ಪುತ್ತೂರು:ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿ.ಎಸ್.ಯಡಿಯೂರಪ್ಪ, ಶೋಭಕ್ಕ, ಧರ್ಮೇಂದ್ರ ಪ್ರಧಾನ್, ಅಣ್ಣಾ ಮಲೈ ಹೀಗೆ ರಾಜ್ಯ,ರಾಷ್ಟ್ರೀಯ ನಾಯಕರೆಲ್ಲ ಕರೆ ಮಾಡಿದ್ರು.ಪಕ್ಷದ ನಾಯಕರಿಗೆ ಇಲ್ಲಿನ ಗ್ರೌಂಡ್ ರಿಯಾಲಿಟಿ ಗೊತ್ತಿದ್ದರೂ ಯಾರೂ ಅರುಣಣ್ಣನಿಗೆ ಪಕ್ಷದಿಂದ ಬಿ ಫಾರಂ ಕೊಡಿ ಎಂದು ಹೇಳಲಿಲ್ಲ.ಬದಲಿಗೆ ನೀವು ನಾಮಪತ್ರ ಹಿಂತೆಗೆದುಕೊಳ್ಳಿ ಇಲ್ಲವಾದರೆ ಪಕ್ಷದ ಅಭ್ಯರ್ಥಿಗೆ ಸೋಲಾಗುತ್ತದೆ ಎಂದು ಹೇಳಿದ್ದರು ಎಂದು ಸುಳ್ಯದ ರಾಜರಾಮ ಭಟ್ ಎಂಬವರು ಮಾಡಿರುವ ಭಾಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಲ್ಮಡ್ಕ ಸಮೀಪ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿರುವ ವೀಡಿಯೋ ವೈರಲ್ ಆಗಿದೆ.
ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಅರುಣಣ್ಣ ಎರಡನೇ ಸ್ಥಾನಕ್ಕೆ ಬಂದರು. ಮೂರನೇ ಸ್ಥಾನಕ್ಕೆ ರಾಷ್ಟ್ರೀಯ ಪಕ್ಷ ದೂಡಲ್ಪಟ್ಟಿತು.ಕಾಂಗ್ರೆಸ್ ಅಭ್ಯರ್ಥಿ ಪುತ್ತೂರಲ್ಲಿ ಶಾಸಕರಾದರು.ಕೊಟೇಚಾ ಹಾಲ್‌ನಲ್ಲಿ, ಕಾಯಾ ವಾಚಾ ಮನಸಾ ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಿದ ಮಾತನ್ನು ಈ ನಿಮಿಷದವರೆಗೆ ಪಾಲಿಸಿಕೊಂಡು ಬರುತ್ತಿದ್ದೇವೆ. ವಿಕಾಸ್ ಎಂದೇಳುವ ವ್ಯಕ್ತಿ,ಇವರ ನಾಮಪತ್ರವನ್ನು ಹಿಂತೆಗೆದುಕೊಳ್ಳಬೇಕೆಂಬ ದೃಷ್ಟಿಯಿಂದ ನಮ್ಮ ಬಳಿ ಬಂದು ರಾತ್ರಿ 12.30 ಗಂಟೆಗೆ ನಮ್ಮ ಮುಂದೆ ‘ರಾಜರಾಮಣ್ಣ ಪ್ಲೀಸ್ ಅರುಣಣ್ಣನಲ್ಲಿ ವಿದ್‌ಡ್ರಾ ಮಾಡಲು ಹೇಳಿ ನಾಮಪತ್ರ ಹಿಂಪಡೆದುಕೊಳ್ಳಲು ಹೇಳಿ ಎಂದು ಹೇಳಿದಾಗ, ಯಾಕೆ ಹಿಂಪಡೆಯಬೇಕು.