ಪುತ್ತೂರು: ಬಲ್ನಾಡು ಗ್ರಾಮದ ಬೆಳಿಯೂರುಗುತ್ತು ಕುಟುಂಬದ ಯಜಮಾನ, ಪ್ರಗತಿಪರ ಕೃಷಿಕರಾಗಿದ್ದ ಬಾಲಕೃಷ್ಣ ರೈ ಇಟ್ರಾಡಿರವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಜೂ. 6 ರಂದು ಪುತ್ತೂರು ಸ್ವಾಮಿ ಕಲಾ ಮಂದಿರದಲ್ಲಿ ಜರಗಿತು.
ಸಾಮಾಜಿಕ ಮುಂದಾಳು ಪ್ರದೀಪ್ಕುಮಾರ್ ರೈ ಪನ್ನೆಯವರು ಮಾತನಾಡಿ ಬಾಲಕೃಷ್ಣ ರೈಯವರು ಕೊಡಿಯಾಲ ಗ್ರಾ.ಪಂನಲ್ಲಿ 25 ವರ್ಷಗಳ ಕಾಲ ಅಧ್ಯಕ್ಷರಾಗಿ, ಕೊಡಿಯಾಲ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 10 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಸುಳ್ಯ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರು ಬಂಟ ಸಮಾಜದ ಮದುವೆ ಕಾರ್ಯಕ್ರಮದ ಸುಧಾರಿಕೆಯನ್ನು ಪುತ್ತೂರು-ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಡೆಸಿಕೊಡುವ ಮೂಲಕ ಹೆಸರನ್ನು ಪಡೆದಿದ್ದರು. ಓರ್ವ ಪ್ರಗತಿಪರ ಕೃಷಿಕನಾಗಿ, ಸಮಾಜ ಮತ್ತು ಕುಟುಂಬವನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಬಾಲಕೃಷ್ಣ ರೈಯವರು ಕೃಷಿ ಬದುಕನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬಂದಿದ್ದಾರೆ. ಪಂಜಿಗಾರು-ಬೊಬ್ಬೆಕೇರಿ ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಜನೋಪಯೋಗಿ ಕಾರ್ಯವನ್ನು ಮಾಡುವ ಮೂಲಕ ಬಾಲಕೃಷ್ಣ ರೈರವರು ಸಮಾಜದಲ್ಲಿ ಹೆಸರನ್ನು ಪಡೆದಿದ್ದಾರೆ ಎಂದು ನುಡಿನಮನ ಸಲ್ಲಿಸಿದ್ದರು. ಮೃತರ ಸಹೋದರ ವಿಜಯಾ ಬ್ಯಾಂಕ್ನ ನಿವೃತ್ತ ಡೆಪ್ಯುಟಿ ಜನರಲ್ ಮೆನೇಜರ್ ದೇರಣ್ಣ ರೈ, ಸಹೋದರಿ ಸಾವಿತ್ರಿ ರೈ, ಪತ್ನಿ ಶೀಲಾವತಿ ಬಿ.ರೈ, ಪುತ್ರರಾದ ಪ್ರಗತಿಪರ ಕೃಷಿಕರಾದ ಜೀವನ್ದಾಸ್ ರೈ, ನವೀನ್ ಕುಮಾರ್ರೈ, ಅರುಣ್ಕುಮಾರ್ ರೈ, ಪುತ್ತೂರು ಎಲ್ಐಸಿ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ ರೈ, ಪುತ್ರಿ ಸುಮಾಪ್ರಕಾಶ್ ಶೆಟ್ಟಿ, ಸೊಸೆಯಂದಿರಾದ ಲೀಲಾವತಿ ರೈ, ಶಶಿಕಲಾ ರೈ, ಪ್ರಶಾಂತಿ ರೈ, ಪವಿತ್ರ ರೈ ಹಾಗೂ ಮೊಮ್ಮಕ್ಕಳು ಉಪಸ್ಥಿತರಿದ್ದರು ಸಮಾರಂಭದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಹಕಾರ ಕ್ಷೇತ್ರದ ಧುರೀಣರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಊರ-ಪರವೂರ ಹಿತೈಷಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.