ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ನೆಲ್ಯಾಡಿ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ ಹಾಗೂ ಜೇಸಿಐ ನೆಲ್ಯಾಡಿ ಇದರ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಜೂ.6ರಂದು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿಯವರು ಮಾತನಾಡಿ, ತಂಬಾಕು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ತಂಬಾಕು ಬಳಕೆಯಿಂದ ಕ್ಯಾನ್ಸರ್, ಹೃದಯ, ಮಾನಸಿಕ, ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳು ಬರುತ್ತವೆ. ತಂಬಾಕು ಬಳಕೆಯಿಂದ ಕ್ಷಣಿಕ ಸುಖ, ಉತ್ತೇಜನ ಸಿಗುತ್ತದೆ ಎಂದು ಜನರು ಬಳಕೆ ಮಾಡುತ್ತಾರೆ. ಆದರೆ ಇದರ ಬಳಕೆ ಮನುಷ್ಯನನ್ನು ಹಂತ ಹಂತವಾಗಿ ಕೊಲ್ಲುತ್ತದೆ. ಆದ್ದರಿಂದ ಇದರ ದಾಸರಾಗುವ ಬದಲು, ರೋಗ ಬರದಂತೆ ತಡೆಕಟ್ಟುವ ಬಗ್ಗೆ ಆಲೋಚನೆ ಮಾಡಬೇಕು. ದುಶ್ಚಟಗಳಿಂದ ದೂರವಿರಬೇಕೆಂದು ಹೇಳಿದರು.
ಪಡುಬೆಟ್ಟು ಸರಕಾರಿ ಪ್ರೌಢಶಾಲೆ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಗುಡ್ಡಪ್ಪ ಅವರು ಉದ್ಘಾಟಿಸಿ ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಸವಣೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಪಡುಬೆಟ್ಟು ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕಿ ಕಮಲ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಪಡುಬೆಟ್ಟು ಒಕ್ಕೂಟದ ಅಧ್ಯಕ್ಷ ಜಾನ್ ಮೊಂತೆರೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ನೆಲ್ಯಾಡಿ ವಲಯ ಮೇಲ್ವಿಚಾರಕ ವಿಜೇಶ್ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಡುಬೆಟ್ಟು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕುಶಾಲಪ್ಪ ಗೌಡ ವಂದಿಸಿದರು. ಸೇವಾ ಪ್ರತಿನಿಧಿ ಮೋಹಿನಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.