ಇಂತಹ ವ್ಯಕ್ತಿತ್ವ, ಯೋಗ್ಯತೆ, ಜನಬೆಂಬಲವಿರುವ ಹಿಂದೂ ವ್ಯಕ್ತಿ, ಕಾರ್ಯಕರ್ತರಲ್ಲಿ ಕಾರ್ಯಕರ್ತರಾಗಿರುವ ವ್ಯಕ್ತಿಯನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಡಲು ನಾವು ಪ್ರಯತ್ನಿಸುತ್ತಿರುವಾಗ ನೀವೇಕೆ ನಮಗೆ ಬಿ ಫಾರಂ ಕೊಡಬಾರದು, ಸಿಫಾರಂ ಕೊಡಬಾರದು.ಬಿ ಫಾರಂ ಕೊಡುವ ಹೊತ್ತು ಹೋಯ್ತು, ಸಿಫಾರಂ ಕೊಡಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಕೊಡಿ ಎಂದು ನಾವು ಅಂಗಲಾಚಿ ಬೇಡಿಕೊಂಡೆವು. ಆಗ ಅವರು, ಇಲ್ಲ ರಾಜರಾಮಣ್ಣ ನೀವು ತಪ್ಪು ಮಾಡುತ್ತಿದ್ದೀರಿ. ಅರುಣಣ್ಣನ ಜೀವನವೇ ಹಾಳಾಗಿ ಹೋದೀತು. ಅತ್ತ ರಾಜಕೀಯವೂ ಇಲ್ಲ. ಇತ್ತ ಹಿಂದುತ್ವವೂ ಇಲ್ಲ ಸೋತರೆ ಎಂದರು. ಆಗ ನಾನು, ಅವರ ಹಿಂದುತ್ವ ನಷ್ಟವಾಗಲಿಕ್ಕಿಲ್ಲ. ರಾಜಕೀಯ ಭವಿಷ್ಯವೂ ಹಾಳಾಗಲಿಕ್ಕಿಲ್ಲ. ಎಲ್ಲಿಯಾದರೂ ಅವರು ಸೋತಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಲೋಕಸಭಾ ಸ್ಥಾನಾರ್ಥಿ ಪುತ್ತಿಲ ಎಂದು ಹೇಳಿ, ಅಲ್ಲಿಯೇ ಅನೌನ್ಸ್ ಮಾಡಿದವ. ಪುತ್ತಿಲರನ್ನು ಭಾರತೀಯ ಜನತಾ ಪಾರ್ಟಿ ನಮ್ಮ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅನೌನ್ಸ್ ಮಾಡಬೇಕು ಎಂದು ಪ್ರಪ್ರಥಮವಾಗಿ, ವಿಧಾನಸಭಾ ಚುನಾವಣೆ ನಡೆಯುವ ಮೊದಲೇ ಪ್ರಸ್ತಾಪಿಸಿದವ ನಾನು.
ನಾಮ ಪತ್ರ ಸಲ್ಲಿಸಲು ಹೋದಾಗ ಸುಮಾರು 25 ಸಾವಿರ ಕಾರ್ಯಕರ್ತರು ಅದರಲ್ಲಿ ನಾನು ಸಹಿತ ಕೆಲವರು ಮಾತ್ರ ಕ್ಷೇತ್ರದ ಹೊರಗಿನವರು. ಆದರೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದಾಗ ಮಹಾಲಿಂಗೇಶ್ವರ ದೇವಳದ ಎದುರು ಗದ್ದೆಯಲ್ಲಿ ಕ್ಷೇತ್ರದ 500ರಿಂದ ಸಾವಿರ ಕಾರ‍್ಯಕರ್ತರು ಕ್ಷೇತ್ರದವರಿದ್ದರು. ಬಾಕಿ ಎಲ್ಲ ಹೊರಗಿನವರು. ಹೀಗಿದ್ದರೂ, ಅರುಣಣ್ಣನಿಗೆ ವಿದ್ ಡ್ರಾ ಮಾಡಲು ಹೇಳಿದ್ದೇ ಹೊರತು ಅರುಣಣ್ಣನಿಗೆ ಪಕ್ಷದ ಟಿಕೆಟ್ ಕೊಡಿ ಎಂದು ರಾಜ್ಯದ, ರಾಷ್ಟ್ರದ ನಾಯಕರ‍್ಯಾರೂ ಹೇಳಿಲ್ಲ. ಯಡಿಯೂರಪ್ಪ ಫೋನ್ ಮಾಡಿದ್ರು ನಾನೂ ಜೊತೆಗಿದ್ದೆ. ಶೋಭಕ್ಕ, ಧಮೇಂಧ್ರ ಪ್ರದಾನ್, ಅಣ್ಣಾ ಮಲೈ ಎಲ್ಲರೂ ಫೋನ್ ಮಾಡಿದ್ರು, ನಾನೂ ಅರುಣಣ್ಣನ ಜೊತೆಗಿದ್ದೆ. ಅವರೆಲ್ಲ ಹೇಳಿದ್ದು, ‘ಅರ್ಧಗಂಟೆಯಲ್ಲಿ ಅಮಿತ್ ಶಾ ಫೋನ್ ಮಾಡ್ತಾರೆ, ನೀವು ಆಯ್ತು ಸರ್ ನಾವು ವಿದ್ ಡ್ರಾ ಮಾಡಿಕೊಳ್ತೇವೆ ಹೇಳಬೇಕು. ಇಲ್ಲಿನ ನಾಟಕಗಳನ್ನು ಅವರಲ್ಲಿ ಹೇಳಬಾರದು. ನಿಮಗೂ ಜನಬೆಂಬಲವಿದೆ. ನೆಗೋಷಿಯೇಷನ್ಸಲ್ಲಿ ನೀವು ಅವರತ್ರ ಡಿಸ್ಕಸ್ ಮಾಡಬಾರದು’ ಎಂದು. ಆದರೆ ಅದಕ್ಕೆ ನಾವು, ಸಾರಿ ಆಗೋದಿಲ್ಲ. ಅರ್ಧಗಂಟೆಯಲ್ಲಿ ಫೋನ್ ಮಾಡಲಿ, ಖಂಡಿತವಾಗಿಯೂ ಅವರ ಜೊತೆ ಮಾತನಾಡುತ್ತೇವೆ. ಇಲ್ಲಿನ ವಸ್ತುಸ್ಥಿತಿಯನ್ನು ಸ್ಪಷ್ಟವಾಗಿ ಅವರತ್ರ ಹೇಳುತ್ತೇವೆ ಎಂದು ಹೇಳಿದೆವು. ಯಡಿಯೂರಪ್ಪಾಜಿ ದಯವಿಟ್ಟು ಕ್ಷಮಿಸಿ ನಾಮಪತ್ರ ವಾಪಸ್ ತೆಗೆದುಕೊಳ್ಳಲು ಆಗುವುದಿಲ್ಲ. ನಿಮ್ಮಿಂದ ಸಾಧ್ಯವಿದ್ರೆ ನಮಗೆ ಸಿ ಫಾರಂ ಕೊಡಿಸಿ ಎಂದು ಅರುಣಣ್ಣ ಹೇಳಿದಾಗ ಯಡಿಯೂರಪ್ಪ.. ಇಲ್ಲಪ್ಪ ನೋಡಪ್ಪಾ, ಅದೆಲ್ಲ ಆಗಲ್ಲ. ಕೇಂದ್ರದವರು ಅದಕ್ಕೆಲ್ಲ ಒಪ್ಪಲ್ಲ, ನಿನ್ನ ಜೊತೆ ನಾನಿದ್ದೇನೆ. ನಿನ್ನ ಜವಾಬ್ದಾರಿ ನಾನು ಹೊತ್ಕೋಳ್ತೀನಿ, ನಿನಗೆ ಅನ್ಯಾಯವಾಗಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದ್ರಿಂದ ದಯವಿಟ್ಟು ವಿದ್ ಡ್ರಾ ಮಾಡ್ಕೋಪ್ಪ, ನಾನಿದ್ದೇನೆ. ನನ್ನನ್ನು ನಂಬು’ ಎಂದು ಹೇಳಿದ್ರು. ಇಲ್ಲ ಯಡಿಯೂರಪ್ಪಾಜಿ ಇಷ್ಟು ಸಹಸ್ರ ಸಂಖ್ಯೆ ಕಾರ್ಯಕರ್ತರು ನನ್ನನ್ನು ನಿಲ್ಲಿಸಿದ್ದಾರೆ ನಾನು