ನಿಡ್ಪಳ್ಳಿ; ಗ್ರಾಮದ ಕೂಟೇಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ಸೇತುವೆ ಬಳಿ ರಸ್ತೆಯ ಮೇಲೆ ನೀರು ತುಂಬಿ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆಯಾಗಿ ಪರಿಣಮಿಸಿದೆ.
ಜೋರು ಮಳೆ ಬಂದಾಗ ರಸ್ತೆಯ ಮೇಲಿನ ನೀರು ಹೊರಗೆ ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದಿರುವುದರಿಂದ ನೀರು ನಿಂತು ರಸ್ತೆ ಕೆರೆಯಂತಾಗಿದೆ. ಇದರಿಂದ ಪಾದಚಾರಿಗಳಿಗೆ ನಡೆದುಕೊಂಡು ಹೋಗಲೂ ತೊಂದರೆಯಾಗಿದೆ. ರಸ್ತೆಯ ಎರಡೂ ಕಡೆ ಅಡಿಕೆ ತೋಟ ಇರುವುದರಿಂದ ನೀರನ್ನು ಬಿಟ್ಟರೆ ಕೃಷಿ ತೋಟಕ್ಕೆ ತೊಂದರೆಯಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಇದಕ್ಕೆ ಸರಿಯಾದ ವ್ಯವಸ್ಥೆ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೊದಲೇ ಮನವರಿಕೆ ಮಾಡಿದ್ದೆವು: ರಸ್ತೆಯ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದಿದ್ದರೆ ಮಳೆಗಾಲದಲ್ಲಿ ಸಮಸ್ಯೆಯಾದೀತು ಎಂದು ಮೊದಲೇ ಇಂಜಿನಿಯರ್‌ರವರಲ್ಲಿ ಹೇಳಿದ್ದೆವು. ರಸ್ತೆಯ ಎರಡೂ ಕಡೆ ತೋಟ ಇರುವುದರಿಂದ ಬದಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಿಲ್ಲ. ನೀರು ಸೇತುವೆಯ ಹತ್ತಿರದಲ್ಲಿ ಕೆಳಗೆ ಬೀಳುವಂತೆ ಮಾಡ ಬೇಕಾಗಿದೆ. ಕೂಡಲೇ ವ್ಯವಸ್ಥೆ ಮಾಡದಿದ್ದರೆ ರಸ್ತೆಯ ತಡೆಗೋಡೆಗೂ ಅಪಾಯವಿದೆ ಎಂದು ಸ್ಥಳೀಯ ವೆಂಕಪ್ಪ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.