ಪುತ್ತೂರು: ಜಾಗದ ವಿಚಾರದಲ್ಲಿ ನಡೆದ ವಂಚನೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪೈಕಿ ಇಬ್ಬರಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನೆಲ್ಯಾಡಿ ನೆಲ್ಲಿತ್ತಡ್ಕ ಅಣ್ಣು ಎಂಬವರ ಪತ್ನಿ ಅವಿದ್ಯಾವಂತರಾಗಿರುವ ಸುಂದರಿ ಎಂಬವರ ಜಾಗವನ್ನು ಪೂವಪ್ಪ ಗೌಡ ಎಂಬವರು ವಂಚನೆ ಮಾಡಿ ಪಡೆದು, ತಿಮ್ಮಪ್ಪ ಗೌಡ ಎಂಬವರಿಗೆ ಮಾರಾಟ ಮಾಡಿದ್ದರು. ತಿಮ್ಮಪ್ಪ ಗೌಡ ಅವರು ಸುಂದರಿ ಅವರ ಜಾಗಕ್ಕೆ ಅಧಿಕಾರ ಪತ್ರ ಮಾಡಿ ಬ್ಯಾಂಕ್ನಿಂದ ಸಾಲವನ್ನು ಪಡೆದು ಸುಂದರಿ ಅವರಿಗೆ ವಂಚಿಸಿದ್ದರು. ಈ ಕುರಿತು ಸುಂದರಿ ಅವರು ವಿಚಾರಿಸಿದಾಗ ಪೂವಪ್ಪ ಗೌಡ ಮತ್ತು ತಿಮ್ಮಪ್ಪ ಗೌಡ ಮತ್ತು ಸಾಲಕ್ಕೆ ಜಾಮೀನು ನೀಡಿದ ಮಂಜುನಾಥ್ ರೈ ಅವರು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೂವಪ್ಪ ಗೌಡ, ತಿಮ್ಮಪ್ಪ ಗೌಡ, ಮಂಜುನಾಥ್ ರೈ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳ ಪೈಕಿ ಕೋಡಿಂಬಾಳದ ಪೂವಪ್ಪ ಗೌಡ ಮತ್ತು ಗೋಳಿತ್ತೊಟ್ಟಿನ ತಿಮ್ಮಪ್ಪ ಗೌಡ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಭಾಸ್ಕರ್ ಗೌಡ ಕೋಡಿಂಬಾಳ, ಮಾಧವ ಪೂಜಾರಿ, ನಾರಾಯಣ, ರಾಕೇಶ್ ಬಲ್ನಾಡು ವಾದಿಸಿದರು.