ಪರಿಸರ ಅಸಮತೋಲನಕ್ಕೆ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸವಾಗಬೇಕು: ನವೀನ್ ಭಂಡಾರಿ
ಪುತ್ತೂರು:ಪರಿಸರವನ್ನು ಮರೆತದ್ದರಿಂದ ಭೂಮಿಯ ತಾಪಮಾನ ದಿನ ದಿನೇ ಹೆಚ್ಚಾಗುತ್ತಿದೆ. ಮಾನವನ ಅಗತ್ಯಕ್ಕೆ ಬೇಕಿರುವ ಪ್ಲಾಸ್ಟಿಕ್ ನ ಅತಿಬಳಕೆಯಿಂದ ಪರಿಸರ ಅಸಮತೋಲನಗೊಂಡಿದೆ ಇದನ್ನು ತಪ್ಪಿಸಲು ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯವಾಗಬೇಕು ಎಂದು ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅಭಿಪ್ರಾಯ ಹೇಳಿದರು.
ಕಬಕ ಗ್ರಾಮ ಪಂಚಾಯತ್ ಸ್ವಚ್ಛ ಸಂಕೀರ್ಣದಲ್ಲಿ ತಾಲೂಕು ಪಂಚಾಯತ್ ಪುತ್ತೂರು, ಸಾಮಾಜಿಕ ಅರಣ್ಯ ಇಲಾಖೆ ಪುತ್ತೂರು ವಲಯ ಮತ್ತು ಕಬಕ ಗ್ರಾಮ ಪಂಚಾಯತ್ ನ ಸಹಯೋಗದಲ್ಲಿ ಜೂ.5ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಅತಿ ಹೆಚ್ಚು ಈ ಬಾರಿ ಅಧಿಕ ಉಷ್ಣಾಂಶತೆ ಕಂಡು ಬಂದಿರುತ್ತದೆ ಹಾಗೂ ಇದರಿಂದ ಹಲವು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಬೆಂಕಿ ಅವಘಡಗಳು ಕೂಡ ಸಂಭವಿಸಿರುತ್ತದೆ ಇದಕ್ಕೆ ಕಾರಣ ಪರಿಸರ ಕಾಳಜಿಯನ್ನು ಮರೆತಿರುವುದಾಗಿದೆ ಎಂದರು ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ನಿಂದ ಮನುಷ್ಯನಿಗೆ ಹಾಗೂ ಪರಿಸರಕ್ಕೂ ಹಾನಿಯಿದ್ದರೂ ಅದರ ಬಳಕೆ ದಿನೇ ದಿನೇ ಹೆಚ್ಚಾಗುತ್ತಿರುವುದು ವಿಪರ್ಯಾಸ ಎಂದರು.
ಸಾಮಾಜಿಕ ಅರಣ್ಯ ಇಲಾಖೆಯ ಪುತ್ತೂರು ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಮಾತನಾಡಿ, 1973 ರಂದು ದೇಶದಲ್ಲಿ ಮೊದಲಬಾರಿಗೆ ‘ ಇರುವುದೊಂದೇ ಭೂಮಿ’ ಎಂಬ ಧ್ಯೇಯದೊಂದಿಗೆ ಪರಿಸರ ದಿನಾಚರಣೆಯನ್ನು ಆರಂಭಿಸಲಾಯಿತು. ಇಂದಿಗೆ 50 ವರ್ಷಗಳು ಕಳೆದರೂ ಧ್ಯೇಯವನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಮಾನವನ ಕೈಗಾರೀಕರಣ, ಅಭಿವೃದ್ಧಿಯ ಹಸ್ತಕ್ಷೇಪದಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದರು. ಜೀವವೈವಿಧ್ಯಗಳನ್ನು ಉಳಿಸುವ ಕೆಲಸವಾಗಬೇಕು ಎಂದರು.
ಕಬಕ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ವಿನಯ ಕುಮಾರ್ ಕಲ್ಲೇಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಡು, ನೀರು, ಮಣ್ಣುನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನು ಪ್ರತಿಯೊಬ್ಬರು ನೆಡುವ ಮೂಲಕ ಪರಿಸರ ಪ್ರಜ್ಞೆ ಮೂಡಲಿ ಎಂದು ಶುಭ ಹಾರೈಸಿದರು.
ಕಬಕ ಗ್ರಾ.ಪಂ. ಉಪಾಧ್ಯಕ್ಷ ರುಕ್ಮಯ ಗೌಡ, ಸದಸ್ಯರಾದ ಸುಶೀಲಾ, ಉಮರ್ ಫಾರೂಕ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ, ಸಾಮಾಜಿಕ ವಲಯ ಅರಣ್ಯ ಇಲಾಖೆಯ ಉಪವಲಯರಣ್ಯಾಧಿಕಾರಿ ಕೃಷ್ಣ ಜೋಗಿ, ಕಬಕ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಶಾಂತ, ಗ್ರಾ.ಪಂ.ಕಾರ್ಯದರ್ಶಿ ಸುರೇಶ್ ಕೆ., ಎನ್ ಆರ್ ಎಲ್ ಎಂ ಒಕ್ಕೂಟದ ಸದಸ್ಯರು, ಕಬಕ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು, ಸಾಮಾಜಿಕ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು, ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂದರ್ಭ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಪ್ರತಿಜ್ಞೆಯನ್ನು ಬೋಧಿಸಲಾಯಿತು.
ನರೇಗಾ ಐಇಸಿ ಸಂಯೋಜಕ ಭರತ್ ರಾಜ್ ಕೆ. ಕಾರ್ಯಕ್ರಮ ನಿರೂಪಿಸಿದರು.