ಉಪ್ಪಿನಂಗಡಿ: ಆಧಾರ್ ಸೇವೆಗೆ ನಿಯುಕ್ತಿಗೊಂಡ ಅಂಚೆ ಇಲಾಖೆಯ ಸಿಬ್ಬಂದಿಯೋರ್ವ ಸತಾಯಿಸುವ ವರ್ತನೆ ತೋರಿ ಎಳೆ ವಯಸ್ಸಿನ ಮಕ್ಕಳನ್ನು ಮಧ್ಯಾಹ್ನದಿಂದ ಸಾಯಂಕಾಲದವರೆಗೆ ಕಾಯುವಂತೆ ಮಾಡಿ, ಬಳಿಕ ತಪ್ಪು ಮಾಹಿತಿಯನ್ನು ಸೇರಿಸಿ ಸಮಸ್ಯೆಗೆ ಒಳಪಡಿಸಿದ ಪ್ರಕರಣದಲ್ಲಿ ಮಂಗಳವಾರದಂದು ಇಲಾಖಾ ತನಿಖೆ ನಡೆಸಿ ಸಂತ್ರಸ್ತ ಮಕ್ಕಳಿಗೆ ಸಮರ್ಪಕ ಆಧಾರ್ ಅಪ್ಡೇಟ್ ಮಾಡಿಸಿ ನ್ಯಾಯ ಒದಗಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಉಪ್ಪಿನಂಗಡಿ ಉಪ ಅಂಚೆ ಕಚೇರಿಯಲ್ಲಿ ಆಧಾರ್ ಸೇವಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಮೇ 25 ರಂದು ಟೋಕನ್ ನೀಡಿಕೆಯಲ್ಲಿ ಲೋಪದೋಷವನ್ನು ಪ್ರಶ್ನಿಸಿದ ಕಾರಣಕ್ಕೆ ಆಕ್ರೋಶಗೊಂಡು ಇಬ್ಬರು ಮಕ್ಕಳನ್ನು ಮಧ್ಯಾಹ್ನದಿಂದ ಸಾಯಂಕಾಲದ ವರೆಗೆ ಕಾಯುವಂತೆ ಮಾಡಿ ಬಳಿಕ ಇವತ್ತು ಸೇವೆ ಒದಗಿಸಲು ಸಮಯಾವಕಾಶವಿಲ್ಲ ಎಂಬ ಕಾರಣ ನೀಡಿ ನಾಳೆ ಬರುವಂತೆ ತಾಕೀತು ಮಾಡಿದ ಬಗ್ಗೆ ಪೋಸ್ಟ್ ಮಾಸ್ಟರ್‌ಗೆ ದೂರು ಸಲ್ಲಿಸಲಾಗಿತ್ತು. ಆ ಬಳಿಕ ಸಿಬ್ಬಂದಿ ಆಧಾರ್ ಅಪ್ಡೇಟ್ ಸೇವೆ ನೀಡಿದ್ದರಾದರೂ ಅನಗತ್ಯವಾಗಿ, ಮೊದಲೇ ಇದ್ದ ಸಮರ್ಪಕ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ ಗ್ರಾಹಕರಲ್ಲಿ ಇಲ್ಲದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮಕ್ಕಳಿಗೆ ಸಮಸ್ಯೆ ಸೃಷ್ಟಿಯಾಗುವಂತೆ ಮಾಡಿದ್ದಾಗಿ ಆರೋಪ ವ್ಯಕ್ತವಾಗಿತ್ತು.
ಈ ಬಗ್ಗೆ ಅಂಚೆ ಇಲಾಖಾ ವರಿಷ್ಟರಿಗೆ ಸಲ್ಲಿಸಲ್ಪಟ್ಟ ದೂರಿನನ್ವಯ ಬೆಳ್ತಂಗಡಿ ವಲಯ ಅಂಚೆ ಇಲಾಖಾ ನಿರೀಕ್ಷಕರ ನೇತೃತ್ವದಲ್ಲಿ ಜೂ. 13 ರಂದು ಪ್ರಕರಣದ ಸಮಗ್ರ ತನಿಖೆ ನಡೆಸಲಾಗಿ ಗ್ರಾಹಕರಿಗೆ ಅನುಚಿತ ಸೇವೆ ನೀಡಿದ ಸಿಬ್ಬಂದಿಗೆ ಎಚ್ಚರಿಕೆ ನೀಡಿ, ಸಂತ್ರಸ್ತ ಮಕ್ಕಳಿಬ್ಬರಿಗೂ ಸಮರ್ಪಕ ಆಧಾರ್ ಅಪ್ಡೇಟ್ ಮಾಡಿಸುವ ಮೂಲಕ ನ್ಯಾಯವನ್ನು ಒದಗಿಲಾಯಿತು. ಸಿಬ್ಬಂದಿಯ ಸತಾಯಿಸುವ ವರ್ತನೆಯ ಬಗ್ಗೆ ಗ್ರಾಹಕರು ಆಧಾರ್ ಪ್ರಾಧಿಕಾರಕ್ಕೂ ದೂರು ಸಲ್ಲಿಸಿದ್ದು, ಅಲ್ಲಿಂದಲೂ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥ ಸಿಬ್ಬಂದಿಗೆ ಸೂಕ್ತ ಎಚ್ಚರಿಕೆಯನ್ನು ನೀಡಲಾಗಿದೆ ಎಂದೂ, ಸೇವಾ ನ್ಯೂನ್ಯತೆಗಾಗಿ ಕ್ಷಮೆ ಯಾಚಿಸಿ ಗ್ರಾಹಕರಿಗೆ ಪತ್ರ ರವಾನಿಸಿದ್ದಾರೆ.