ಮಾತ್ರ ಈ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಅರುಣಣ್ಣ ಅವರಲ್ಲಿ ಹೇಳಿದರು. ಆಯ್ತು ನಿನ್ನಿಷ್ಟ ಎಂದು ಯಡಿಯೂರಪ್ಪ ಮಾತು ನಿಲ್ಲಿಸಿದರು. ಇದೇ ರೀತಿ ಎಲ್ಲ ನಾಯಕರು ಮಾಡಿದ್ರು. ನಾಯಕರಿಗೆ ಇಲ್ಲಿನ ಗ್ರೌಂಡ್ ರಿಯಾಲಿಟಿ ಗೊತ್ತುಂಟು ಹಾಗಾದರೆ ಇವರಿಗೆ ಟಿಕೆಟ್ ಕೊಡಲು ಯಾವುದು ಅಡ್ಡ ಬರ‍್ತಾ ಉಂಟು ಸ್ನೇಹಿತರೇ ಆಲೋಚನೆ ಮಾಡಬೇಕು. ಯಾರನ್ನೂ ನಾನು ದೂಷಿಸುತ್ತಿಲ್ಲ. ನಮ್ಮ ಮುಂದೆ ನಗ್ನ ಸತ್ಯ ಇತಿಹಾಸದ ಪುಟಕ್ಕೆ ಹೋದ ವ್ಯವಸ್ಥೆ ಪುತ್ತೂರಲ್ಲಿ ನಡೆದಿದೆ. ಇದನ್ನು ಮನಗಂಡಾದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲರ ಕಣ್ಮಣಿ, ಹಿಂದೂ ಹೃದಯಸಾಮ್ರಾಟ್, ಎಷ್ಟು ಹೊತ್ತಿಗೆ ಕರೆದರೂ ಒಂದು ಫೋನ್ ಕಾಲ್‌ಗೆ ರಿಸೀವ್ ಮಾಡಿ ಸಂಪಾಜೆ ಘಾಟಿಯಾದರೂ ಸರಿ ಚಾರ್ಮಾಡಿ ಘಾಟಿಯಾದರೂ ಸರಿ ಅರುಣಣ್ಣ ಕಚ್ಚೆ ಕಟ್ಕೊಂಡು ಅಲ್ಲಿಗೆ ಬರ‍್ತಾರೆ. ಇಂತಹ ವ್ಯಕ್ತಿ ನಮಗೆ ಶಾಸಕನಾಗಿಯೋ, ಲೋಕಸಭಾ ಸದಸ್ಯನಾಗಿಯೋ ಬೇಕೋ ಅಥವಾ ಫೋನ್ ಮಾಡಿದ ಕೂಡಲೇ ನಾನು ಅವರಿಗೆ ಹೇಳ್ತೇನೆ. ಅವರು ಬರ‍್ತಾರೆ. ನಾಳೆ ಬೆಳಿಗ್ಗೆ 8 ಗಂಟೆಗೆ ನೋಡುವ. ನಾನು ಬಂದರೆ ಹೇಳ್ತೇನೆ. ಆಯ್ತು ನೋಡೋಣ ಎಂದು ಹೇಳುವವರು ಬೇಕಾ? ಎನ್ನುವುದನ್ನು ನಾವು ಆಲೋಚನೆ ಮಾಡ್ಕೋಬೇಕು. ನಮ್ಮ ನಾಯಕರು ಇದನ್ನು ಅರ್ಥಮಾಡಿಕೊಂಡು ಮಂಗಳೂರು ಲೋಕಸಭೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಅರುಣಣ್ಣನಿಗೆ ಅಭ್ಯರ್ಥಿಯಾಗಿ ಅವಕಾಶ ಮಾಡಿಕೊಡಬೇಕು ಎಂದು ಶ್ರೀರಾಮನನ್ನು, ನಿಮ್ಮೆಲ್ಲರನ್ನು ಸಾಕ್ಷಿಯಾಗಿಟ್ಟುಕೊಂಡು ಕೇಳ್ತಾ ಇದ್ದೇನೆ ಎಂದು ರಾಜಾರಾಮ ಭಟ್ ಅವರು ಭಾಷಣದ ವೀಡಿಯೋ ವೈರಲ್ ಆಗಿದೆ.