ ಕಿತ್ತುಕೊಂಡು ನೆಲಕ್ಕಪ್ಪಳಿಸಿ ಹಾನಿ ಮಾಡಿದ್ದಾರೆ. 





ಪಂಚಾಯತ್ನಲ್ಲಿದ್ದ ಸರಕಾರಿ ಹಣ 3000 ರೂಪಾಯಿಯನ್ನು ದೋಚಿ ಓಮ್ನಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾ.ಪಂ. ಎಟೆಂಡರ್ ಹುದ್ದೆ ಖಾಲಿ ಇರುವುದರಿಂದ ಪಿಡಿಒ ನಿರ್ದೇಶನದ ಮೇರೆಗೆ ಸ್ವಚ್ಛತಾಗಾರ್ತಿ ಪ್ರಮೀಳಾ ನೊಟೀಸ್ ನೀಡುವ ಕರ್ತವ್ಯ ಮಾಡಿದ್ದರು. ಅವರ ಮೇಲೆ ಆದ ಹಲ್ಲೆ ಹಾಗೂ ಜೀವ ಬೆದರಿಕೆಯನ್ನು ಪಿಡಿಒ ಅವರಿಗೆ ಅವರು ನೀಡಿದ ದೂರಿನ ಉಲ್ಲೇಖದಂತೆ ಮತ್ತು ಗ್ರಾ.ಪಂ.ನಲ್ಲಿ ನಡೆದ ಕೃತ್ಯದ ಬಗ್ಗೆ ಪಿಡಿಒ ಸುಮಯ್ಯ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.


 
            